ಶುಕ್ರವಾರ, ಆಗಸ್ಟ್ 12, 2022
26 °C
ಜಮ್ಮು ಮತ್ತು ಕಾಶ್ಮೀರ ಪೊಲೀಸ್‌ರಿಂದ ಆರೋಪಪಟ್ಟಿ ಸಲ್ಲಿಕೆ

ಉಗ್ರರ ಜತೆ ಸಂಪರ್ಕ: ಪಿಡಿಪಿ ನಾಯಕ ಪರ್ರಾ ಇ–ಮೇಲ್‌ ವಿವರ ನೀಡಲು ಗೂಗಲ್‌ಗೆ ಕೋರಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಶ್ರೀನಗರ, ನವದೆಹಲಿ: ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರ ಆಪ್ತ ವಾಹೀದ್‌–ಉರ್‌–ರೆಹಮಾನ್‌ ಪರ್ರಾ ಅವರು ಪಾಕಿಸ್ತಾನ ಮೂಲದ ಭಯೋತ್ಪಾದನಾ ಸಂಘನೆಗಳಿಗೆ ಕಳುಹಿಸಿರುವ ಇ–ಮೇಲ್‌ಗಳ ವಿವರ ನೀಡುವಂತೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಗೂಗಲ್‌ಗೆ ಕೋರಿದ್ದಾರೆ.

ಪರ್ರಾ ವಿರುದ್ಧ ಪೊಲೀಸರು ಆರೋಪಪಟ್ಟಿ ದಾಖಲಿಸಿದ್ದಾರೆ. ಭಯೋತ್ಪಾದಕರ ಜತೆ ಪರ್ರಾ ಸಂಪರ್ಕ ಹೊಂದಿರುವ ಬಗ್ಗೆ ಮೇಲ್ನೋಟಕ್ಕೆ ಸಾಕ್ಷ್ಯಾಧಾರಗಳು ಕಂಡು ಬಂದಿವೆ ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. 

ರಾಜಕೀಯ ಲಾಭಕ್ಕಾಗಿ ಪರ್ರಾ ಭಯೋತ್ಪಾದನೆ ಸಂಘಟನೆಗಳ ಬೆಂಬಲ ಕೋರಿದ್ದಾರೆ. ಇದಕ್ಕೆ ಬದಲಾಗಿ ಈ ಸಂಘಟನೆಗಳಿಗೆ ಎಲ್ಲ ರೀತಿಯ ನೆರವು ಮತ್ತು ಬೆಂಬಲ ನೀಡಿದ್ದಾರೆ. ಇದರಿಂದಾಗಿಯೇ ಭಯೋತ್ಪಾದಕರು ದಾಳಿಗಳನ್ನು ನಡೆಸಿದ್ದಾರೆ ಎಂದು ವಿವರಿಸಲಾಗಿದೆ.

ಪಾಕಿಸ್ತಾನ ಮೂಲದ ಪ್ರತ್ಯೇಕತಾವಾದಿಗಳು ಮತ್ತು ಭಯೋತ್ಪಾದಕ ನಾಯಕರಿಂದ ಆರೋಪಿ ಪರ್ರಾ ಸೂಚನೆಗಳು ಮತ್ತು ಸಲಹೆಗಳನ್ನು ಸ್ವೀಕರಿಸುತ್ತಿದ್ದರು ಎನ್ನುವುದು ತನಿಖೆ ಸಂದರ್ಭದಲ್ಲಿ ಗೊತ್ತಾಗಿದೆ ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಇ–ಮೇಲ್‌ಗಳ ಮೂಲಕ ಪರ್ರಾ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದ. ಹೀಗಾಗಿಯೇ, ಪರ್ರಾ ವಿನಿಮಯ ಮಾಡಿಕೊಂಡಿರುವ ಇ–ಮೇಲ್‌ಗಳ ವಿವರಗಳನ್ನು ನೀಡುವಂತೆ ಗೂಗಲ್‌ಗೆ ಕೋರಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಗತ್ಯ ನೆರವು ನೀಡುವಂತೆ ಅಮೆರಿಕದ ಅಧಿಕಾರಿಗಳನ್ನು ಸಹ ಕೋರಲಾಗಿದೆ. ವಿದೇಶಾಂಗ ಸಚಿವಾಲಯದ ಮೂಲಕ ಪರಸ್ಪರ ಕಾನೂನು ನೆರವು ಒಪ್ಪಂದದ ಅಡಿಯಲ್ಲಿ ಈ ಕೋರಿಕೆ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ಎಲ್ಲ ಆರೋಪಗಳನ್ನು ಪಿಡಿಪಿ ತಳ್ಳಿ ಹಾಕಿದೆ. ಇದೊಂದು ರಾಜಕೀಯ ಪ್ರೇರಿತ ಆರೋಪಗಳು ಎಂದು ಪಿಡಿಪಿ ಹೇಳಿದೆ.

ಪರ್ರಾ ವಿರುದ್ಧ ಇದು ಎರಡನೇ ಆರೋಪಪಟ್ಟಿಯಾಗಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ಪರ್ರಾ ಅವರನ್ನು ಬಂಧಿಸಿತ್ತು. ಜನವರಿಯಲ್ಲಿ ಜಾಮೀನು ದೊರೆತಿತ್ತು. ಆದರೆ, ತಕ್ಷಣವೇ ಪೊಲೀಸರು ಬಂಧಿಸಿದ್ದರು. ಈಗ ಪರ್ರಾ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಇದನ್ನೂ ಓದಿ... ಲವ್‌ ಜಿಹಾದ್‌ನಂತಹ ಕೃತಕ ವಿಷಯಗಳು ಬಿಜೆಪಿಗೆ ನೆರವಾಗಲ್ಲ: ಜಯಂತ್‌ ಚೌಧರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು