ಸೋಮವಾರ, ಆಗಸ್ಟ್ 8, 2022
23 °C

ಗೋಧ್ರಾ ಹತ್ಯಾಕಾಂಡ: 35ನೇ ಅಪರಾಧಿಗೆ ಜೀವಾವಧಿ ಶಿಕ್ಷೆ

ಪಿಟಿಐ Updated:

ಅಕ್ಷರ ಗಾತ್ರ : | |

ಗೋಧ್ರಾ: 2002ರಲ್ಲಿ ಗುಜರಾತ್‌ನ ಇತಿಹಾಸದಲ್ಲೇ ಅತ್ಯಂತ ಭೀಕರ ಗಲಭೆಗೆ ಕಾರಣವಾಗಿದ್ದ 59 ಕರಸೇವಕರನ್ನು ಹತ್ಯೆಗೈದ ಗೋಧ್ರಾ ರೈಲು ಹತ್ಯಾಕಾಂಡ ಪ್ರಕರಣದ ಆರೋಪಿಗೆ ಇಲ್ಲಿನ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಗುಜರಾತ್‌ನ ಪಂಚಮಹಲ್ ಜಿಲ್ಲೆಯ ಗೋಧ್ರಾದಲ್ಲಿರುವ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಆರೋಪಿ ರಫೀಕ್ ಬಟುಕ್‌ಗೆ ಶನಿವಾರ ಜೀವಾವಧಿ ಶಿಕ್ಷೆಯನ್ನು ವಿಧಿಸಿತು. ಆತನನ್ನು 2021ರ ಫೆಬ್ರುವರಿಯಲ್ಲಿ ಬಂಧಿಸಲಾಗಿತ್ತು.

ಅಯೋಧ್ಯೆಯಿಂದ ಹಿಂತಿರುಗುತ್ತಿದ್ದ, ಕರಸೇವಕರಿದ್ದ ರೈಲಿಗೆ 2002ರ ಫೆಬ್ರುವರಿ 27ರಂದು ಬೆಂಕಿ ಹಚ್ಚಲಾಗಿತ್ತು. ಘಟನೆಯಲ್ಲಿ 59 ಕರಸೇವಕರು ಮೃತಪಟ್ಟಿದ್ದರು. ಈ ಪ್ರಕರಣದಲ್ಲಿ ರಫೀಕ್‌ ಭಾಗಿಯಾಗಿದ್ದ ಎಂದು ಆರೋಪಿಸಲಾಗಿತ್ತು. ಗೋಧ್ರಾದ ಈ ಘಟನೆಯು ರಾಜ್ಯದಲ್ಲಿ ಕೋಮು ಗಲಭೆಗೆ ಕಾರಣವಾಯಿತಲ್ಲದೇ, 1,200 ಕ್ಕೂ ಹೆಚ್ಚು ಜನ ಕೊಲ್ಲಲ್ಪಟ್ಟರು. ಇದರಲ್ಲಿ ಬಹುತೇಕರು ಅಲ್ಪಸಂಖ್ಯಾತ ಸಮುದಾಯದವರೇ ಆಗಿದ್ದರು.

ಈ ಪ್ರಕರಣದಲ್ಲಿ ನ್ಯಾಯಾಲಯದಿಂದ ಇದುವರೆಗೆ ತಪ್ಪಿತಸ್ಥರೆಂದು ಪರಿಗಣಿಸಲ್ಪಟ್ಟ 35 ನೇ ಆರೋಪಿ ಬಟುಕ್ ಎಂದು ವಿಶೇಷ ಸರ್ಕಾರಿ ಅಭಿಯೋಜಕ ಆರ್‌ಸಿ ಕೊಡೇಕರ್ ತಿಳಿಸಿದ್ದಾರೆ.

ಪಂಚಮಹಲ್ ಪೊಲೀಸರ ವಿಶೇಷ ತಂಡ (ಎಸ್‌ಒಜಿ) ಕಳೆದ ವರ್ಷ ಫೆಬ್ರುವರಿಯಲ್ಲಿ ಗೋಧ್ರಾದಲ್ಲೇ ಬಟುಕ್‌ನನ್ನು ಬಂಧಿಸಿತ್ತು. ಪ್ರಕರಣದಲ್ಲಿ ಆರೋಪಿ ಎಂದು ಹೆಸರಿಸಲ್ಪಟ್ಟ ಬಟುಕ್‌, ಗೋಧ್ರಾದಿಂದ ಪರಾರಿಯಾಗಿ ಹಲವು ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ.

ಇದಕ್ಕೂ ಮೊದಲು, ವಿಶೇಷ ಎಸ್‌ಐಟಿ ನ್ಯಾಯಾಲಯವು 2011ರ ಮಾರ್ಚ್ 1ರಂದು ಪ್ರಕರಣದಲ್ಲಿ 31 ಜನರನ್ನು ದೋಷಿ ಎಂದು ಘೋಷಿಸಿತ್ತು. ಅವರಲ್ಲಿ 11 ಜನರಿಗೆ ಮರಣದಂಡನೆ ಮತ್ತು 20 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.

2017ರ ಅಕ್ಟೋಬರ್‌ನಲ್ಲಿ ಗುಜರಾತ್ ಹೈಕೋರ್ಟ್ 11 ಅಪರಾಧಿಗಳ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಿತ್ತು. ಇನ್ನಿತರ 20 ಜನರಿಗೆ ವಿಶೇಷ ಎಸ್‌ಐಟಿ ನ್ಯಾಯಾಲಯವು ವಿಧಿಸಿದ್ದ ಶಿಕ್ಷೆಯನ್ನು ಎತ್ತಿಹಿಡಿದಿತ್ತು. ಇದಾದ ಬಳಿಕ ಇನ್ನೂ ಮೂವರು ಅಪರಾಧಿಗಳಿಗೆ ಇದೇ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು