ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದಲ್ಲಿ ಕೊರೊನಾ ವೈರಸ್‌ನ ಹೊಸ ರೂಪಾಂತರ ತಳಿಗಳು ಪತ್ತೆ

Last Updated 24 ಮಾರ್ಚ್ 2021, 10:40 IST
ಅಕ್ಷರ ಗಾತ್ರ

ಬೆಂಗಳೂರು: ಮಹಾರಾಷ್ಟ್ರದಲ್ಲಿ 'ಸಾರ್ಸ್‌–ಕೋವ್–2'(SARS-CoV-2) ಕೊರೊನಾ ವೈರಸ್‌ನ ರೂಪಾಂತರ ತಳಿಗಳು ಪತ್ತೆಯಾಗಿರುವುದಾಗಿ ತಿಳಿದು ಬಂದಿದೆ.

'ಮಹಾರಾಷ್ಟ್ರದಿಂದ ಕಳುಹಿಸಲಾದ ಕೋವಿಡ್‌–19 ದೃಢಪಟ್ಟ ಮಾದರಿಗಳ ವಂಶವಾಹಿ ರಚನೆಗಳ ವಿಶ್ಲೇಷಣೆ ನಡೆಸಲಾಗಿದ್ದು, 2020ರ ಡಿಸೆಂಬರ್‌ನಲ್ಲಿ ವೈರಸ್‌ ರಚನೆಗಳಿಗೂ ಈಗಿನ ಮಾದರಿಗಳಲ್ಲಿನ ರಚನೆಗಳಿಗೂ ಹೋಲಿಕೆ ಮಾಡಲಾಗಿದೆ. ಕೊರೊನಾ ವೈರಸ್‌ನ ಇ484ಕ್ಯು ಮತ್ತು ಎಲ್‌452ಆರ್‌ ರೂಪಾಂತರಗಳು ಹೆಚ್ಚಿರುವುದು ಪತ್ತೆಯಾಗಿದೆ. ವಿಶ್ಲೇಷಣೆಗೆ ಒಳಪಡಿಸಲಾದ ಮಾದರಿಗಳ ಪೈಕಿ ಶೇ 15ರಿಂದ 20ರಷ್ಟು ಮಾದರಿಗಳಲ್ಲಿ ಈ ಹೊಸ ರೂಪಾಂತರಿ ವೈರಸ್‌ಗಳು ಪತ್ತೆಯಾಗಿವೆ. ಈ ಹಿಂದೆ ನೀಡಿರುವ ತಳಿಗಳ ಮಾಹಿತಿಯೊಂದಿಗೆ ರೂಪಾಂತರಗೊಂಡ ವೈರಸ್‌ಗಳು ತಾಳೆಯಾಗುತ್ತಿಲ್ಲ' ಎಂದು ದೇಶದಲ್ಲಿ ಕೊರೊನಾ ವೈರಸ್‌ ಬಗ್ಗೆ ವಿಶ್ಲೇಷಿಸುತ್ತಿರುವ ಐಎನ್‌ಎಸ್‌ಎಸಿಒಜಿ ಪ್ರಕಟಣೆಯಲ್ಲಿ ತಿಳಿಸಿದೆ.

ಕೇರಳದ ಎಲ್ಲ 14 ಜಿಲ್ಲೆಗಳಿಂದ 2,032 ಮಾದರಿಗಳನ್ನು ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಕೊರೊನಾ ವೈರಸ್‌ನ 'ಎನ್‌440ಕೆ' ರೂಪಾಂತರ ತಳಿಯು 11 ಜಿಲ್ಲೆಗಳ 123 ಮಾದರಿಗಳಲ್ಲಿ ಪತ್ತೆಯಾಗಿವೆ. ಆಂಧ್ರ ಪ್ರದೇಶದ ಶೇ 33ರಷ್ಟು ಮಾದರಿಗಳಲ್ಲಿ ಹಾಗೂ ತೆಲಂಗಾಣದ 53 ಮಾದರಿಗಳಲ್ಲಿ (104 ಮಾದರಿಗಳ ಪೈಕಿ) ಈ ಹಿಂದೆ ಇದೇ ವೈರಸ್‌ ತಳಿಯು ಪತ್ತೆಯಾಗಿತ್ತು. ಈ ರೂಪಾಂತರ ವೈರಸ್‌ ತಳಿಯು ಬ್ರಿಟನ್, ಡೆನ್ಮಾರ್ಕ್‌, ಸಿಂಗಾಪೂರ್‌, ಜಪಾನ್‌ ಹಾಗೂ ಆಸ್ಟ್ರೇಲಿಯಾ ಸೇರಿದಂತೆ 16 ರಾಷ್ಟ್ರಗಳಲ್ಲಿಯೂ ಪತ್ತೆಯಾಗಿದೆ.

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ವಿಶ್ಲೇಷಣೆಗೆ ಒಳಪಡಿಸಲಾಗಿರುವ ಕೋವಿಡ್‌–19 ದೃಢಪಟ್ಟ 10,787 ಮಾದರಿಗಳ ಪೈಕಿ 771 ಮಾದರಿಗಳಲ್ಲಿ ಪಟ್ಟಿ ಮಾಡಲಾಗಿರುವ ರೂಪಾಂತರ ತಳಿಗಳು ಪತ್ತೆಯಾಗಿವೆ. 736 ಮಾದರಿಗಳಲ್ಲಿ ಬ್ರಿಟನ್‌ನ ಬಿ.1.1.7 ತಳಿ, 34 ಮಾದರಿಗಳಲ್ಲಿ ದಕ್ಷಿಣ ಆಫ್ರಿಕಾದ ತಳಿ (ಬಿ.1.351) ಹಾಗೂ ಒಂದು ಮಾದರಿಯಲ್ಲಿ ಬ್ರೆಜಿಲ್‌ ತಳಿ (ಪಿ.1) ಸೋಂಕು ಇರುವುದು ಕಂಡುಕೊಳ್ಳಲಾಗಿದೆ. ದೇಶದ ಒಟ್ಟು 18 ರಾಜ್ಯಗಳಲ್ಲಿ ಕೊರೊನಾ ವೈರಸ್‌ನ ರೂಪಾಂತರ ತಳಿಗಳು ವ್ಯಾಪಿಸುವುದನ್ನು ತಿಳಿಯಲಾಗಿದೆ.

ದೇಶದಲ್ಲಿ ಕೊರೊನಾ ವೈರಸ್‌ ಸೋಂಕು ಪ್ರಕರಣಗಳ ದಿಢೀರ್‌ ಏರಿಕೆಯಾಗಿರುವುದಕ್ಕೂ ರೂಪಾಂತರ ತಳಿಗಳಿಗೂ ಇರುವ ನೇರ ಸಂಬಂಧವನ್ನು ಖಚಿತ ಪಡಿಸಲು, ಪ್ರಸ್ತುತ ನಡೆಸಲಾಗಿರುವ ವಿಶ್ಲೇಷಣೆಗಳಷ್ಟೇ ಸಾಕಾಗುವುದಿಲ್ಲ ಎಂದು ವರದಿ ಹೇಳಿದೆ. 24 ಗಂಟೆಗಳಲ್ಲಿ ಭಾರತದಲ್ಲಿ ಕೋವಿಡ್‌–19 ದೃಢಪಟ್ಟ 47,262 ಪ್ರಕರಣಗಳು ದಾಖಲಾಗಿವೆ.

ಪ್ರಸ್ತುತ 3,68,457 ಸಕ್ರಿಯ ಪ್ರಕರಣಗಳಿದ್ದು, ಒಟ್ಟು ಪ್ರಕರಣಗಳಲ್ಲಿ ಶೇ 3.14ರಷ್ಟಿದೆ. ಸೋಂಕಿನಿಂದ ಗುಣಮುಖರಾಗುತ್ತಿರುವ ಪ್ರಮಾಣ ಶೇ 95.49ಕ್ಕೆ ಇಳಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT