ಮಂಗಳವಾರ, ನವೆಂಬರ್ 24, 2020
20 °C

ಫಾರೂಕ್ ಅಬ್ದುಲ್ಲಾ ದೇಶ ಬಿಟ್ಟು ಚೀನಾಗೆ ಹೋಗಲಿ: ಆರ್‌ಎಸ್‌ಎಸ್ ಮುಖಂಡ ಇಂದ್ರೇಶ್

ಪಿಟಿಐ Updated:

ಅಕ್ಷರ ಗಾತ್ರ : | |

ನ್ಯಾಷನಲ್‌ ಕಾನ್ಫರೆನ್ಸ್‌ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ

ಜಮ್ಮು: ಪಾಕ್‌ ಆಕ್ರಮಿತ ಕಾಶ್ಮೀರ ಹಾಗೂ ಗಿಲ್ಗಿಟ್‌–ಬಲ್ಟಿಸ್ತಾನ್‌ ಖಾಲಿ ಮಾಡುವಂತೆ ಪಾಕಿಸ್ತಾನದ ಮೇಲೆ ಒತ್ತಡ ಹೇರುವ ನಿಟ್ಟಿನಲ್ಲಿ ಆರ್‌ಎಸ್‌ಎಸ್‌ ಮುಖಂಡ ಇಂದ್ರೇಶ್‌ ಕುಮಾರ್ ಮಂಗಳವಾರ ಅಭಿಯಾನ ಆರಂಭಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಮೆಹಬೂಬಾ ಮುಫ್ತಿ ಮತ್ತು ಫಾರೂಕ್‌ ಅಬ್ದುಲ್ಲಾ ಅವರನ್ನು ಭಾರತ ಬಿಟ್ಟು ಹೋಗುವಂತೆ ಆಗ್ರಹಿಸಿದ್ದಾರೆ. ರಾಷ್ಟ್ರ ಧ್ವಜದ ತ್ರಿವರ್ಣದ ಮೇಲಿನ ಅವರ ಹೇಳಿಕೆಗಳು, ಜಮ್ಮು ಮತ್ತು ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನ ಪುನರ್‌ಸ್ಥಾಪಿಸಲು ಚೀನಾದ ಸಹಕಾರ ಕೇಳುತ್ತಿರುವುದಾಗಿ ಆರೋಪಿಸಿರುವ ಇಂದ್ರೇಶ್‌ ಕುಮಾರ್‌, ಪಾಕಿಸ್ತಾನ ಮತ್ತು ಚೀನಾಕ್ಕೆ ತೆರಳುವಂತೆ ಹೇಳಿದ್ದಾರೆ.

'ನೀವು (ಫಾರೂಕ್‌ ಅಬ್ದುಲ್ಲಾ) ಹಿಂದುಸ್ತಾನ ಬಿಟ್ಟು ಹೋಗಬೇಕು, ಜಮ್ಮು ಮತ್ತು ಕಾಶ್ಮೀರ ಬಿಟ್ಟು ಹೋಗಬೇಕು, ಕಾಶ್ಮೀರ ಬಿಟ್ಟು ಚೀನಾಗೆ ಹೋಗಿ' ಎಂದು ಇಂದ್ರೇಶ್ ಕುಮಾರ್ ಮುಸ್ಲಿಂ ರಾಷ್ಟ್ರೀಯ ಮಂಚ್‌ ಕಾನ್ಫರೆನ್ಸ್‌ನಲ್ಲಿ ಹೇಳಿದ್ದಾರೆ.

ಚೀನಾದ ಬೆಂಬಲ ಪಡೆಯುವ ಬಗ್ಗೆ ಫಾರೂಕ್‌ ಅಬ್ದುಲ್ಲಾ ಮಾತನಾಡಿರುವ ಬಗ್ಗೆ ಪ್ರಸ್ತಾಪಿಸಿ, 'ಅವರು ಚೀನಾಗೆ ತೆರಳುವಂತೆ ಆಗ್ರಹಿಸಿ ನಿರ್ಣಯ ಕೈಗೊಳ್ಳೋಣ' ಎಂದರು.

ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರು ತ್ರಿವರ್ಣದ ಕುರಿತು ಮಾತನಾಡಿರುವುದನ್ನು ಪ್ರಸ್ತಾಪಿಸಿ, ಕೇಂದ್ರಾಡಳಿತ ಪ್ರದೇಶದ ಜನರು 'ಅವರಿಗೆ ಇಚ್ಛೆ ಇರುವ ಕಡೆಗೆ ಹೋಗುವಂತೆ' ಹೇಳುತ್ತಿದ್ದಾರೆ ಎಂದಿದ್ದಾರೆ.

ಗುಪ್ಕರ್‌ ಮೈತ್ರಿಯ ಬಗ್ಗೆ ಮಾತನಾಡಿ, ಈ ಗುಂಪಿನ ಮುಖಂಡರನ್ನು ಬಂಧನದಲ್ಲಿಟ್ಟಾಗ ಜಮ್ಮು ಮತ್ತು ಕಾಶ್ಮೀರದಲ್ಲಿ ಯಾರೊಬ್ಬರೂ ಮರುಕ ವ್ಯಕ್ತಪಡಿಸಲಿಲ್ಲ. ಯಾರೊಬ್ಬರೂ ಆಕ್ರೋಶ ವ್ಯಕ್ತಪಡಿಸಲಿಲ್ಲ, ಪ್ರತಿಭಟನಾ ಮೆರವಣಿಗೆ ನಡೆಸಲಿಲ್ಲ, ಅವರ ಪರವಾಗಿ ಧರಣಿ ನಡೆಸಲಿಲ್ಲ. ಕಾಶ್ಮೀರ ಬಂದ್‌ ಆಚರಿಸಲಿಲ್ಲ ಹಾಗೂ ಪ್ರತಿಭಟಿಸಲಿಲ್ಲ. ಬದಲಾಗಿ ಬಹುತೇಕ ಜನರು, ಅವರನ್ನು ದೋಚಿದವರು ಹಾಗೂ ಉಗ್ರರ ಮೂಲಕ ಕೊಲ್ಲಿಸಿದವರು ಜೈಲಿಗೆ ಹೋಗಿರುವುದನ್ನು ಕಂಡು ಸಂತಸ ಪಟ್ಟರು' ಎಂದು ಹೇಳಿದ್ದಾರೆ.

'70 ವರ್ಷಗಳ ಬಳಿಕ ಭಾರತ ಒಂದೇ ರಾಷ್ಟ್ರವಾಗಿದೆ. ಒಂದು ರಾಷ್ಟ್ರ, ಒಂದು ಧ್ವಜ, ಒಂದು ಸಂವಿಧಾನ, ಒಂದು ಪೌರತ್ವ, ಒಂದು ಘೋಷವಾಕ್ಯ ಹಾಗೂ ಒಂದು ರಾಷ್ಟ್ರ ಗೀತೆ. ಪಾಕ್‌ ಆಕ್ರಮಿತ ಪ್ರದೇಶ, ಬಲ್ಟಿಸ್ತಾನ್‌–ಗಿಲ್ಗಿಟ್‌ ಪ್ರದೇಶವನ್ನು ಪಾಕಿಸ್ತಾನ ಖಾಲಿ ಮಾಡುವಂತೆ ಆಗ್ರಹಿಸಿ ಅಭಿಯಾನ ಆರಂಭಿಸಲಾಗುತ್ತಿದೆ. ಅವು ಜಮ್ಮು ಮತ್ತು ಕಾಶ್ಮೀರದ ಭಾಗಗಳಾಗಿವೆ. ಪಾಕಿಸ್ತಾನ ಆ ಭಾಗಗಳಿಂದ ಭದ್ರತಾ ಪಡೆಗಳನ್ನು ಹಿಂದಕ್ಕೆ ಪಡೆಯಬೇಕು' ಎಂದು ಇಂದ್ರೇಶ್‌ ಕುಮಾರ್ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು