ಗುರುವಾರ , ಮಾರ್ಚ್ 23, 2023
22 °C

ಊಟ ಕೊಡಲು ಸರ್ಕಾರ ಝೊಮ್ಯಾಟೊ ನಡೆಸುತ್ತಿಲ್ಲ: ಪ್ರವಾಹ ಪೀಡಿತರನ್ನು ಗದರಿದ ಅಧಿಕಾರಿ

ಸಂಜಯ್‌ ಪಾಂಡೆ Updated:

ಅಕ್ಷರ ಗಾತ್ರ : | |

ಲಖನೌ: ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಲು ವಿಫಲವಾಗಿದ್ದಕ್ಕೆ, ಜನರಿಗೆ ನೆರವು ಒದಗಿಸುವಲ್ಲಿ ಆಗದೇ ಇದ್ದದ್ದಕ್ಕೆ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತವಾಗಿದೆ. ಹೀಗಿರುವಾಗಲೇ, ಆಹಾರಕ್ಕಾಗಿ ಮೊರೆಯಿಟ್ಟ ಪ್ರವಾಹ ಸಂತ್ರಸ್ತರಿಗೆ ಐಪಿಎಸ್‌ ಅಧಿಕಾರಿಯೊಬ್ಬರು ಗದರಿರುವ ಘಟನೆ ಬೆಳಕಿಗೆ ಬಂದಿದೆ. ‘ನಿಮಗೆ ಊಟ ಕೊಡಲು ಸರ್ಕಾರ ಝೊಮ್ಯಾಟೊ ಸೇವೆ ನೀಡುತ್ತಿಲ್ಲ’ ಎಂದು ಹೇಳಿರುವುದು ಬಹಿರಂಗವಾಗಿದೆ.

‘ನಾವು ನಿಮಗೆ ಕ್ಲೋರಿನ್ ಮಾತ್ರೆಗಳನ್ನು ನೀಡುತ್ತೇವೆ. ನಿಮಗೆ ಚಿಕಿತ್ಸೆ ನೀಡಲು ವೈದ್ಯರಿರುತ್ತಾರೆ. ಆದರೆ ನಾವು ಹಳ್ಳಿಗಳಲ್ಲಿ ನಿಮಗೆ ಆಹಾರವನ್ನು ನೀಡಲು ಸಾಧ್ಯವಿಲ್ಲ. ಸರ್ಕಾರವು ಝೊಮ್ಯಾಟೊ ಸೇವೆ ಒದಗಿಸುತ್ತಿಲ್ಲ. ಪ್ರವಾಹದ ಪ್ರದೇಶದ ಪರಿಹಾರ ಕೇಂದ್ರಗಳಿಗೆ ಹೋಗುವವರಿಗಷ್ಟೇ ಆಹಾರ ಸಿಗುತ್ತದೆ’ ಎಂದು ಅಂಬೇಡ್ಕರ್ ನಗರದ ಜಿಲ್ಲಾ ಮ್ಯಾಜಿಸ್ಟ್ರೇಟ್ ಸ್ಯಾಮ್ಯುಯೆಲ್ ಪಾಲ್ ಅವರು ಸಂತ್ರಸ್ತರಿಗೆ ಹೇಳಿದ್ದಾರೆ.

ಅಧಿಕಾರಿ ಜನರನ್ನು ಗದರುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಪ್ರತಿಪಕ್ಷಗಳು ಮತ್ತು ನೆಟ್ಟಿಗರ ಟೀಕೆಗೆ ಗುರಿಯಾಗಿದೆ. ‘ಜಿಲ್ಲಾ ಮ್ಯಾಜಿಸ್ಟ್ರೇಟರನ್ನು ತಕ್ಷಣವೇ ತೆಗೆದುಹಾಕಬೇಕು. ಅವರು ಕೆಲಸಕ್ಕೆ ಯೋಗ್ಯರಲ್ಲ’ ಎಂದು ಸಮಾಜವಾದಿ ಪಕ್ಷದ (ಎಸ್‌ಪಿ) ನಾಯಕರೊಬ್ಬರು ಆಗ್ರಹಿಸಿದ್ದಾರೆ.

ಪ್ರವಾಹ ಪೀಡಿತರಿಗೆ ನೆರವು ಒದಗಿಸದ ಹಿನ್ನೆಲೆಯಲ್ಲಿ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರೂ ತಮ್ಮದೇ ಸರ್ಕಾರವನ್ನು ತೀವ್ರವಾಗಿ ಟೀಕಿಸಿದ್ದಾರೆ. ‘ಪ್ರವಾಹದ ಕಳಪೆ ನಿರ್ವಹಣೆಯಿಂದಾಗಿ ಜನರು ತೊಂದರೆ ಅನುಭವಿಸುತ್ತಿದ್ದಾರೆ’ ಎಂದು ಅವರು ಹೇಳಿದ್ದಾರೆ.

ಪ್ರವಾಹ ಪರಿಸ್ಥಿತಿ ಇದ್ದರೂ ಪಿಇಟಿ (ಪ್ರಾಥಮಿಕ ಅರ್ಹತಾ ಪರೀಕ್ಷೆ) ಪರೀಕ್ಷೆಯನ್ನು ಮುಂದೂಡದ ಸಿಎಂ ಯೋಗಿ ಆದಿತ್ಯನಾಥ್ ಅವರ ವಿರುದ್ಧ ಬಿಜೆಪಿ ಸಂಸದ ವರುಣ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಉತ್ತರ ಪ್ರದೇಶದ ಪ್ರವಾಹಕ್ಕೆ ಸಿಲುಕಿದೆ. ಹೀಗಿದ್ದರೂ 37 ಲಕ್ಷ ಅಭ್ಯರ್ಥಿಗಳು ಪಿಇಟಿ ಪರೀಕ್ಷೆ ಬರೆಯಲು ಹೊರಟಿದ್ದಾರೆ. ಪ್ರಶ್ನೆಗೆ ಉತ್ತರ ಬರೆಯುವುದಕ್ಕಿಂತಲೂ ಪರೀಕ್ಷಾ ಕೇಂದ್ರಗಳನ್ನು ತಲುಪುವುದೇ ಈಗ ದೊಡ್ಡ ಸವಾಲಾಗಿದೆ. ನೆಲದ ವಾಸ್ತವ ಬಹುಶಃ ಆಕಾಶದಿಂದ ಕಂಡಿರಲಾರದು’ ಎಂದು ಟೀಕಿಸಿದ್ದಾರೆ.

ಯೋಗಿ ಆದಿತ್ಯನಾಥ್ ಅವರು ಒಂದೆರಡು ದಿನಗಳ ಹಿಂದೆ ಪ್ರವಾಹದ ವೈಮಾನಿಕ ಸಮೀಕ್ಷೆ ನಡೆಸಿದ್ದರು. ವರುಣ್‌ ಗಾಂಧಿ ಅವರು ಈ ವಿಚಾರವನ್ನು ಗೇಲಿ ಮಾಡಿದ್ದಾರೆ.

ಕಳೆದ ಕೆಲವು ದಿನಗಳಲ್ಲಿ ಉತ್ತರ ಪ್ರದೇಶದಲ್ಲಿ ಮಳೆಯಿಂದ ಉಂಟಾದ ಪ್ರವಾಹದಿಂದ 21 ಜಿಲ್ಲೆಗಳ 1,600 ಕ್ಕೂ ಹೆಚ್ಚು ಹಳ್ಳಿಗಳು ಹಾನಿಗೊಳಗಾಗಿವೆ. ಗಂಗಾ, ಘಾಗ್ರಾ ಸೇರಿದಂತೆ ಹಲವಾರು ಪ್ರಮುಖ ನದಿಗಳು ಹಲವಾರು ಸ್ಥಳಗಳಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು