ಮಂಗಳವಾರ, ಜನವರಿ 19, 2021
24 °C

ಒಂಟಿಯಾಗಿ ಹೊರಗೆ ಹೋಗಿದ್ದರಿಂದ ಅತ್ಯಾಚಾರ ನಡೆದಿದೆ: ಮಹಿಳಾ ಆಯೋಗದ ಸದಸ್ಯೆ ವಿವಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬದಾಯುಂ: ಉತ್ತರಪ್ರದೇಶದ ಬದಾಯುಂನಲ್ಲಿ 50 ವರ್ಷದ ಮಹಿಳೆಯ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರೊಬ್ಬರು ಬೇಜವಾಬ್ದಾರಿ ಹೇಳಿಕೆ ನೀಡಿದ್ದು, ಭಾರೀ ಆಕ್ರೋಶಕ್ಕೆ ಎಡೆಮಾಡಿದೆ.

ಸಂಜೆ ಹೊತ್ತಲ್ಲಿ ಆ ಮಹಿಳೆ ಮನೆಯಿಂದ ಹೊರಗೆ ಹೋಗದೇ ಇದ್ದಿದ್ದರೆ ಈ ಘಟನೆಯನ್ನು ತಪ್ಪಿಸಬಹುದಿತ್ತು. "ನಾನು ಮಹಿಳೆಯರಿಗೆ ಪದೇ ಪದೇ ಹೇಳುತ್ತೇನೆ. ಸಂಜೆ ಹೊತ್ತಲ್ಲಿ ಯಾವುದೇ ಕಾರಣಕ್ಕೂ ಮನೆ ಬಿಟ್ಟು ಹೊರಗೆ ಹೋಗಬೇಡಿ," ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಚಂದ್ರಮುಖಿ ದೇವಿ ಹೇಳಿಕೆ ನೀಡಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಭಾನುವಾರ ಮಧ್ಯಾಹ್ನ ದೇವಸ್ಥಾನಕ್ಕೆ ತೆರಳಿದ್ದ ಮಹಿಳೆ ಮೇಲರಗಿದ್ದ ಮೂವರು ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಬಳಿಕ, ಮಹಿಳೆ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದರು.

"ಸಂಜೆ ಸಮಯದಲ್ಲಿ ಆ ಮಹಿಳೆ ಒಬ್ಬಳೆ ದೇವಸ್ಥಾನಕ್ಕೆ ತೆರಳದೆ ಇದ್ದಿದ್ದರೆ ಅಥವಾ ಕುಟುಂಬದ  ಒಂದು ಮಗುವನ್ನು ಜೊತೆಯಲ್ಲಿ ಕರೆದೊಯ್ದಿದ್ದರೂ ಈ ಘಟನೆಯನ್ನು ತಪ್ಪಿಸಬಹುದಿತ್ತು. ಆದರೆ, ಫೋನ್ ಮಾಡಿ ಆಕೆಯನ್ನು ಕರೆಸಿಕೊಳ್ಳಲಾಗಿದೆ. ಹಾಗಾಗಿ, ಇದು ಪೂರ್ವ ನಿಯೋಜಿತ ಕೃತ್ಯ," ಎಂದು ಚಂದ್ರಮುಖಿ ದೇವಿ, ಮಹಿಳೆಯ ಕುಟುಂಬವನ್ನು ಭೇಟಿಯಾದ ನಂತರ ಹೇಳಿಕೆ ನೀಡಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಮಹಿಳೆ ಒಂಟಿಯಾಗಿ ಹೊರಗಡೆ ಹೋಗಿದ್ದರಿಂದಲೇ ಇಂತಹ ಘಟನೆ ನಡೆದಿದೆ ಎಂದು ಮಹಿಳಾ ಆಯೋಗದ ಸದಸ್ಯೆಯೊಬ್ಬರ ಹೇಳಿಕೆ ಕುರಿತಂತೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಮಹಿಳಾ ಆಯೋಗದ ಸದಸ್ಯೆಯ ಹೇಳಿಕೆಯನ್ನು ಖಂಡಿಸಿರುವ ಬಾಲಿವುಡ್ ನಟಿ ಮತ್ತು ನಿರ್ಮಾಪಕಿ ಪೂಜಾ ಭಟ್,  ನಿಮ್ಮ ಪ್ರತಿನಿಧಿ ಕೊಟ್ಟಿರುವ ಹೇಳಿಕೆಯ ಪರ ನಿಲ್ಲುತ್ತೀರಾ? ಎಂದು ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಅವರನ್ನು ಪ್ರಶ್ನಿಸಿದ್ದಾರೆ.

ಪೂಜಾ ಭಟ್‌ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ, ಸದಸ್ಯೆ ಹೇಳಿಕೆ ಬಗ್ಗೆ ವಿಷಾಧ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.

  
"ಮಹಿಳಾ ಆಯೋಗದ ಸದಸ್ಯೆ ಏಕೆ? ಮತ್ತು ಹೇಗೆ? ಇಂತಹ ಹೇಳಿಕೆ ನೀಡಿದರು ಎಂಬುದು ನನಗೆ ಗೊತ್ತಾಗುತ್ತಿಲ್ಲ. ಮಹಿಳೆಯರಿಗೆ ತಮ್ಮ ಇಚ್ಛಾನುಸಾರ ಎಲ್ಲಿಗಾದರೂ, ಯಾವ ಸಮಯದಲ್ಲಾದರೂ ಹೋಗುವ ಹಕ್ಕಿದೆ.  ಇದೊಂದು ಸಮಾಜ, ಇಲ್ಲಿನ ಸ್ಥಳಗಳನ್ನು ಮಹಿಳೆಯರಿಗೆ ಸುರಕ್ಷಿತವಾಗಿರುವಂತೆ ನೋಡಿಕೊಳ್ಳುವುದು ರಾಜ್ಯ ಸರ್ಕಾರದ ಜವಾಬ್ದಾರಿ," ಎಂದು ಟ್ವೀಟ್ ಮಾಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು