ಭಾನುವಾರ, ಸೆಪ್ಟೆಂಬರ್ 19, 2021
29 °C

ಪಶ್ಚಿಮ ಬಂಗಾಳದ ರಾಜ್ಯಪಾಲ ಭ್ರಷ್ಟಾಚಾರಿ: ಮಮತಾ ಬ್ಯಾನರ್ಜಿ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ಕೋಲ್ಕತ್ತ: ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧನಕರ್ ವಿರುದ್ಧ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮತ್ತೊಂದು ಆರೋಪ ಮಾಡಿದ್ದಾರೆ. 1996ರ ಜೈನ್‌ ಹವಾಲಾ ಪ್ರಕರಣದ ದೋಷಾರೋಪ ಪಟ್ಟಿಯಲ್ಲಿ ಧನಕರ್ ಅವರ ಹೆಸರನ್ನು ಉಲ್ಲೇಖಿಸಲಾಗಿತ್ತು ಎಂದು ಸೋಮವಾರ ಹೇಳಿದ್ದಾರೆ. ಆದರೆ ರಾಜ್ಯಪಾಲರು ಈ ಆರೋಪವನ್ನು ನಿರಾಕರಿಸಿದ್ದಾರೆ.

ಧನಕರ್‌ ಅವರು ಭ್ರಷ್ಟ ಎಂದೂ ಮಮತಾ ಹೇಳಿದ್ಧಾರೆ.

‘ಧನಕರ್ ಅವರು ನ್ಯಾಯಾಲಯಕ್ಕೆ ಹೋಗಿ ತಮ್ಮ ಹೆಸರನ್ನು ತೆರವು ಮಾಡಿಸಿಕೊಂಡಿದ್ದಾರೆ. ಆದರೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದ್ದು, ಅದು ಕೋರ್ಟ್ ಎದುರು ಬಾಕಿ ಇದೆ. ಹೀಗಿದ್ದೂ  ಬಂಗಾಳದ ರಾಜ್ಯಪಾಲರಾಗಿ ಧನಕರ್ ಅವರು ಮುಂದುವರಿಯಲು ಕೇಂದ್ರ ಸರ್ಕಾರ ಇನ್ನೂ ಹೇಗೆ ಅವಕಾಶ ನೀಡುತ್ತದೆ’ ಎಂದು ಮಮತಾ ಪ್ರಶ್ನಿಸಿದ್ದಾರೆ.

ಇಂತಹ ಆರೋಪಗಳಿರುವ ರಾಜ್ಯಪಾಲರಿಗೆ ಕೇಂದ್ರ ಸರ್ಕಾರ ಏಕೆ ಅವಕಾಶ ನೀಡುತ್ತದೆ? ಕೇಂದ್ರ ಸರ್ಕಾರವು ಆರೋ‍‍ಪಪಟ್ಟಿ ತೆಗೆದು ಅವರ ಹೆಸರು ಇದೆಯೇ ಎಂದು ನೋಡಲಿ ಎಂದು ಹೇಳಿದ್ದಾರೆ.

ಧನಕರ್ ಅವರನ್ನು ಬಂಗಾಳ ರಾಜ್ಯಪಾಲ ಹುದ್ದೆಯಿಂದ ತೆಗೆದುಹಾಕುವಂತೆ ಕೋರಿ ಕೇಂದ್ರಕ್ಕೆ ಬರೆದ ಮೂರು ಪತ್ರಗಳನ್ನು ಉಲ್ಲೇಖಿಸಿದ ಮಮತಾ, ಕೇಂದ್ರವು ಈಗಲಾದರೂ ತಮ್ಮ ಬೇಡಿಕೆಯನ್ನು ಪರಿಗಣಿಸಬೇಕು ಎಂದು ಹೇಳಿದರು.

ಆರೋಪ ನಿರಾಕರಿಸಿದ ಧನಕರ್
ಮಮತಾ ಮಾಡಿರುವ ಆರೋಪ ಸತ್ಯಕ್ಕೆ ದೂರ ಎಂದು ರಾಜ್ಯಪಾಲ ಧನಕರ್ ಹೇಳಿದ್ದಾರೆ. ಹವಾಲಾ ಪ್ರಕರಣದಲ್ಲಿ ಯಾರೂ ಶಿಕ್ಷೆಗೊಳಗಾಗಿಲ್ಲ. ಮುಖ್ಯಮಂತ್ರಿಯವರು ಕೆಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಆದರೆ ತಮ್ಮ ಹೆಸರು ಪ್ರಕರಣದಲ್ಲಿ ಇಲ್ಲ ಎಂದು ಹೇಳಿದ್ದಾರೆ.

‘ಮಮತಾ ಅವರಂತಹ ಹಿರಿಯ ರಾಜಕಾರಣಿಯು ಉದ್ವಿಗ್ನತೆಯನ್ನು ಸೃಷ್ಟಿಲು ಇಂತಹ ಸುಳ್ಳು ಆರೋಪಗಳನ್ನು ಮಾಡುತ್ತಾರೆ ಎಂದು ನಾನು ಎಂದಿಗೂ ನಿರೀಕ್ಷಿಸಿರಲಿಲ್ಲ’ ಎಂದು ಧನಕರ್ ಹೇಳಿದ್ದಾರೆ.

***

ರಾಜ್ಯಪಾಲರು ಉತ್ತರ ಬಂಗಾಳಕ್ಕೆ ದಿಢೀರ್‌ ಭೇಟಿ ನೀಡಿದ್ದರ ಕಾರಣವೇನು? ಉತ್ತರ ಬಂಗಾಳವನ್ನು ವಿಭಜಿಸಲು ಪಿತೂರಿ ನಡೆಸಲಾಗುತ್ತಿದೆ ಎಂದು ನಾನು ಗ್ರಹಿಸಬಲ್ಲೆ.
-ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು