ಸೋಮವಾರ, ಜೂನ್ 27, 2022
21 °C

'ಆ್ಯಂಫೊಟೆರಿಸಿನ್‌–ಬಿ' ರಫ್ತು ನಿರ್ಬಂಧಿಸಿದ ಕೇಂದ್ರ ಸರ್ಕಾರ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ಇಂಜೆಕ್ಷನ್‌–ಪ್ರಾತಿನಿಧಿಕ ಚಿತ್ರ

ನವದೆಹಲಿ: ಮ್ಯೂಕರ್‌ಮೈಕೊಸಿಸ್‌ (ಕಪ್ಪು ಶಿಲೀಂಧ್ರ ಅಥವಾ ಬ್ಲ್ಯಾಕ್‌ ಫಂಗಸ್)‌ ಸೋಂಕಿತರಿಗೆ ಚಿಕಿತ್ಸೆ ನೀಡಲು ಬಳಸಲಾಗುವ 'ಆ್ಯಂಫೊಟೆರಿಸಿನ್‌–ಬಿ' ವಯಲ್ಸ್ ರಫ್ತು ಮಾಡುವುದರ ಮೇಲೆ ಭಾರತ ಸರ್ಕಾರವು ಮಂಗಳವಾರ ನಿರ್ಬಂಧಗಳನ್ನು ವಿಧಿಸಿದೆ.

ವಿದೇಶ ವ್ಯಾಪಾರ ಮಹಾನಿರ್ದೇಶನಾಲಯದ (ಡಿಜಿಎಫ್‌ಟಿ) ಹೊರಡಿಸಿರುವ ಅಧಿಸೂಚನೆಯ ಪ್ರಕಾರ, 'ಆ್ಯಂಫೊಟೆರಿಸಿನ್‌–ಬಿ' ವಯಲ್ಸ್ ರಫ್ತು ಮಾಡುವುದನ್ನು ನಿರ್ಬಂಧಿತ ವರ್ಗಕ್ಕೆ ಸೇರಿಸಲಾಗಿದೆ. ಭಾರತದಿಂದ ಹೊರಗೆ ಈ ಇಂಜೆಕ್ಷನ್‌ಗಳನ್ನು ರಫ್ತು ಮಾಡಲು ಡಿಜಿಎಫ್‌ಟಿಯಿಂದ ರಫ್ತುದಾರರು ಅನುಮತಿ ಅಥವಾ ಪರವಾನಗಿಯನ್ನು ಪಡೆದಿರಬೇಕಾಗುತ್ತದೆ.

'ಆ್ಯಂಫೊಟೆರಿಸಿನ್‌–ಬಿ' ವಯಲ್ಸ್ ರಫ್ತು ಮಾಡುವುದರ ಮೇಲೆ ತಕ್ಷಣದಿಂದಲೇ ಜಾರಿಗೆ ಬರುವಂತೆ ನಿರ್ಬಂಧ ಹೇರಲಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಿದೆ.

ಕೇಂದ್ರ ಸರ್ಕಾರವು ಸೋಮವಾರ ವಿವಿಧ ರಾಜ್ಯಗಳಿಗೆ ಹೆಚ್ಚುವರಿಯಾಗಿ ಒಟ್ಟು 30,100 'ಆ್ಯಂಫೊಟೆರಿಸಿನ್‌–ಬಿ' ವಯಲ್ಸ್‌ ಹಂಚಿಕೆ ಮಾಡಿದೆ. ಅದರಲ್ಲಿ ಕರ್ನಾಟಕಕ್ಕೆ 1,930 ವಯಲ್ಸ್‌ ಹಂಚಿಕೆಯಾಗಿದೆ. ಈವರೆಗೆ ರಾಜ್ಯಕ್ಕೆ ಕೇಂದ್ರ ಸರ್ಕಾರ 12,710 ವಯಲ್ಸ್‌ ಹಂಚಿಕೆ ಮಾಡಿದೆ. ವಿವಿಧ ರಾಜ್ಯಗಳಲ್ಲಿ ದಾಖಲಾಗುತ್ತಿರುವ ಮ್ಯೂಕರ್‌ಮೈಕೊಸಿಸ್‌ ರೋಗಿಗಳ ಸಂಖ್ಯೆ ಆಧರಿಸಿ ಕೇಂದ್ರ ಸರ್ಕಾರ ಈ ಔಷಧವನ್ನು ಹಂಚಿಕೆ ಮಾಡುತ್ತಿದೆ.

ಇದನ್ನೂ ಓದಿ.. ಕಪ್ಪು ಶಿಲೀಂಧ್ರ–ನೀವು ಕೊಟ್ಟ ಔಷಧ ಸಾಕೇ: ಸದಾನಂದ ಗೌಡರಿಗೆ ಕಾಂಗ್ರೆಸ್ ಪ್ರಶ್ನೆ

ಕೋವಿಡ್‌ನಿಂದ ಗುಣಮುಖರಾದವರಲ್ಲಿ ಹಾಗೂ ಮಧುಮೇಹಿಗಳಲ್ಲಿ ಹೆಚ್ಚಾಗಿ ಮ್ಯೂಕರ್‌ಮೈಕೊಸಿಸ್‌ ಕಾಡುತ್ತಿದೆ. ಔಷಧಿಯ ಕೊರತೆ, ಸೂಕ್ತ ಸಮಯಕ್ಕೆ ಚಿಕಿತ್ಸೆ ಪಡೆದುಕೊಳ್ಳಲಾಗದೆ ಹಲವು ಮಂದಿ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಈವರೆಗೆ 1370 ಮ್ಯೂಕರ್‌ಮೈಕೊಸಿಸ್‌ ಪ್ರಕರಣಗಳು ಪತ್ತೆಯಾಗಿವೆ. ಅದರಲ್ಲಿ, 27 ಮಂದಿ ಗುಣಮುಖರಾಗಿದ್ದು, 51 ಮೃತಪಟ್ಟಿದ್ದಾರೆ.

ಇನ್ನು, 1292 ಸೋಂಕಿತರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ರಾಜ್ಯ ಸರ್ಕಾರದ ಮಾಹಿತಿಯಿಂದ ತಿಳಿದು ಬಂದಿದೆ. ಬೆಂಗಳೂರು ನಗರದಲ್ಲಿ ಅತಿ ಹೆಚ್ಚು 557 ಪ್ರಕರಣ ಪತ್ತೆಯಾಗಿದ್ದು, 540 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 11 ಮಂದಿ ಗುಣಮುಖರಾಗಿದ್ದರೆ, 6 ಮಂದಿ ಮೃತಪಟ್ಟಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು