ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳು ’ದಂತ ಗೋಪುರ’ಗಳಲ್ಲಿ ಇದ್ದಾರಾ: ಚಾಟಿ ಬೀಸಿದ ದೆಹಲಿ ಹೈಕೋರ್ಟ್

ದೇಶದಲ್ಲಿ ‘ಸ್ಪುಟ್ನಿಕ್‌ ವಿ’ ಉತ್ಪಾದನೆ, ’ಅವಕಾಶ’ವಾಗಿ ಪರಿಗಣಿಸಲು ಸಲಹೆ
Last Updated 18 ಮೇ 2021, 19:30 IST
ಅಕ್ಷರ ಗಾತ್ರ

ನವದೆಹಲಿ: ‘ಪ್ರಸ್ತುತ ಕೋವಿಡ್‌–19 ಬಹುತೇಕ ಪ್ರತಿಯೊಂದು ಕುಟುಂಬವನ್ನು ಬಾಧಿಸುತ್ತಿದೆ. ಆದರೂ, ಕೇಂದ್ರ ಸರ್ಕಾರದ ಅಧಿಕಾರಿಗಳು ವಾಸ್ತವದ ಅರಿವೇ ಇಲ್ಲದೇ ಇನ್ನೂ‘ದಂತ ಗೋಪುರ’ಗಳಲ್ಲಿ ಜೀವಿಸುತ್ತಿದ್ದಾರೆ’ ಎಂದು ದೆಹಲಿ ಹೈಕೋರ್ಟ್‌ ಮಂಗಳವಾರ ಚಾಟಿ ಬೀಸಿದೆ.

ಹಲವರ ಜೀವ, ಜೀವನ ಕಸಿಯುತ್ತಿರುವ ಕೋವಿಡ್‌ ಪಿಡುಗು ಎದುರಿಸಲು ಸ್ಪಂದಿಸದ ಕೇಂದ್ರ ಸರ್ಕಾರವನ್ನು ಉದ್ದೇಶಿಸಿ ನ್ಯಾಯಮೂರ್ತಿಗಳಾದ ಮನ್‌ಮೋಹನ್‌ ಮತ್ತು ನವೀನ್‌ ಚಾವ್ಲಾ ಅವರಿದ್ದ ಪೀಠವು ‘ದೇವರೇ ಈ ದೇಶವನ್ನು ಕಾಪಾಡಬೇಕು’ ಎಂದು ಅಭಿಪ್ರಾಯ ವ್ಯಕ್ತಪಡಿಸಿತು.

‘ಲಸಿಕೆ ಕೊರತೆ ಎದುರಿಸುತ್ತಿರುವ ವೇಳೆಯಲ್ಲಿ ಭಾರತದಲ್ಲಿ ‘ಸ್ಪುಟ್ನಿಕ್ ವಿ’ ಲಸಿಕೆ ಉತ್ಪಾದನೆಯನ್ನು ಒಂದು ಅವಕಾಶ ಎಂದು ಪರಿಗಣಿಸಬೇಕು ಎಂದು ಪೀಠ ಹೇಳಿತು. ದೆಹಲಿ ಮೂಲದ ಪನೇಷಿಯಾ ಬಯೊಟೆಕ್‌ ಸಂಸ್ಥೆ ಜುಲೈ 2020ರ ಆದೇಶದ ಮಾರ್ಪಾಡು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.

ದೇಶದ ಪನೇಷಿಯಾ ಬಯೊಟೆಕ್‌ ಮತ್ತು ರಷ್ಯಾದ ಡೈರೆಕ್ಟ್‌ ಇನ್‌ವೆಸ್ಟ್‌ಮೆಂಟ್ ಫಂಡ್‌ (ಆರ್‌ಡಿಐಎಫ್‌) ನಡುವೆ ‘ಸ್ಪುಟ್ನಿಕ್ ವಿ’ ಲಸಿಕೆ ಉತ್ಪಾದನೆಗೆ ಸಹಭಾಗಿತ್ವ ಮೂಡಿರುವುದು ಒಂದು ಅವಕಾಶ. ಇಂಥ ಸಂದರ್ಭದಲ್ಲಿ ಉನ್ನತ ಅಧಿಕಾರಿಗಳಿಂದ 30 ನಿಮಿಷದಲ್ಲಿಯೇ ಅನುಮತಿ ಸಿಗುವಂತಾಗಬೇಕು ಎಂದು ಪೀಠ ಹೇಳಿತು.

‘ಯಾರೂ ಈ ಬಗ್ಗೆ ಚಿಂತನೆ ನಡೆಸುತ್ತಿಲ್ಲ. ಲಕ್ಷಾಂತರ ಲಸಿಕೆ ಪಡೆಯುವ ಅವಕಾಶ ಸರ್ಕಾರಕ್ಕೆ ಇದೆ. ಇದನ್ನು ಒಂದು ಅವಕಾಶವಾಗಿ ನೋಡಬೇಕು. ಒಂದು ವೇಳೆ ಇದು ಆಗದಿದ್ದರೆ ಸಾವುಗಳು ಸಂಭವಿಸುತ್ತಲೇ ಇರುತ್ತವೆ. ನಿತ್ಯ ಒಂದಲ್ಲ ಒಂದು ಕೋರ್ಟ್‌ಗಳು ಚಾಟಿ ಬೀಸುತ್ತಿದ್ದರೂ ನೀವು ಇನ್ನೂ ಎಚ್ಚೆತ್ತುಕೊಂಡಿಲ್ಲ’ ಎಂದು ಕಟುವಾಗಿ ಹೇಳಿತು.

‘ಯಾವ ಅಧಿಕಾರಿ ನಿಮಗೆ ಸೂಚನೆ ಕೊಡುತ್ತಿದ್ದಾರೆ. ಅವರು ವಾಸ್ತವದಲ್ಲಿ ಜೀವಿಸುತ್ತಿದ್ದಾರಾ? ದೇಶವನ್ನು ದೇವರೇ ಕಾಪಾಡಬೇಕು. ಅದಕ್ಕೆ ಇಂಥ ಸ್ಥಿತಿ ಎದುರಿಸುತ್ತಿದ್ದೇವೆ. ದೇಶದಲ್ಲಿ ಈಗ ಲಸಿಕೆಯ ಕೊರತೆ ಇದೆ. ಸಾಕಷ್ಟು ಸಾವುಗಳು ಸಂಭವಿಸುತ್ತಿವೆ ಎಂಬುದನ್ನು ನಿಮ್ಮ ಅಧಿಕಾರಿ ನೋಡುತ್ತಿಲ್ಲವೇ?’ ಎಂದು ಪ್ರಶ್ನಿಸಿತು.

‘ಕೇಂದ್ರ ಸರ್ಕಾರದ ನಿಲುವು ಕುರಿತು ಕಟುವಾಗಿ ಟೀಕಿಸಿದ ಪೀಠವು, ‘ನಿಮ್ಮಲ್ಲಿ (ಸರ್ಕಾರ) ಲಸಿಕೆ ಕಡಿಮೆ ಇದೆ. ಆದರೂ ತೀರ್ಮಾನ ತೆಗೆದುಕೊಳ್ಳುತ್ತಿಲ್ಲ. ನಕಾರಾತ್ಮಕವಾಗಿ ಇರಬೇಡಿ. ಬೆಂಕಿ ವ್ಯಾಪಿಸುತ್ತಿದ್ದರೂ ಯಾರೂ ಗಮನಹರಿಸಿದಂತಿಲ್ಲ ನಿಮಗೆ ವಿಸ್ತೃತ ಚಿತ್ರಣವೇ ಅರ್ಥವಾಗುತ್ತಿಲ್ಲವೇ?’ ಎಂದು ಖಾರವಾಗಿ ಪ್ರಶ್ನಿಸಿತು.

2010ರಲ್ಲಿ ಎಚ್‌1ಎನ್‌1ಗೆ ಔಷಧ ಉತ್ಪಾದನೆಗೆ ಸಂಬಂಧಿಸಿ ಪನೇಷಿಯಾ ಬಯೊಟೆಕ್‌ ಪರವಾಗಿ ಮಧ್ಯಸ್ಥಿಕೆ ನ್ಯಾಯಮಂಡಳಿಯು ಆದೇಶ ನೀಡಿತ್ತು. ಈ ಕುರಿತು ಸಲ್ಲಿಸಿದ ಅರ್ಜಿಯಲ್ಲಿ ಪನೇಷಿಯಾ ಬಯೊಟೆಕ್‌ ಸಂಸ್ಥೆ, ‘ಸ್ಪುಟ್ನಿಕ್‌ ವಿ ಲಸಿಕೆಯ ಉತ್ಪಾದನೆ ಆರಂಭವಾಗಿದ್ದು, ಚುರುಕುಗೊಳಿಸಬೇಕಿದೆ’ ಎಂದು ತಿಳಿಸಿತ್ತು.

ಈ ಸಂಬಂಧ ಕೇಂದ್ರಕ್ಕೆ ನೋಟಿಸ್ ನೀಡಿದ ಪೀಠವು ಒಂದು ವಾರದಲ್ಲಿ ಪ್ರತಿಕ್ರಿಯೆ ದಾಖಲಿಸಬೇಕು ಎಂದು ತಿಳಿಸಿತು. ಪ್ರಕರಣದ ವಿಚಾರಣೆಯನ್ನು ಮೇ 31ಕ್ಕೆ ನಿಗದಿಪಡಿಸಿತು.

ವಹಿವಾಟು ವಿಸ್ತರಣೆಗೆ ಅನುಮತಿ ಸಿಗದಿದ್ದರೆ ಲಸಿಕೆ ಉತ್ಪಾದನೆ ಪ್ರಕ್ರಿಯೆ ವಿಳಂಬವಾಗಲಿದೆ ಎಂದು ಕಂಪನಿ ಪ್ರತಿನಿಧಿಸಿದ್ದ ವಕೀಲ ಸಂದೀಪ್‌ ಸೇಥಿ ಪ್ರತಿಕ್ರಿಯಿಸಿದರು. ಕೇಂದ್ರ ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್‌ ಬಲ್‌ಬೀರ್ ಸಿಂಗ್ ಅವರು,‘ಸ್ಪುಟ್ನಿಕ್ ವಿ ಉತ್ಪಾದನೆಯಿಂದ ದೇಶಕ್ಕೆ ಲಾಭವಾಗದು. ಅದು, ಆರ್‌ಡಿಐಎಫ್‌ಗೆ ಜಾಗತಿಕ ಪೂರೈಕೆಗೆ ಬಳಕೆ ಆಗಲಿದೆ. ಲಸಿಕೆ ಭಾರತದ ಹೊರಗೆ ಮಾರಾಟವಾಗುವ ಕಾರಣ ಅಂತಹ ತುರ್ತು ಇಲ್ಲ’ ಎಂದರು.

ಆದರೆ, ಇದಕ್ಕೆ ಸೇಥಿ ಅವರು ಸರ್ಕಾರದ ಸಮ್ಮತಿಯಿಲ್ಲದೇ ಉತ್ಪಾದನೆಯಾದ ಯಾವುದೇ ಔಷಧವನ್ನು ರಫ್ತು ಮಾಡಲು ಆಗುವುದಿಲ್ಲ ಎಂದು ಪ್ರತಿಕ್ರಿಯಿಸಿದರು. ವಕೀಲರಾದ ರಾಜೇಶ್‌ ರಂಜನ್ ಮತ್ತು ಬಿ.ಎಸ್.ಶುಕ್ಲಾ ಅವರು ಕೇಂದ್ರವನ್ನು ಪ್ರತಿನಿಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT