ಭಾನುವಾರ, ಜೂನ್ 26, 2022
23 °C

ಒಳಗೊಳ್ಳುವಿಕೆ, ಮುಕ್ತ ಇಂಡೋ-ಪೆಸಿಫಿಕ್ ಪ್ರದೇಶದ ಸೃಷ್ಟಿಯು ಕ್ವಾಡ್‌ನ ಗುರಿ: ಮೋದಿ

ಐಎಎನ್‌ಎಸ್‌ Updated:

ಅಕ್ಷರ ಗಾತ್ರ : | |

ಟೋಕಿಯೊ: ‘ಒಳಗೊಳ್ಳುವಿಕೆ ಮತ್ತು ಮುಕ್ತ ಇಂಡೋ-ಪೆಸಿಫಿಕ್ ಪ್ರದೇಶದ ಸೃಷ್ಟಿಯು ಕ್ವಾಡ್‌ನ ಗುರಿಯಾಗಿದೆ. ಕಡಿಮೆ ಅವಧಿಯಲ್ಲಿ ಅದು ವಿಶ್ವ ವೇದಿಕೆಯಲ್ಲಿ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದಾರೆ.

ಜಪಾನ್‌ನ ಟೋಕಿಯೊದಲ್ಲಿ ನಡೆದ ‘ಕ್ವಾಡ್’ ಶೃಂಗಸಭೆಯಲ್ಲಿ ಮಂಗಳವಾರ ಮಾತನಾಡಿದ ಭಾರತದ ಪ್ರಧಾನಿ, ಕ್ವಾಡ್‌ನ ಪ್ರಯತ್ನಗಳು ಒಳಗೊಳ್ಳುವಿಕೆ ಮತ್ತು ಮುಕ್ತ ಇಂಡೋ-ಪೆಸಿಫಿಕ್ ಪ್ರದೇಶವನ್ನು ಉತ್ತೇಜಿಸುವುದೇ ಆಗಿದೆ. ಕ್ವಾಡ್‌ ಸದಸ್ಯ ರಾಷ್ಟ್ರಗಳ ನಡುವಿನ ಪರಸ್ಪರ ನಂಬಿಕೆ ಮತ್ತು ನಿರ್ಣಯವು ಪ್ರಜಾಪ್ರಭುತ್ವ ತತ್ವಗಳಿಗೆ ಪೂರಕವಾಗಿವೆ’ ಎಂದು ಹೇಳಿದರು.

ಅಲ್ಪಾವಧಿಯಲ್ಲಿಯೇ ಕ್ವಾಡ್ ಜಗತ್ತಿನಲ್ಲಿ ಪ್ರಾಮುಖ್ಯತೆ ಗಳಿಸಿಕೊಂಡಿದೆ. ಕೋವಿಡ್ -19 ರ ಪ್ರತಿಕೂಲ ಪರಿಸ್ಥಿತಿಯ ಹೊರತಾಗಿಯೂ, ಲಸಿಕೆ ವಿತರಣೆ, ಹವಾಮಾನ ಬದಲಾವಣೆ ವಿರುದ್ಧ ಕ್ರಮ, ವಿಪತ್ತು ನಿರ್ವಹಣೆ, ಆರ್ಥಿಕ ಸಹಕಾರ ಮತ್ತು ಸಮನ್ವಯವನ್ನು ಕ್ವಾಡ್‌ ಹೆಚ್ಚಿಸಿದೆ. ಇದು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ, ಸಮೃದ್ಧಿ ಮತ್ತು ಸ್ಥಿರತೆಗೆ ಕಾರಣವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

‘ಒಂದೊಳ್ಳೆ ಕಾರ್ಯಕ್ಕೆ ಕ್ವಾಡ್‌ ಪೂರಕ ಶಕ್ತಿಯಾಗಿದೆ. ಇಂಡೋ-ಪೆಸಿಫಿಕ್ ಪ್ರದೇಶದ ಒಳಿತಿಗಾಗಿ ರಚನಾತ್ಮಕ ಕಾರ್ಯಸೂಚಿಯನ್ನು ಅದು ಪ್ರತಿಪಾದಿಸಲಿದೆ’ ಎಂದು ಅವರು ಹೇಳಿದರು.

ಹೊಸದಾಗಿ ಆಯ್ಕೆಯಾದ ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಆಂಥೋನಿ ಅಲ್ಬನೀಸ್ ಅವರನ್ನು ಕ್ವಾಡ್‌ ಸಭೆಯಲ್ಲಿ ಮೋದಿ ಅಭಿನಂದಿಸಿದರು. ‘ನಾನು ಪ್ರಧಾನಿ ಅಲ್ಬನೀಸ್ ಅವರನ್ನು ಅಭಿನಂದಿಸುತ್ತೇನೆ. ಪ್ರಮಾಣವಚನ ಸ್ವೀಕರಿಸಿದ 24 ಗಂಟೆಗಳ ಒಳಗೆ ಅವರು ಕ್ವಾಡ್‌ ಶೃಂಗಕ್ಕೆ ಬಂದಿದ್ದಾರೆ. ಕ್ವಾಡ್‌ ಬಗ್ಗೆ ಅವರಿಗಿರುವ ಬದ್ಧತೆಯನ್ನು ಇದು ತೋರಿಸುತ್ತಿದೆ’ ಎಂದು ಹೇಳಿದರು.

ಜಪಾನಿನ ಪ್ರಧಾನಿ ಫ್ಯೂಮಿಯೊ ಕಿಶಿದಾ ಅವರಿಗೂ ಮೋದಿ ಇದೇ ವೇಳೆ ಧನ್ಯವಾದ ಅರ್ಪಿಸಿದರು.

ಕ್ವಾಡ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಜಪಾನ್ ಪ್ರಧಾನಿ ಅವರ ಆಹ್ವಾನದ ಮೇರೆಗೆ ಎರಡು ದಿನಗಳ ಭೇಟಿಗಾಗಿ ಪ್ರಧಾನಿ ಮೋದಿ ಸೋಮವಾರ ಬೆಳಿಗ್ಗೆ ಟೋಕಿಯೊಗೆ ಆಗಮಿಸಿದರು.

ಪ್ರಧಾನಿ ಮೋದಿ ಅವರು ಇಂದು ಜಪಾನ್‌ ಪ್ರಧಾನಿ ಕಿಶಿದಾ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು