ಸೋಮವಾರ, ಮಾರ್ಚ್ 1, 2021
28 °C

ಕೋವಿಶೀಲ್ಡ್‌ ಉತ್ಪಾದನಾ ಸಂಸ್ಥೆ ಪುಣೆಯ ಸೀರಂ‌ ಇನ್‌ಸ್ಟಿಟ್ಯೂಟ್‌ನಲ್ಲಿ ಬೆಂಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುಣೆ: ಭಾರತದಲ್ಲಿ ತುರ್ತು ಬಳಕೆಗೆ ಅನುಮತಿ ಪಡೆದಿರುವ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ಲಸಿಕೆ ಕೋವಿಶೀಲ್ಡ್‌ನ ತಯಾರಕ ಸಂಸ್ಥೆ ಪುಣೆಯ 'ಸೀರಂ‌ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ'ದ ಸಂಕೀರ್ಣದಲ್ಲಿ ಗುರುವಾರ ಬೆಂಕಿ ಕಾಣಿಸಿಕೊಂಡಿದೆ.

ಸಂಸ್ಥೆಯ ಆವರಣದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಬೆಂಕಿಕಾಣಿಸಿಕೊಂಡಿದೆ. ಆದರೆ, ಲಸಿಕೆ ಉತ್ಪಾದನೆಯಾಗುತ್ತಿರುವ ಭಾಗವು ಸುರಕ್ಷಿತವಾಗಿದೆ ಎಂದು  ಸಂಸ್ಥೆಯ ಮೂಲಗಳು ತಿಳಿಸಿವೆ.

ಸಂಸ್ಥೆಯ ಆವರಣದಲ್ಲಿ ಹೊಗೆ ಮೇಲೇಳುತ್ತಿರುವುದನ್ನು ಪ್ರತ್ಯಕ್ಷದರ್ಶಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಹಾನಿಯ ಬಗ್ಗೆ ಇನ್ನಷ್ಟೇ ಮಾಹಿತಿ ಸಿಗಬೇಕಿದೆ.

ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ. ಸ್ಥಳಕ್ಕೆ ಒಂದು ಎನ್‌ಡಿಆರ್‌ಎಫ್‌ ತುಕಡಿ,  ಕನಿಷ್ಠ 10 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ನಿಯೋಜನೆಗೊಂಡಿವೆ. ಲಸಿಕೆ ಇರುವ ಮತ್ತು ಉತ್ಪಾದನೆಯಾಗುತ್ತಿರುವ ಕಟ್ಟಡ ಸುರಕ್ಷಿತವಾಗಿದೆ ಎನ್ನಲಾಗಿದೆ. 

***

ಬೆಂಕಿ ನಂದಿಸಿರುವ ಬಗ್ಗೆ ನಮಗೆ ಮಾಹಿತಿ ಲಭ್ಯವಾಗಿದೆ. ಯಾವುದೇ ಪ್ರಾಣಾಪಾಯ ಸಂಭಭವಿಸಿಲ್ಲ. ಆದರೆ ಆರು ಮಂದಿಯನ್ನು ರಕ್ಷಿಸಲಾಗಿದೆ. ವಿದ್ಯುತ್‌ ಅವಘಡದಿಂದ ಬೆಂಕಿ ಕಾಣಿಸಿಕೊಂಡಿರುವ ಸಾಧ್ಯತೆಗಳಿವೆ. ಈ ಬಗ್ಗೆ ಅದರ್‌ ಪೂನಾವಾಲಾ ಅವರ ಬಳಿ ನಾನು ಮಾತನಾಡಿದ್ದೇನೆ. ಲಸಿಕೆ ತಯಾರಕಾ ಘಟಕದಲ್ಲಿ ಬೆಂಕಿ ಹೊತ್ತಿಲ್ಲ. 

- ಉದ್ಧವ ಠಾಕ್ರೆ, ಮಹಾರಾಷ್ಟ ಮುಖ್ಯಮಂತ್ರಿ  
 

ಪ್ರತಿಯೊಬ್ಬರ ಆತಂಕ ಮತ್ತು ಪ್ರಾರ್ಥನೆಗೆ ನಾನು ಧನ್ಯವಾದ ಅರ್ಪಿಸುತ್ತೇನೆ. ಗಮನಿಸಬೇಕಾದ ವಿಷಯವೆಂದರೆ,  ಅಲ್ಲಿ ಈ ವರೆಗೆ ಯಾವುದೇ ಸಾವು ನೋವು ಸಂಭವಿಸಿಲ್ಲ. ಆದರೆ ಕಟ್ಟಡದ ಕೆಲ ಮಹಡಿಗಳು ಸುಟ್ಟುಹೋಗಿದೆ. ಕೋವಿಶೀಲ್ಡ್‌ ಉತ್ಪಾದನೆಗೆ ಯಾವುದೇ ತೊಂದರೆಯಾಗಿಲ್ಲ ಎಂಬುದನ್ನು ನಾನು ಸಾರ್ವಜನಿಕರಿಗೆ ಮತ್ತು ಸರ್ಕಾರಕ್ಕೆ ಖಚಿತಪಡಿಸಲು ಇಚ್ಛಿಸುತ್ತೇನೆ. ಇಂಥ ದುರ್ಘಟನೆಗಳು ನಡೆಯಬಹುದಾದ ಮುನ್ಸೂಚನೆಯ ಹಿನ್ನೆಲೆಯಲ್ಲಿ ಸಂಸ್ಥೆಯಲ್ಲಿ ಬಹು ಉತ್ಪಾದನಾ ವ್ಯವಸ್ಥೆಯ ಕಟ್ಟಡವನ್ನು ನಾವು ಹೊಂದಿದ್ದೇವೆ. 

- ಅದರ್‌ ಪೂನಾವಾಲ, ಸೀರಮ್‌ ಇನ್‌ಸ್ಟಿಟ್ಯೂಟ್ ಆಫ್‌ ಇಂಡಿಯಾದ ಇಸಿಒ, ಮಾಲೀಕ 
 

ಪುಣೆಯ ಮಂಜಿರಿಯಲ್ಲಿರುವ ಔಷಧ ತಯಾರಕಾ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಲ್ಲಿ ಔಷಧ ತಯಾರಿಕೆ ನಡೆಯುತ್ತಿರಲಿಲ್ಲ. ಆದರೆ, ಮುಂದಿನ ದಿನಗಳಲ್ಲಿ ಅಲ್ಲಿ ತಯಾರಿಕೆ ಕೈಗೊಳ್ಳಲು ಉದ್ದೇಶಿಸಲಾಗಿತ್ತು. ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ. ಲಸಿಕೆ ತಯಾರಿಕಾ ಘಟಕಕ್ಕೆ ತೊಂದರೆಯಾಗಿಲ್ಲ. ಸುರಕ್ಷಿತವಾಗಿದೆ.

- ಪುಣೆ ಪೊಲೀಸ್‌ ಆಯುಕ್ತ 

 

ಸೀರಂ ಇನ್‌ಸ್ಟಿಟ್ಯೂಟ್‌ನಲ್ಲಿ ಬೆಂಕಿ ನಂದಿಸಲಾಗಿದೆ. ಯಾವುದೇ ಪ್ರಾಣಾಪಾಯ ಸಂಭಭವಿಸಿಲ್ಲ. ಬೆಂಕಿ ಹೇಗೆ ಹೊತ್ತಿಕೊಂಡಿತು ಎಂಬುದು ಇನ್ನು ಗೊತ್ತಾಗಿಲ್ಲ. 

-ಪ್ರಶಾಂತ್‌ ರಣ್‌ಪೈಸೆ, ಮುಂಬೈ ಮಹಾನಗರ ಪಾಲಿಕೆಯ ಅಗ್ನಿಶಾಮಕ ವಿಭಾಗದ ಮುಖ್ಯಸ್ಥ 
 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು