ಶುಕ್ರವಾರ, ಡಿಸೆಂಬರ್ 9, 2022
21 °C

ಗೋವಾ: ಅಂಗವಿಕಲ ಮಗಳಿಗೆ ಆಹಾರ ನೀಡಲು ರೋಬಾಟ್ ತಯಾರಿಸಿದ ದಿನಗೂಲಿ ನೌಕರ

ಪಿಟಿಐ Updated:

ಅಕ್ಷರ ಗಾತ್ರ : | |

ಪಣಜಿ: ಗೋವಾದ ದಿನಗೂಲಿ ನೌಕರ ಬಿಪಿನ್ ಕದಮ್‌ ಎಂಬುವವರು ಅಂಗವಿಕಲ ಮಗಳಿಗೆ ಆಹಾರ ಕೊಡುವುದಕ್ಕಾಗಿ ರೋಬಾಟ್ ಅಭಿವೃದ್ಧಿಪಡಿಸಿದ್ದಾರೆ.

ಬಿಪಿನ್ ಅವರ ಪತ್ನಿ ಅಸ್ವಸ್ಥಗೊಂಡಿದ್ದು, ಮಗಳಿಗೆ ಆಹಾರ ಕೊಡಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದ ಬೇಸರಗೊಂಡ ಅವರು ರೋಬಾಟ್ ಸಿದ್ಧಪಡಿಸಿದ್ದಾರೆ.

ದಕ್ಷಿಣ ಗೋವಾದ ಪೊಂಡಾ ತಾಲ್ಲೂಕಿನ ಬೆತೋರಾ ಗ್ರಾಮದ ಬಿಪಿನ್ ಅವರಿಗೆ ತಂತ್ರಜ್ಞಾನದ ಬಗ್ಗೆ ಹೆಚ್ಚಿನ ಜ್ಞಾನ ಇರಲಿಲ್ಲ, ರೋಬಾಟ್ ತಯಾರಿಗೆ ಅವರು ಯಾರ ಸಹಾಯವನ್ನೂ ಪಡೆದಿರಲಿಲ್ಲ ಎನ್ನಲಾಗಿದೆ.

ಹೇಗೆ ಕೆಲಸ ಮಾಡುತ್ತದೆ ‘ಮಾ ರೋಬಾಟ್’?

ಅಂದಹಾಗೆ, ರೋಬಾಟ್‌ಗೆ ‘ಮಾ ರೋಬಾಟ್’ ಎಂದು ಹೆಸರಿಡಲಾಗಿದೆ. ಬಿಪಿನ್ ಅವರ ಮಗಳಿಗೆ ಕೈಗಳನ್ನು ಆಚೀಚೆ ಮಾಡಬಲ್ಲ ಮತ್ತು ಎತ್ತುವ ಶಕ್ತಿ ಇಲ್ಲ. ಹೀಗಾಗಿ ಆಕೆಗೆ ಏನು ಬೇಕೋ ಆಯಾ ಆಹಾರವನ್ನು ತಟ್ಟೆಯಲ್ಲಿಟ್ಟು ಬಾಯಿಗೆ ಕೊಡುವ ಕೆಲಸವನ್ನು ರೋಬಾಟ್ ಮಾಡುತ್ತದೆ. ರೋಬಾಟ್ ‘ವಾಯ್ಸ್ ಕಮಾಂಡ್’ ತಂತ್ರಜ್ಞಾನ ಹೊಂದಿದೆ. ಆಕೆ ಏನು ಬೇಕು ಎಂಬುದನ್ನು ಹೇಳಿದ ಕೂಡಲೇ ರೋಬಾಟ್ ಅದನ್ನು ಕೊಡುವ ಕೆಲಸ ಮಾಡುತ್ತದೆ.

‘14 ವರ್ಷದ ಮಗಳ ಕೈಗಳಿಗೆ ಶಕ್ತಿ ಇಲ್ಲ. ಆಕೆ ಊಟ ಮಾಡಬೇಕಿದ್ದರೆ ಸಂಪೂರ್ಣವಾಗಿ ಅಮ್ಮನನ್ನೇ ಅವಲಂಬಿಸಿದ್ದಳು. ಎರಡು ವರ್ಷಗಳ ಹಿಂದೆ ಪತ್ನಿಯೂ ಅನಾರೋಗ್ಯದಿಂದ ಹಾಸಿಗೆ ಹಿಡಿದಳು. ಮಗಳಿಗೆ ಊಟ ಕೊಡಲಾಗದೆ ಬೇಸರದಿಂದ ಅಳುತ್ತಿದ್ದಳು. ನಾನು ಕೂಲಿ ಕೆಲಸ ಮುಗಿಸಿ ಬಂದು ಮಗಳಿಗೆ ಊಟ ಕೊಡಬೇಕಾಗುತ್ತಿತ್ತು’ ಎಂದು ಬಿಪಿನ್ ಹೇಳಿದ್ದಾರೆ.

ವರ್ಷದ ಹಿಂದೆ ರೋಬಾಟ್ ಬಗ್ಗೆ ಯೋಚನೆ ಬಂತು. ಆದರೆ, ಮಗಳಿಗೆ ಊಟ ಕೊಡಬಲ್ಲಂಥ ರೋಬಾಟ್ ಎಲ್ಲೂ ಸಿಗಲಿಲ್ಲ. ಹೀಗಾಗಿ ಅಂಥ ರೋಬಾಟ್ ಅನ್ನು ನಾನೇ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಲು ಮುಂದಾದೆ ಎಂದಿದ್ದಾರೆ ಬಿಪಿನ್.

‘ರೋಬಾಟ್ ಮಾಡುವ ಬಗ್ಗೆ ಸತತ ಅಧ್ಯಯನ ನಡೆಸಿದೆ. ದಿನದ 12 ಗಂಟೆ ಕೆಲಸ ಮಾಡುತ್ತಿದ್ದೆ. ಒಂದು ತಿಂಗಳ ಕಾಲ ಸತತ ಅನ್ವೇಷಣೆ ನಡೆಸಿ ಈ ರೋಬಾಟ್‌ನ ವಿನ್ಯಾಸ ಸಿದ್ಧ‍ಪಡಿಸಿದೆ. ಇದೀಗ ಕೆಲಸ ಮುಗಿಸಿ ಮನೆಗೆ ಮರಳುವಾಗ ಮಗಳು ಊಟ ಮಾಡಿರುತ್ತಾಳೆ. ಖುಷಿಯಾಗಿದೆ’ ಎಂದು ಬಿಪಿನ್ ಹೇಳಿದ್ದಾರೆ.

‘ಗೋವಾ ರಾಜ್ಯ ಆವಿಷ್ಕಾರ ಮಂಡಳಿ’ ಬಿಪಿನ್ ಕಾಡಮ್‌ ಅವರ ಸಾಧನೆಯನ್ನು ಶ್ಲಾಘಿಸಿದ್ದು, ರೋಬಾಟ್‌ಗೆ ಸಂಬಂಧಿಸಿ ಇನ್ನಷ್ಟು ಆವಿಷ್ಕಾರ ಮಾಡುವುದಕ್ಕಾಗಿ ಹಣಕಾಸು ನೆರವು ಒದಗಿಸುವ ಭರವಸೆ ನೀಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು