ಶುಕ್ರವಾರ, ಮಾರ್ಚ್ 31, 2023
26 °C
ಯೋಗಿ ಆದಿತ್ಯನಾಥ್‌ ಸರ್ಕಾರದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪ

ಉತ್ತರ ಪ್ರದೇಶದ ಮಾಜಿ ರಾಜ್ಯಪಾಲರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲಖನೌ: ಯೋಗಿ ಆದಿತ್ಯನಾಥ್‌ ಸರ್ಕಾರದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪಕ್ಕಾಗಿ ಉತ್ತರ ಪ್ರದೇಶದ ಮಾಜಿ ರಾಜ್ಯಪಾಲ ಅಜೀಜ್‌ ಖುರೇಷಿ ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲಾಗಿದೆ.

ಬಿಜೆಪಿ ನಾಯಕ ಆಕಾಶ್‌ ಕುಮಾರ್‌ ಸಕ್ಸೇನಾ ನೀಡಿದ ದೂರಿನ ಮೇರೆಗೆ ರಾಮಪುರ ಜಿಲ್ಲೆಯ ಸಿವಿಲ್‌ ಲೈನ್ಸ್‌ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ.

‘ಯೋಗಿ ಆದಿತ್ಯನಾಥ್‌ ಸರ್ಕಾರ ರಕ್ತ ಹೀರುವ ರಾಕ್ಷಸ’ ಎಂದು ಖುರೇಷಿ ಹೇಳಿಕೆ ನೀಡಿದ್ದಾರೆ ಎನ್ನುವುದನ್ನು ಸಕ್ಸೇನಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್‌ ಅವರ ಮನೆಗೆ ಭೇಟಿ ನೀಡಿ, ಅವರ ಪತ್ನಿ ತಾಝೀನ್‌ ಫತ್ಮಾ ಅವರ ಜತೆ ಸಮಾಲೋಚನೆ ನಡೆಸಿದ ಬಳಿಕ ಯೋಗಿ ಆದಿತ್ಯನಾಥ್‌ ಸರ್ಕಾರದ ವಿರುದ್ಧ ಖುರೇಷಿ ಈ ಹೇಳಿಕೆ ನೀಡಿದ್ದಾರೆ ಎಂದು ದೂರಿದ್ದಾರೆ.

‘ಖುರೇಷಿ ಅವರ ಹೇಳಿಕೆಯಿಂದ ಎರಡು ಸಮುದಾಯಗಳ ನಡುವೆ ಸಂಘರ್ಷ ಸೃಷ್ಟಿಯಾಗಲಿದೆ. ಇದರಿಂದ, ಸಮಾಜದಲ್ಲಿ ಅಶಾಂತಿ ನೆಲೆಸಲಿದೆ’ ಎಂದು ದೂರಿದ್ದಾರೆ.

ಖುರೇಷಿ ಅವರ ಹೇಳಿಕೆ ಒಳಗೊಂಡಿರುವ ಪೆನ್‌ಡ್ರೈವ್‌ ಅನ್ನು ಸಹ ಪೊಲೀಸರಿಗೆ ನೀಡಲಾಗಿದೆ. ಖುರೇಷಿ ಅವರ ವಿರುದ್ಧ ಸೆಕ್ಷನ್‌ 153ಎ ( ಧರ್ಮಗಳ ಆಧಾರದ ಮೇಲೆ ಎರಡು ಗುಂಪುಗಳ ನಡುವೆ ದ್ವೇಷ ಬಿತ್ತುವುದು), 153ಬಿ (ರಾಷ್ಟ್ರೀಯ ಐಕ್ಯತೆಗೆ ಧಕ್ಕೆ ತರುವುದು), 124ಎ (ದೇಶದ್ರೋಹ) ಮತ್ತು 505(1)(ಬಿ) (ಭಯ ಸೃಷ್ಟಿಸುವ ಉದ್ದೇಶ) ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಖುರೇಷಿ ಅವರ ವಿರುದ್ಧ ಕಾನೂನಿನ ಪ್ರಕಾರ ಕ್ರಮಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕರಾಗಿರುವ ಖುರೇಷಿ (81) ಅವರು, 2014ರಿಂದ 2015ರವರೆಗೆ ಮಿಜೋರಾಂ ರಾಜ್ಯಪಾಲರಾಗಿದ್ದರು. ಕೆಲ ಕಾಲ ಉತ್ತರ ಪ್ರದೇಶದ ರಾಜ್ಯಪಾಲರಾಗಿಯೂ ಕಾರ್ಯನಿರ್ವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು