ಮಂಗಳವಾರ, ಅಕ್ಟೋಬರ್ 26, 2021
23 °C
ಸ್ವಚ್ಛ ಭಾರತ ಮಿಷನ್‌–ನಗರ, ಅಮೃತ್‌: ಎರಡನೇ ಹಂತಕ್ಕೆ ಚಾಲನೆ ನೀಡಿದ ಪ್ರಧಾನಿ ಮೋದಿ

ಸ್ವಚ್ಛ ಭಾರತ ಮಿಷನ್‌| ಕಸಮುಕ್ತ ನಗರ, ಸುರಕ್ಷಿತ ನೀರಿನ ಭರವಸೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಸ್ವಚ್ಛ ಭಾರತ ಮಿಷನ್‌–ನಗರ ಮತ್ತು ಅಮೃತ್‌ (ಅಟಲ್‌ ಮಿಷನ್‌ ಫಾರ್‌ ರಿಜುವೆನೇಷನ್‌ ಎಂಡ್‌ ಅರ್ಬನ್‌ ಟ್ರಾನ್ಸ್‌ಫಾರ್ಮೇಷನ್‌) ಎರಡನೇ ಹಂತದ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಚಾಲನೆ ನೀಡಿದ್ದಾರೆ. ನಗರಗಳನ್ನು ಕಸಮುಕ್ತಗೊಳಿಸುವುದು ಮತ್ತು ನೀರಿನ ಭದ್ರತೆ ಒದಗಿಸುವುದು ಈ ಯೋಜನೆಗಳ ಉದ್ದೇಶ. 

ಚರಂಡಿ ನೀರನ್ನು ಸಂಸ್ಕರಿಸಿಯೇ ನದಿಗೆ ಬಿಡುವುದನ್ನು ಖಾತರಿಪಡಿಸುವುದು ಈ ಯೋಜನೆಗಳ ಮತ್ತೊಂದು ಗುರಿ. ದೆಹಲಿಯಲ್ಲಿರುವ ಅಂಬೇಡ್ಕರ್‌ ಅಂತರರಾಷ್ಟ್ರೀಯ ಕೇಂದ್ರದಲ್ಲಿ ಕಾರ್ಯಕ್ರಮ ನಡೆಯಿತು. ಯೋಜನೆಗಳ ಹೊಸ ಹಂತಗಳು ಅಂಬೇಡ್ಕರ್‌ ಅವರ ಕನಸುಗಳನ್ನು ಸಾಕಾರಗೊಳಿಸು ವಲ್ಲಿ ಮಹತ್ವದ ಹೆಜ್ಜೆಗಳು ಎಂದೂ ಮೋದಿ ಹೇಳಿದರು. 

‘ಅಸಮಾನತೆ ನಿರ್ಮೂಲನೆ ಮಾಡಲು ನಗರಗಳ ಅಭಿವೃದ್ಧಿ ಅತ್ಯಗತ್ಯ ಎಂದು ಬಾಬಾಸಾಹೇಬ್‌ ಅವರು ನಂಬಿದ್ದರು. ಅಂಬೇಡ್ಕರ್‌ ಕೇಂದ್ರದಲ್ಲಿಯೇ ಈ ಕಾರ್ಯಕ್ರಮ ನಡೆಸಲು ನಮಗೆ ಸಾಧ್ಯವಾಗಿದ್ದು ಸುದೈವ’ ಎಂದು ಮೋದಿ ಹೇಳಿದರು. 

ದೇಶದಲ್ಲಿ ಪ‍್ರತಿ ದಿನ ಒಂದು ಲಕ್ಷ ಟನ್‌ ತ್ಯಾಜ್ಯವನ್ನು ಸಂಸ್ಕರಿಸಲಾಗುತ್ತಿದೆ. ನಗರಗಳಲ್ಲಿ ಇರುವ ಕಸದ ಗುಡ್ಡೆಗಳನ್ನು ಸಂಸ್ಕರಿಸಲಾಗುವುದು. ಎರಡು ಯೋಜನೆಗಳ ಹೊಸ ಎರಡು ಹಂತ ಗಳಲ್ಲಿ ಕಸದ ಗುಡ್ಡೆಗಳನ್ನು ಸಂಪೂರ್ಣವಾಗಿ ನಿವಾರಿಸಲಾಗುವುದು ಎಂದು ಮೋದಿ ಅವರು ಭರವಸೆ ಕೊಟ್ಟರು. 

ದೇಶವನ್ನು ಬಯಲು ಶೌಚಮುಕ್ತ ಮಾಡುವುದಾಗಿ ಜನರು 2014ರಲ್ಲಿ ಪ್ರತಿಜ್ಞೆ ಮಾಡಿದ್ದರು. 10 ಕೋಟಿಗೂ ಹೆಚ್ಚು ಶೌಚಾಲಯಗಳ ನಿರ್ಮಾಣದ ಮೂಲಕ ಆ ಪ್ರತಿಜ್ಞೆಯನ್ನು ಈಡೇರಿಸಲಾಗಿದೆ ಎಂದು ಹೇಳಿದರು. 

ಅಮೃತ್‌ ಯೋಜನೆಯ ಎರಡನೇ ಹಂತದಲ್ಲಿ ತ್ಯಾಜ್ಯ ಮತ್ತು ಘನತ್ಯಾಜ್ಯ ನಿರ್ವಹಣಾ ವ್ಯವಸ್ಥೆಯನ್ನು ಉತ್ತಮಪಡಿಸಲಾಗುವುದು. ನಗರಗಳನ್ನು ಸುರಕ್ಷಿತ ನೀರು ಲಭ್ಯವಿರುವ ನಗರಗಳಾಗಿ ಮಾಡಲಾಗುವುದು ಎಂದು ಪ್ರಧಾನಿ ವಿವರಿಸಿದರು. 

ಸ್ವಚ್ಛತಾ ಅಭಿಯಾನವನ್ನು ಯುವ ಜನರು ತಮ್ಮ ಕೈಗೆತ್ತಿಕೊಂಡಿದ್ದಾರೆ. ಮಿಠಾಯಿ ಸುತ್ತಿದ ಕಾಗದಗಳನ್ನು ಈಗ ನೆಲಕ್ಕೆ ಎಸೆಯುವುದಿಲ್ಲ. ಅವುಗಳನ್ನು ತಮ್ಮ ಜೇಬಲ್ಲಿ ಇರಿಸುತ್ತಾರೆ. ಎಲ್ಲೆಂದರಲ್ಲಿ ಕಸ ಬಿಸಾಕಬೇಡಿ ಎಂದು ದೊಡ್ಡವರಿಗೆ ಸಣ್ಣ ಮಕ್ಕಳು ಹೇಳುತ್ತಿದ್ದಾರೆ ಎಂದು ಮೋದಿ ಹೇಳಿದರು. 

ಸ್ವಚ್ಛತೆ ಕಾಪಾಡುವುದು ಒಂದು ದಿನ, ಒಂದು ಪಾಕ್ಷಿಕ, ಒಂದು ವರ್ಷಕ್ಕೆ ಅಥವಾ ಕೆಲವೇ ಜನರಿಗೆ ಸೀಮಿತವಾದ ವಿಚಾರ ಅಲ್ಲ. ಇದು ಪ್ರತಿದಿನದ, ಪ್ರತಿ ಪಾಕ್ಷಿಕದ, ಪ್ರತಿ ವರ್ಷದ, ಎಲ್ಲರ ನಿರಂತರವಾದ ಕಾರ್ಯಕ್ರಮವಾಗಿದೆ. ತಲೆಮಾರುಗಳಿಂದ ತಲೆಮಾರುಗಳಿಗೆ ಇದು ಮುಂದುವರಿಯಬೇಕಿದೆ ಎಂದು ಅವರು ವಿವರಿಸಿದರು.

ಸ್ವಚ್ಛ ಭಾರತ ಮಿಷನ್‌–ನಗರ ಹಂತ 2ಕ್ಕೆ ₹1.41 ಲಕ್ಷ ಕೋಟಿ ಅನುದಾನ ನೀಡಲಾಗುವುದು ಎಂದು ಸರ್ಕಾರ ಹೇಳಿದೆ. 

ಯೋಜನೆಯ ಮುಖ್ಯ ಗುರಿ

ಎಲ್ಲ ನಗರಗಳನ್ನು ಕಸ ಮುಕ್ತಗೊಳಿಸುವುದು ಯೋಜನೆಯ ಮುಖ್ಯ ಗುರಿ. ಜತೆಗೆ, ಅಮೃತ್‌ ಯೋಜನೆಯ ಭಾಗವಾಗಿಲ್ಲದ ನಗರಗಳಲ್ಲಿಯೂ ಕಂದು ಮತ್ತು ಕಪ್ಪು ನೀರು ನಿರ್ವಹಣೆ ವ್ಯವಸ್ಥೆ ಅಳವಡಿಸುವುದು. ಎಲ್ಲ ನಗರ ಸ್ಥಳೀಯ ಸಂಸ್ಥೆಗಳನ್ನು ಬಯಲು ಶೌಚಮುಕ್ತ+ ವರ್ಗಕ್ಕೆ ತರುವುದು. ಒಂದು ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆಯ ಪಟ್ಟಣಗಳನ್ನು ಬಯಲು ಶೌಚಮುಕ್ತ++ ವರ್ಗಕ್ಕೆ ತರುವುದು. ಈ ಮೂಲಕ ನಗರ ಪ್ರದೇಶಗಳನ್ನು ಸುರಕ್ಷಿತ ಮತ್ತು ಸ್ವಚ್ಛವಾಗಿಸುವುದು.

ಯಾವುದಕ್ಕೆ ಹೆಚ್ಚು ಒತ್ತು?

l ಘನ ತ್ಯಾಜ್ಯವನ್ನು ಮೂಲದಲ್ಲಿಯೇ ವಿಂಗಡಿಸುವುದು

l ಕಡಿಮೆ ಬಳಕೆ, ಮತ್ತೆ ಮತ್ತೆ ಬಳಕೆ ಹಾಗೂ ಪುನರ್ ಬಳಕೆಗಾಗಿ
ಸಂಸ್ಕರಣೆ ತತ್ವ ಅಳವಡಿಕೆ

l ನಗರಗಳ ಎಲ್ಲ ರೀತಿಯ ಘನ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಿಸುವುದು

l ಕಸ ಸುರಿವ ಹಳೆಯ ಪ್ರದೇಶಗಳಿಗೆ ಪರಿಣಾಮಕಾರಿ ಘನ ತ್ಯಾಜ್ಯ ನಿರ್ವಹಣೆ ತಂತ್ರ ಅಳವಡಿಸುವುದು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು