ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋವಾ ಚುನಾವಣೆ: ಬಿಜೆಪಿ ಇನ್ನಷ್ಟು ಗಟ್ಟಿ- ಕೆಲಸ ಮಾಡದ ಆಡಳಿತ ವಿರೋಧಿ ಅಲೆ

ಕೆಲಸ ಮಾಡದ ಆಡಳಿತ ವಿರೋಧಿ ಅಲೆ; ಕಾಂಗ್ರೆಸ್‌ ಮತ್ತೆ ನಿರಾಸೆ
Last Updated 10 ಮಾರ್ಚ್ 2022, 21:14 IST
ಅಕ್ಷರ ಗಾತ್ರ

ಪಣಜಿ: ಕರಾವಳಿ ರಾಜ್ಯ ಗೋವಾದಲ್ಲಿ ಆಡಳಿತ ವಿರೋಧಿ ಅಲೆಯನ್ನು ಮೆಟ್ಟಿನಿಂತು ಸತತ ಮೂರನೇ ಬಾರಿಗೆ ಅಧಿಕಾರ ಹಿಡಿಯುವತ್ತ ದಾಪುಗಾಲಿಟ್ಟಿರುವ ಬಿಜೆಪಿ, ರಾಜ್ಯದಲ್ಲಿ ತನ್ನ ನೆಲೆಯನ್ನು ಇನ್ನಷ್ಟು ಗಟ್ಟಿ ಮಾಡಿಕೊಂಡಿದೆ. ಪ್ರತಿಪಕ್ಷಗಳ ಮತಗಳು ವಿಭಜನೆಯಾಗಿದ್ದರಿಂದ ಬಿಜೆಪಿ ಹಾದಿ ಸುಗಮವಾಗಿದೆ.

ಶತಾಯಗತಾಯ ಗೆಲ್ಲಲು ಪಣ ತೊಟ್ಟು, ಅಭ್ಯರ್ಥಿಗಳನ್ನು ರೆಸಾರ್ಟ್‌ನಲ್ಲಿ ಇರಿಸಿದ್ದ ಕಾಂಗ್ರೆಸ್, ಬಿಜೆಪಿಗೆ ಸಮರ್ಥ ಪೈಪೋಟಿ ನೀಡುವಲ್ಲಿ ಎಡವಿದೆ. ತನ್ನ ಎರಡನೇ ಯತ್ನದಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಅಲ್ಪ ಯಶಸ್ಸು ಸಿಕ್ಕಿದೆ. ಆದರೆ ಮೊದಲ ಬಾರಿ ಗೋವಾ ಕಣಕ್ಕೆ ಧುಮುಕಿರುವ ತೃಣಮೂಲ ಕಾಂಗ್ರೆಸ್‌ಕೈಸುಟ್ಟುಕೊಂಡಿದೆ.

40 ವಿಧಾನಸಭಾ ಕ್ಷೇತ್ರಗಳ ಪುಟ್ಟ ರಾಜ್ಯದಲ್ಲಿ ಈ ಬಾರಿ ಅತಂತ್ರ ವಿಧಾನಸಭೆ ಏರ್ಪಡಲಿದೆ ಎಂಬ ಮತಗಟ್ಟೆ ಸಮೀಕ್ಷೆಗಳು ಬಹುತೇಕ ನಿಜವಾಗಿಲ್ಲ. ಆಡಳಿತಾರೂಢ ಬಿಜೆಪಿಯ ಸರಳ ಬಹುಮತಕ್ಕೆ ಕೇವಲ ಒಂದು ಸ್ಥಾನ ಕಡಿಮೆಯಿದ್ದು, ಪಕ್ಷೇತರರು ಅಥವಾ ಎಂಜಿಪಿ ಬೆಂಬಲದೊಂದಿಗೆ ಸರ್ಕಾರ ರಚಿಸುವುದು ನಿಚ್ಚಳವಾಗಿದೆ.

ಬಿಜೆಪಿ ಈ ಬಾರಿ ತನ್ನ ಮತ ಪ್ರಮಾಣವನ್ನು ಕೊಂಚ ಏರಿಸಿಕೊಂಡಿದೆ. 2017ರ ಚುನಾವಣೆಯಲ್ಲಿ ಶೇಕಡಾ 32.5ರಷ್ಟು ಮತಗಳನ್ನು ಪಡೆದಿದ್ದ ಬಿಜೆಪಿ ಈ ಬಾರಿಶೇ 33.3ರಷ್ಟು ಪ್ರಮಾಣದ ಮತಗಳನ್ನು ಪಡೆದುಕೊಂಡಿದೆ. ಬಿಜೆಪಿಗೆ ಬಿದ್ದ ಮತಗಳೆಲ್ಲವೂ ಗೆಲುವಾಗಿ ಬದಲಾಗಿರುವುದು ಈ ಬಾರಿಯ ವಿಶೇಷ. ಏಕೆಂದರೆ, ಕಳೆದ ಚುನಾವಣೆಯಲ್ಲಿಶೇಕಡಾ 32.5ರಷ್ಟು ಮತಗಳನ್ನು ಪಡೆದಿದ್ದರೂ ಬಿಜೆಪಿ ಗೆದ್ದಿದ್ದು 13 ಕ್ಷೇತ್ರಗಳಲ್ಲಿ ಮಾತ್ರ. ಈ ಬಾರಿ ಪಕ್ಷ ಏಕಾಂಗಿಯಾಗಿ 20 ಕಡೆ ಗೆದ್ದಿದೆ.

ಈ ಬಾರಿಯೂ ಪ್ರತಿಪಕ್ಷ ಸ್ಥಾನಕ್ಕೇ ಕಾಂಗ್ರೆಸ್ ತೃಪ್ತಿಪಟ್ಟುಕೊಂಡಿದೆ. ಕಳೆದ ಬಾರಿ ಶೇ 28ರಷ್ಟು ಮತಗಳನ್ನು ಪಡೆದು 17 ಕ್ಷೇತ್ರಗಳನ್ನು ಕಾಂಗ್ರೆಸ್ ಗೆದ್ದುಕೊಂಡಿತ್ತು. ಆದರೆ, ಈ ಬಾರಿಯ ಮತ ಪ್ರಮಾಣ (ಶೇ 23) ಗಣನೀಯವಾಗಿ ಕುಸಿದಿದೆ. ಹೀಗಾಗಿ ಕೇವಲ 11ರಲ್ಲಿ ಮಾತ್ರ ಪಕ್ಷದ ಅಭ್ಯರ್ಥಿಗಳು ಗೆಲ್ಲಲು ಸಾಧ್ಯವಾಗಿದೆ.

2017ರ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಕಾಂಗ್ರೆಸ್, ಅಧಿಕಾರ ಹಿಡಿಯವಲ್ಲಿ ವಿಫಲವಾಗಿತ್ತು. ಆದರೆ 13 ಕ್ಷೇತ್ರಗಳಲ್ಲಿ ಗೆದ್ದಿದ್ದ ಬಿಜೆಪಿ, ಇತರರನ್ನು ಸೆಳೆದು ಅಧಿಕಾರ ಹಿಡಿದಿತ್ತು. ಕಾಂಗ್ರೆಸ್‌ ಶಾಸಕರು ರಾಜೀನಾಮೆ ನೀಡಿ, ಬಿಜೆಪಿಯನ್ನು ಬೆಂಬಲಿಸಿದ್ದರು. ಹೀಗಾಗಿ ಬಿಜೆಪಿ ಬಲ 27ಕ್ಕೆ ಏರಿಕೆಯಾಗಿತ್ತು. ಕಾಂಗ್ರೆಸ್‌ನ ಸಂಖ್ಯಾಬಲ ಎರಡಕ್ಕೆ ಇಳಿದಿ‌ತ್ತು. ಬಹುತೇಕ ಶಾಸಕರು ಪಕ್ಷ ತೊರೆದಿದ್ದರಿಂದ ಕಾಂಗ್ರೆಸ್ ಸಂಖ್ಯಾಬಲ ಕುಸಿದಿತ್ತು. ಕಳೆದ ಬಾರಿಯ ರಾಜಕೀಯ ಬಿಕ್ಕಟ್ಟು ಪಕ್ಷಕ್ಕೆ ಮುಳುವಾಯಿತು ಎಂದು ವಿಶ್ಲೇಷಿಸಲಾಗಿದೆ.

‘ಪ್ರಾಮಾಣಿಕ ಆರಂಭ’:ಕಳೆದ ಬಾರಿಯೇ ಗೋವಾ ಚುನಾವಣೆಗೆ ಧುಮುಕಿದ್ದ ಆಮ್ ಆದ್ಮಿ ಪಕ್ಷವು ಶೇ 6.8ರಷ್ಟು ಮತ ಪ್ರಮಾಣ ಪಡೆದಿದ್ದರೂ ಗೆಲುವು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಪಕ್ಷದ ಮತಪ್ರಮಾಣ ಸ್ವಲ್ಪ ಕಡಿಮೆಯಾಗಿದ್ದರೂ, ಇಬ್ಬರು ಶಾಸಕರು ಆಯ್ಕೆಯಾಗಿದ್ದಾರೆ. ‘ಇದು ಗೋವಾದಲ್ಲಿ ಪ್ರಾಮಾಣಿಕ ರಾಜಕಾರಣದ ಆರಂಭ’ ಎಂದು ಎಎಪಿ ಸಂಚಾಲಕ ಅರವಿಂದ ಕೇಜ್ರಿವಾಲ್ ಬಣ್ಣಿಸಿದ್ದಾರೆ.

ಬಹುಕೋನ ಸ್ಪರ್ಧೆ ಒಡ್ಡಲು ಗೋವಾಗೆ ಮೊದಲ ಬಾರಿಗೆ ಪ್ರವೇಶ ನೀಡಿದ್ದ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಯ ಯಾವ ಅಭ್ಯರ್ಥಿಯೂ ಗೆದ್ದಿಲ್ಲ. ಆದರೆ ಶೇ 5.2ರಷ್ಟು ಮತಪ್ರಮಾಣ ದಾಖಲಿಸುವ ಮೂಲಕ ಪಕ್ಷ ಗಮನ ಸೆಳೆದಿದೆ.ರಾಜ್ಯದ ಅತಿ ಹಳೆಯ ಪ್ರಾದೇಶಿಕ ಪಕ್ಷ ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷ (ಎಂಜಿಪಿ) ಜೊತೆ ಮೈತ್ರಿ ಮಾಡಿಕೊಂಡಿದ್ದ ಟಿಎಂಸಿ ತಂತ್ರಗಾರಿಕೆವಿಫಲವಾಗಿದೆ.

ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕಿರಣ್ ಕಂಡೋಲ್ಕರ್, ಅವರ ಪತ್ನಿ ಕವಿತಾ, ಎನ್‌ಸಿಪಿ ತೊರೆದು ಟಿಎಂಸಿ ಸೇರಿದ್ದ ಚರ್ಚಿಲ್ ಅಲೆಮಾವೊ ಹಾಗೂ ಅವರ ಮಗಳು ವಲಾಂಕಾ ಅವರು ಸೋಲನುಅಭವಿಸಿದ್ದಾರೆ.

ಎಂಜಿಪಿಯ ಶಾಸಕರ ಸಂಖ್ಯೆ ಈ ಬಾರಿ 2ಕ್ಕೆ ಕುಸಿದಿದೆ. ಮತ ಪ್ರಮಾಣವೂ ಶೇ11.3ರಿಂದ 7.6ಕ್ಕೆ ಇಳಿಕೆಯಾಗಿದೆ. ಎಂಜಿಪಿ ಬೆಂಬಲವಿಲ್ಲದೇ ಯಾವ ಪಕ್ಷವೂ ರಾಜ್ಯದಲ್ಲಿ ಸರ್ಕಾರ ರಚಿಸಲು ಸಾಧ್ಯವಿಲ್ಲ ಎಂಬ ಪಕ್ಷದ ಮುಖಂಡರ ಹೇಳಿಕೆಗಳು ಈ ಫಲಿತಾಂಶದಿಂದ ಮೂಲೆಗುಂಪಾಗಿವೆ. ಆದರೆ, ಪಕ್ಷೇತರರು ಹಾಗೂ ಎಂಜಿಪಿ ಬೆಂಬಲದೊಂದಿಗೆ ಪ್ರಮೋದ್ ಸಾವಂತ್ ಅವರು ಮತ್ತೆ ಮುಖ್ಯಮಂತ್ರಿಯಾಗಲಿದ್ಧಾರೆ ಎಂಬ ಸುಳಿವನ್ನು ಬಿಜೆಪಿನೀಡಿದೆ.

ಮೂರು ಜೋಡಿಗಳ ಪ್ರವೇಶ: ಗೋವಾ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ನಾಲ್ಕು ದಂಪತಿ ಪೈಕಿ ಮೂರು ಜೋಡಿಗಳು ವಿಧಾನಸಭೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿವೆ. ವಿಶ್ವಜಿತ್ ರಾಣೆ–ದಿವಿಯಾ ದಂಪತಿ, ಕಾಂಗ್ರೆಸ್‌ನ ಮೈಕೆಲ್ ಲೋಬೊ ಹಾಗೂ ಅವರ ಪತ್ನಿ ಡೆಲಿಲಾಯಿ, ಬಿಜೆಪಿಯ ಅತಾನಾಸಿಯೊ ಮಾನ್ಸೆರಾಟೊ–ಜೆನ್ನಿಫರ್ ದಂಪತಿ ಗೆದ್ದಿದ್ದಾರೆ. ಆದರೆ ಕವಿತಾ ಕಂಡೋಲ್ಕರ್ ಹಾಗೂ ಕಿರಣ್ ಕಂಡೋಲ್ಕರ್ ದಂಪತಿ ಸೋಲುಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT