ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ಮೌನ ಅನುಮಾನಾಸ್ಪದ: ಬಿಕೆಯು ನಾಯಕ ರಾಕೇಶ್ ಟಿಕಾಯತ್ ಸಂದೇಹ

Last Updated 1 ಮಾರ್ಚ್ 2021, 18:54 IST
ಅಕ್ಷರ ಗಾತ್ರ

ಬಿಜ್ನೋರ್ (ಉತ್ತರ ಪ್ರದೇಶ): ‘ರೈತರ ಪ್ರತಿಭಟನೆ ಬಗ್ಗೆ ಕೇಂದ್ರ ಸರ್ಕಾರವು ಕೆಲವು ದಿನಗಳಿಂದ ಮೌನವಹಿಸಿದೆ. ರೈತರ ಪ್ರತಿಭಟನೆಯ ವಿರುದ್ಧ ಕ್ರಮ ತೆಗೆದುಕೊಳ್ಳಲು ಸರ್ಕಾರ ಯೋಜಿಸಿದೆ ಎಂಬುದನ್ನು ಇದು ಸೂಚಿಸುತ್ತದೆ’ ಎಂದು ಭಾರತೀಯ ಕಿಸಾನ್ ಯೂನಿಯನ್‌ (ಬಿಕೆಯು) ನಾಯಕ ರಾಕೇಶ್ ಟಿಕಾಯತ್ ಸಂದೇಹ ವ್ಯಕ್ತಪಡಿಸಿದ್ದಾರೆ.

ಇಲ್ಲಿ ನಡೆದ ರೈತ ಮಹಾಪಂಚಾಯಿತಿಯ ನಂತರ ಪತ್ರಕರ್ತರ ಜತೆ ಮಾತನಾಡುವಾಗ ಅವರು ಈ ಸಂದೇಹ ವ್ಯಕ್ತಪಡಿಸಿದ್ದಾರೆ. ‘10-15 ದಿನಗಳಿಂದ ಸರ್ಕಾರ ಈ ಪ್ರತಿಭಟನೆಯ ಬಗ್ಗೆ ಏನನ್ನೂ ಹೇಳುತ್ತಿಲ್ಲ. ಪ್ರತಿಭಟನೆನಿರತ ರೈತರ ಜತೆ ಮಾತುಕತೆ ನಡೆಸುವ ಪ್ರಸ್ತಾವವನ್ನು ಸರ್ಕಾರವೇ ಮುಂದಿಡಬೇಕು. ಆದರೆ ಸರ್ಕಾರ ಈ ಕೆಲಸ ಮಾಡುತ್ತಿಲ್ಲ. ಸರ್ಕಾರ ಬೇರೆ ಏನೋ ಮಾಡಲು ಹೊರಟಿದೆ ಎಂಬುದನ್ನು ಇದು ಸೂಚಿಸುತ್ತದೆ’ ಎಂದು ಅವರು ಹೇಳಿದ್ದಾರೆ.

‘ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡರೂ, ರೈತರು ತಮ್ಮ ಹೋರಾಟದಿಂದ ಒಂದು ಹೆಜ್ಜೆಯೂ ಹಿಂದೆ ಸರಿಯುವುದಿಲ್ಲ. ರೈತರು ಎಲ್ಲದಕ್ಕೂ ಸಿದ್ಧರಾಗಿದ್ದಾರೆ. ಬೆಳೆ ಬೆಳೆಯಲು ಮತ್ತು ಹೋರಾಟ ಮುಂದುವರಿಸಲು ಸಿದ್ಧತೆ ನಡೆಸಿದ್ದಾರೆ. ಸರ್ಕಾರ ಯಾವಾಗ ಮಾತುಕತೆಗೆ ಬರುತ್ತದೆಯೋ ಆಗ ಬರಲಿ. ಮಾರ್ಚ್ 24ರವರೆಗೆ ದೇಶದಾದ್ಯಂತ ಹಲವೆಡೆ ರೈತ ಮಹಾಪಂಚಾಯಿತಿಗಳು ನಡೆಯಲಿವೆ. ಈ ಕಾರ್ಯಕ್ರಮಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ’ ಎಂದು ಅವರು ಹೇಳಿದ್ದಾರೆ.

‘ಕೆಲವು ರೈತರು ತಮ್ಮ ಬೆಳೆಗಳನ್ನು ನಾಶಮಾಡುತ್ತಿದ್ದಾರೆ ಎಂಬ ವರದಿಗಳು ಇವೆ. ಅಂತಹ ಸಂದರ್ಭ ಇನ್ನೂ ಬಂದಿಲ್ಲ ಎಂಬುದನ್ನು ರೈತರು ಅರ್ಥಮಾಡಿಕೊಳ್ಳಬೇಕು. ರೈತರು ತಮ್ಮ ಬೆಳೆಗಳನ್ನು ನಾಶಮಾಡಬಾರದು. ಆದರೆ ಈ ಬಗ್ಗೆಯೂ ಸರ್ಕಾರ ಏನೂ ಮಾತನಾಡುತ್ತಿಲ್ಲ. ಬೆಳೆ ನಾಶಮಾಡಬೇಡಿ ಎಂದು ಸರ್ಕಾರ ರೈತರಿಗೆ ಏಕೆ ಹೇಳುತ್ತಿಲ್ಲ’ ಎಂದು ಅವರು ಪ್ರಶ್ನಿಸಿದ್ದಾರೆ.

‘ಉತ್ತರ ಪ್ರದೇಶದಲ್ಲಿ ಗೋಧಿ ಕಟಾವಿಗೆ ಸಿದ್ಧವಾಗಿದೆ. ಸರ್ಕಾರವು ಗೋಧಿಯನ್ನು ಕನಿಷ್ಠ ಬೆಂಬಲ ಬೆಲೆ
ಯಲ್ಲಿ ಖರೀದಿಸದೇ ಇದ್ದರೆ, ರಾಜ್ಯದ ಎಲ್ಲಾ ಜಿಲ್ಲಾಕೇಂದ್ರಗಳಲ್ಲಿ ಧರಣಿ ನಡೆಸ
ಲಿದ್ದೇವೆ’ ಎಂದು ಎಚ್ಚರಿಕೆ ನೀಡಿದ್ದಾರೆ.

***

ಜನವರಿ 26ರ ರೈತರ ಟ್ರ್ಯಾಕ್ಟರ್ ರ್‍ಯಾಲಿಯ‌ ವೇಳೆ ಹಿಂಸಾಚಾರ ನಡೆದುದಕ್ಕೆ ರೈತರು ಕಾರಣರಲ್ಲ. ಬದಲಿಗೆ ಅಂದು ಎಲ್ಲಾ ಸಮಸ್ಯೆಗಳನ್ನು ಸೃಷ್ಟಿಸಿದ್ದು ಸರ್ಕಾರ

- ರಾಕೇಶ್ ಟಿಕಾಯತ್, ಬಿಕೆಯು ನಾಯಕ

***

ರೈತರು ಭತ್ತ ಮತ್ತು ಗೋಧಿಯನ್ನೇ ಬೆಳೆಯಬೇಕಿಲ್ಲ. ಬೇರೆ ಬೆಳೆಗಳು, ಸಲಾಡ್‌ಗಳಲ್ಲಿ ಬಳಸುವಂತಹ ತರಕಾರಿಗಳನ್ನು ಬೆಳೆಯುವಂತಹ ವಾತಾವರಣವನ್ನು ನಾವು ಸೃಷ್ಟಿಸಿದ್ದೇವೆ

- ನರೇಂದ್ರ ಮೋದಿ, ಪ್ರಧಾನಿ

***

‘ರೈತರು ಲಸಿಕೆ ಹಾಕಿಸಿಕೊಳ್ಳುವುದಿಲ್ಲ’

ಪ್ರತಿಭಟನೆನಿರತ ರೈತರು ಕೋವಿಡ್‌-19 ಲಸಿಕೆ ಹಾಕಿಸಿಕೊಳ್ಳುವುದಿಲ್ಲ ಎಂದು ರೈತ ಸಂಘಟನೆಗಳು ಹೇಳಿವೆ. ಆದರೆ ಸ್ವಯಂಪ್ರೇರಿತರಾಗಿ ರೈತರು ಲಸಿಕೆ ಹಾಕಿಸಿಕೊಳ್ಳುವುದಿದ್ದರೆ, ಅದನ್ನು ತಡೆಯುವುದಿಲ್ಲ ಎಂದು ರೈತ ನಾಯಕರು ಹೇಳಿದ್ದಾರೆ.

‘ಲಸಿಕೆ ಕೇಂದ್ರಕ್ಕೆ ಹೋಗಿ ನಾನು ಲಸಿಕೆ ಹಾಕಿಸಿಕೊಳ್ಳುವುದಿಲ್ಲ. ನಾವು ಕೊರೊನಾವನ್ನು ಈಗಾಗಲೇ ಕೊಂದಿದ್ದೇವೆ. ರೈತರು ತಮ್ಮ ಹೊಲಗಳಲ್ಲಿ ಮೈಬಗ್ಗಿಸಿ ದುಡಿಯುವ ಕಾರಣ, ಅವರ ರೋಗನಿರೋಧಕ ಶಕ್ತಿ ಪ್ರಬಲವಾಗಿದೆ. ರೈತರು ಕೊರೊನಾವೈರಸ್‌ಗೆ ಹೆದರುವುದಿಲ್ಲ’ ಎಂದು ಸಂಯುಕ್ತ ಕಿಸಾನ್ ಮೋರ್ಚಾದ ಮುಂದಾಳು ಬಲಬೀರ್ ಸಿಂಗ್ ರಾಜೇವಾಲ್ (80) ಅವರು ಹೇಳಿದ್ದಾರೆ.

‘ನಾವು ಕೋವಿಡ್‌ಗೆ ಹೆದರುವುದಿಲ್ಲ. ದೆಹಲಿಯ ಗಡಿಗಳಲ್ಲಿ ಸಾವಿರಾರು ರೈತರು ಕೂತು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಈವರೆಗೆ ಇಲ್ಲಿ ಒಂದೂ ಕೋವಿಡ್‌ ಪ್ರಕರಣ ಪತ್ತೆಯಾಗಿಲ್ಲ. ನಾನು ಲಸಿಕೆ ಹಾಕಿಸಿಕೊಳ್ಳುವುದಿಲ್ಲ’ ಎಂದು ಸಂಯುಕ್ತ ಕಿಸಾನ್ ಮೋರ್ಚಾದ ಮತ್ತೊಬ್ಬ ನಾಯಕ ಕುಲವಂತ ಸಿಂಗ್ ಸಂಧು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT