ಮಂಗಳವಾರ, ಸೆಪ್ಟೆಂಬರ್ 29, 2020
28 °C
ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌‌ ನಾಯಕ ರಾಹುಲ್‌ ಗಾಂಧಿ ವಾಗ್ದಾಳಿ

ಹಳಿ ತಪ್ಪಿದ ಆರ್ಥಿಕತೆ ಮೇಲಿನ ಬಹುದೊಡ್ಡ ದಾಳಿಯೇ ಜಿಎಸ್‌ಟಿ: ರಾಹುಲ್‌ ಗಾಂಧಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ : ‘ಎನ್‌ಡಿಎ ಸರ್ಕಾರವು ಜಾರಿಗೆ ತಂದಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ನೀತಿಯು ಭಾರತದ ಹದಗೆಟ್ಟ ಆರ್ಥಿಕತೆ ಮೇಲಿನ ಎರಡನೇ ಅತಿ ದೊಡ್ಡ ದಾಳಿಯಾಗಿದೆ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಭಾನುವಾರ ವಾಗ್ದಾಳಿ ನಡೆಸಿದ್ದಾರೆ.

‘ಮೋದಿ ಸರ್ಕಾರವು ಆರ್ಥಿಕತೆಯನ್ನು ನಾಶ ಮಾಡಿದ್ದು ಹೇಗೆ’ ಎಂಬ ಶೀರ್ಷಿಕೆಯಡಿ ಬಿಡುಗಡೆ ಮಾಡಿರುವ ಮೂರನೇ ವಿಡಿಯೊದಲ್ಲಿ ‘ಜಿಎಸ್‌ಟಿಯು ‘ಗಬ್ಬರ್‌ ಸಿಂಗ್‌ ಟ್ಯಾಕ್ಸ್’. ಈ ನೀತಿಯು ಸಂಪೂರ್ಣ ವೈಫಲ್ಯ ಕಂಡಿದೆ. ಇದು ಬಡವರು, ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳ ಮೇಲಿನ ದಾಳಿಯೂ ಹೌದು’ ಎಂದು ರಾಹುಲ್‌ ವ್ಯಾಖ್ಯಾನಿಸಿದ್ದಾರೆ.

‘ನೋಟು ರದ್ಧತಿಯು ದೇಶದ ಅಸಂಘಟಿತ ವಲಯದ ಮೇಲಿನ ಮೊದಲ ದಾಳಿಯಾಗಿತ್ತು. ಜಿಎಸ್‌ಟಿಯು ತೆರಿಗೆ ನೀತಿಯಲ್ಲ. ಅದು ರೈತರು, ಬಡವರು ಹಾಗೂ ಕಾರ್ಮಿಕರ ಮೇಲಿನ ದಾಳಿ. ಇದನ್ನು ನಾವು ಮನಗಾಣಬೇಕು. ಈ ನೀತಿಯ ವಿರುದ್ಧ ಗಟ್ಟಿಯಾಗಿ ಧ್ವನಿ ಎತ್ತಬೇಕು’ ಎಂದು ಅವರು ಕರೆ ನೀಡಿದ್ದಾರೆ.

‘ಜಿಡಿಪಿಯ ಐತಿಹಾಸಿಕ ಕುಸಿತಕ್ಕೆ ನರೇಂದ್ರ ಮೋದಿ ಸರ್ಕಾರ ಜಾರಿಗೆ ತಂದಿರುವ ಗಬ್ಬರ್‌ ಸಿಂಗ್‌ ಟ್ಯಾಕ್ಸ್‌ (ಜಿಎಸ್‌ಟಿ) ಕಾರಣ. ಇದರಿಂದ ಕೋಟ್ಯಂತರ ಉದ್ಯೋಗ ನಷ್ಟವಾಗಿದೆ. ಇದು ಲಕ್ಷಾಂತರ ಸಣ್ಣ ಉದ್ಯಮಗಳನ್ನು ಕಸಿದುಕೊಂಡಿದೆ. ಯುವಕರ ಮತ್ತು ರಾಜ್ಯಗಳ ಆರ್ಥಿಕ ಭವಿಷ್ಯವನ್ನು ನಾಶಗೊಳಿಸಿದೆ. ಜಿಎಸ್‌ಟಿ ಎಂದರೆ ಆರ್ಥಿಕ ವಿನಾಶ’ ಎಂದು ಕಿಡಿಕಾರಿದ್ದಾರೆ.

‘ಜಿಎಸ್‌ಟಿಯು ಯುಪಿಎ ಸರ್ಕಾರದ ಪರಿಕಲ್ಪನೆಯಾಗಿತ್ತು. ಅದರರ್ಥ ಒಂದು ತೆರಿಗೆ, ಕನಿಷ್ಠ ತೆರಿಗೆ, ಪ್ರಮಾಣಿತ ಹಾಗೂ ಸುಲಭ ತೆರಿಗೆ ಎಂಬುದಾಗಿತ್ತು. ಆದರೆ ಎನ್‌ಡಿಎ ಸರ್ಕಾರದ ಜಿಎಸ್‌ಟಿ ಸಂಪೂರ್ಣ ಭಿನ್ನವಾಗಿದೆ. ಮೋದಿ ಸರ್ಕಾರವು ಇದನ್ನು ನಾಲ್ಕು ಹಂತಗಳಲ್ಲಿ ವರ್ಗೀಕರಿಸಿದೆ. ಇದು ತುಂಬಾ ಜಟಿಲವಾಗಿದ್ದು ಅದನ್ನು ಅರ್ಥಮಾಡಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ. ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳ ಪಾಲಿಗೆ ಈ ತೆರಿಗೆಯು ಬಿಸಿತುಪ್ಪವಾಗಿದೆ. ದೇಶದಲ್ಲಿರುವ 15–20 ದೊಡ್ಡ ಉದ್ಯಮಿಗಳಿಗೆ ಇದು ಸಹಕಾರಿಯಾಗಿದೆ’ ಎಂದು ದೂರಿದ್ದಾರೆ.  

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು