ಶುಕ್ರವಾರ, ಜೂನ್ 25, 2021
22 °C
‘ಬೇಡಿಕೆ ಮತ್ತು ಪೂರೈಕೆ ಕುರಿತು ಸಚಿವರ ಹೇಳಿಕೆ

ಲಸಿಕೆ ಉತ್ಪಾದನೆ: ನಿತಿನ್ ಗಡ್ಕರಿ ಹೇಳಿಕೆಗೆ ಕಾಂಗ್ರೆಸ್‌ ವ್ಯಂಗ್ಯ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೋವಿಡ್‌ ಲಸಿಕೆ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸಲು ಇನ್ನೂ ಹೆಚ್ಚು ದೇಶಿಯ ಕಂಪನಿಗಳಿಗೆ ಲೈಸನ್ಸ್‌ ನೀಡುವುದು ಅಗತ್ಯವಿದೆ ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ನೀಡಿದ ಹೇಳಿಕೆ ಈಗ ಕಾಂಗ್ರೆಸ್‌ ಮತ್ತು ಬಿಜೆಪಿ ವಾಗ್ವಾದಕ್ಕೆ ಕಾರಣವಾಗಿದೆ.

ಮೋದಿ ಸರ್ಕಾರದಲ್ಲಿ ಈಗಲಾ ದರೂ ಒಬ್ಬ ಸಚಿವರು ಧೈರ್ಯದಿಂದ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ ಎಂದು ಕಾಂಗ್ರೆಸ್‌ ವ್ಯಂಗ್ಯವಾಡಿದೆ.

‘ಸ್ವದೇಶಿ ಜಾಗರಣ್ ಮಂಚ್’ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಂಕ್ರಾಮಿಕ ರೋಗದ ಸಮಯದಲ್ಲಿ ಲಸಿಕೆಯನ್ನು ಹೆಚ್ಚಿನ ಪ್ರಮಾಣದಲ್ಲಿ ತಯಾರಿಸಲು ಹೆಚ್ಚಿನ ಕಂಪನಿಗಳಿಗೆ ಅವಕಾಶ ನೀಡಬೇಕು ಎಂದು ಗಡ್ಕರಿ ಸಲಹೆ ನೀಡಿದ್ದರು.

‘ಲಸಿಕೆ ಪೂರೈಕೆಗಿಂತಲೂ ಬೇಡಿಕೆ ಹೆಚ್ಚಿದರೆ ಸಮಸ್ಯೆಯಾಗುತ್ತದೆ. ಹೀಗಾಗಿ, ಒಂದು ಕಂಪನಿ ಬದಲು ಕನಿಷ್ಠ 10 ಕಂಪನಿಗಳಿಗೆ ಲಸಿಕೆ ತಯಾರಿಸಲು ಅವಕಾಶ ನೀಡಬೇಕು. ಲಸಿಕೆಯ ಮೂಲ ಪೆಟೆಂಟ್‌ ಹೊಂದಿರುವವರಿಗೆ ಶೇಕಡ 10ರಷ್ಟು ರಾಯಲ್ಟಿ ನೀಡಬೇಕು. ಇದಕ್ಕೆ ಸಂಬಂಧಿಸಿದಂತೆ ಕಾನೂನು ಸಹ ರೂಪಿಸಬೇಕು’ ಎಂದು ಹೇಳಿದ್ದರು.

 ಈ ಬಗ್ಗೆ ಸ್ಪಷ್ಟನೆ ನೀಡಿರುವ ಗಡ್ಕರಿ ಅವರು, ‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಲಸಿಕೆ ಉತ್ಪಾದನೆ ಹೆಚ್ಚಳಕ್ಕೆ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿರುವುದು ಸಂತಸಕರ. ಆದರೆ, ಈ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇರಲಿಲ್ಲ’ ಎಂದು ಬುಧವಾರ ಹೇಳಿದ್ದಾರೆ.

‘ಮಂಗಳವಾರ ನಾನು ಲಸಿಕೆ ಉತ್ಪಾದನೆಯನ್ನು ಹೆಚ್ಚಿಸಬೇಕೆಂದು ಸಲಹೆ ನೀಡಿದ್ದೆ. ಆದರೆ, ನನ್ನ ಭಾಷಣಕ್ಕಿಂತ ಮುನ್ನವೇ ರಾಸಾಯನಿಕ ಮತ್ತು ರಸಗೊಬ್ಬರ ಮಂತ್ರಿ ಮನ್ಸುಖ್ ಮಾಂಡವಿಯಾ ಅವರು ಲಸಿಕೆ ಉತ್ಪಾದನೆ ಹೆಚ್ಚಳಕ್ಕೆ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದಿರಲಿಲ್ಲ. ಕಾರ್ಯಕ್ರಮ ಮುಗಿದ ಮೇಲೆ ನನಗೆ ಈ ಬಗ್ಗೆ ಮಾಹಿತಿ ತಿಳಿಯಿತು’ ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

 ‘ಲಸಿಕೆ ತಯಾರಿಸಲು 12 ವಿವಿಧ ಕಂಪನಿಗಳಿಗೆ ಸರ್ಕಾರದಿಂದ ಸಾಧ್ಯವಿರುವ ಎಲ್ಲ ರೀತಿಯ ನೆರವು ನೀಡಲಾಗುತ್ತಿದೆ. ಸರ್ಕಾರದ ಪ್ರಯತ್ನಗಳಿಂದ ಲಸಿಕೆ ಉತ್ಪಾದನೆ ಹೆಚ್ಚಳವಾಗಲಿದೆ ಎಂದು ಮಾಂಡವಿಯಾ ಮಾಹಿತಿ ನೀಡಿದ್ದಾರೆ’ ಎಂದು ಗಡ್ಕರಿ ವಿವರಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿ ಕಾಂಗ್ರೆಸ್‌ ನಾಯಕ ರಮೇಶ್‌, ‘ಏಪ್ರಿಲ್‌ 18ರಂದೇ ಡಾ. ಮನಮೋಹನ್‌ ಸಿಂಗ್‌ ಅವರು ಇದೇ ಸಲಹೆ ನೀಡಿದ್ದರು’ ಎಂದು ಹೇಳಿದ್ದಾರೆ.

‘ಲಸಿಕೆ ಬೇಡಿಕೆ ನೀಗಿಸಲು ಹೆಚ್ಚಿನ ಕಂಪನಿಗಳಿಗೆ ಲೈಸನ್ಸ್‌ ನೀಡಬೇಕು ಎಂದು ಗಡ್ಕರಿ ಹೇಳಿದ್ದಾರೆ. ದೇಶದಲ್ಲಿ ಲಸಿಕೆಗೆ ಬೇಡಿಕೆ ಹೆಚ್ಚಿದೆ. ಆದರೆ, ಬಿಜೆಪಿ ನಕಲಿ ಟೂಲ್‌ ಕಿಟ್‌ಗಳನ್ನು ನೀಡುತ್ತಿದೆ. ಈಗಲಾದರೂ ಒಬ್ಬ ಬಿಜೆಪಿ ಸಚಿವರು ಎಚ್ಚೆತ್ತುಕೊಂಡಿರುವುದು ಒಳ್ಳೆಯ ಬೆಳವಣಿಗೆಯಾಗಿದೆ’ ಎಂದು ಕಾಂಗ್ರೆಸ್‌ ವಕ್ತಾರ ಜೈವೀರ್‌ ಶೆರ್ಗಿಲ್‌ ಟ್ವೀಟ್‌ ಮಾಡಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು