ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ತೊರೆದ ಪಾಟಿದಾರ್‌ ಸಮುದಾಯದ ಮುಖಂಡ ಹಾರ್ದಿಕ್‌ ಪಟೇಲ್‌

ಅಕ್ಷರ ಗಾತ್ರ

ಅಹಮದಾಬಾದ್‌:ಪಾಟೀದಾರ್‌ ಮೀಸಲಾತಿ ಪರ ಹೋರಾಟಗಾರ ಹಾರ್ದಿಕ್‌ ಪಟೇಲ್ ಅವರುಗುಜರಾತ್ ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಸ್ಥಾನ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಬುಧವಾರ ರಾಜೀನಾಮೆ ನೀಡಿದರು. ಪಕ್ಷದ ನಾಯಕತ್ವವು ಗುಜರಾತ್‌ ಮತ್ತು ಗುಜರಾತಿಗಳ ಮೇಲೆ ದ್ವೇಷ ಇರುವಂತೆ ವರ್ತಿಸುತ್ತದೆ ಎಂದು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಸಲ್ಲಿಸಿರುವ ರಾಜೀನಾಮೆ ಪತ್ರದಲ್ಲಿ ಹಾರ್ದಿಕ್‌ ಆರೋಪಿಸಿದ್ದಾರೆ.

ಪಕ್ಷದ ಕುರಿತು ತಮಗಿರುವ ಅಸಮಾಧಾನವನ್ನು ಪತ್ರದ ಮೂಲಕ ಹೊರಹಾಕಿರುವ ಹಾರ್ದಿಕ್‌ ಅವರು, ‘ನನ್ನಂಥ ಕಾರ್ಯಕರ್ತರು ಕಾಂಗ್ರೆಸ್‌ ಸಭೆಯಲ್ಲಿ ಭಾಗವಹಿಸಿ ಚರ್ಚೆ ನಡೆಸಲು 500ರಿಂದ 600 ಕಿ.ಮೀ ಪ್ರಯಾಣ ಮಾಡಿ ಹೋಗುತ್ತಿದ್ದೆವು. ಆದರೆ ಕೆಲವು ಮುಖಂಡರು ದೆಹಲಿಯ ನಾಯಕರಿಗೆ ಸರಿಯಾದ ಸಮಯಕ್ಕೆ ಚಿಕನ್‌ ಸ್ಯಾಂಡ್‌ವಿಚ್‌ ದೊರಕಿದೆಯೇ ಎಂಬ ಯೋಚನೆಯಲ್ಲಿ ಇರುತ್ತಿದ್ದರು’ ಎಂದು ಆರೋಪಿಸಿದ್ದಾರೆ.

‘ಗುಜರಾತ್‌ ಸಮಸ್ಯೆಗಳ ಕಡೆ ನಾಯಕರ ಗಮನ ಸೆಳೆಯಲು ನಾನು ಪ್ರಯತ್ನಿಸಿದಾಗಲೆಲ್ಲಾ ಅವರು ಮೊಬೈಲ್‌ ಬಳಸುವಲ್ಲಿ ನಿರತರಾಗಿರುತ್ತಿದ್ದರು. ಪಕ್ಷಕ್ಕೆ ಮತ್ತು ದೇಶಕ್ಕೆಅವರ ಅಗತ್ಯವಿದ್ದಾಗ ಕೆಲ ನಾಯಕರು ವಿದೇಶದಲ್ಲಿ ಮೋಜಿನಲ್ಲಿ ತೊಡಗಿರುತ್ತಿದ್ದರು. ಕಾಂಗ್ರೆಸ್‌ ನಾಯಕರು ಯಾವವಿಷಯದಲ್ಲೂ ಗಂಭೀರತೆ ಹೊಂದಿಲ್ಲ. ಇದು ಕಾಂಗ್ರೆಸ್‌ ನಾಯಕತ್ವದ ಬಹುಮುಖ್ಯವಾದ ಸಮಸ್ಯೆ ಆಗಿದೆ’ ಎಂದು ಅವರು ಪತ್ರದಲ್ಲಿ ಆಪಾದನೆ ಮಾಡಿದ್ದಾರೆ.

ಮೋದಿ ಹೊಗಳಿದ ಹಾರ್ದಿಕ್: ‘ಕಾಂಗ್ರೆಸ್‌ ಅನ್ನು ಸರಿಯಾದ ಮಾರ್ಗದಲ್ಲಿ ನಡೆಸಲು ನಾನು ಪ್ರಯತ್ನಿಸಿದ್ದರೂ ಪಕ್ಷವು ದೇಶ ಮತ್ತು ನಮ್ಮ ಸಮಾಜದ ವಿರುದ್ಧವೇ ಕೆಲಸ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ದೇಶ, ಗುಜರಾತ್‌ ಮತ್ತು ಪಾಟೀದಾರ್‌ ಸಮುದಾಯಕ್ಕಾಗಿ ಯಾವ ಉತ್ತಮ ಕ್ರಮಗಳನ್ನು ಕೈಗೊಂಡರೂ ಕಾಂಗ್ರೆಸ್‌ ಮಾಡುವ ಏಕೈಕ ಕೆಲಸವೆಂದರೆ ಅದನ್ನು ವಿರೋಧಿಸುವುದು. ಕೇಂದ್ರ ಮತ್ತು ರಾಜ್ಯಮಟ್ಟದ ಕಾಂಗ್ರೆಸ್‌ ನಾಯಕತ್ವವು ಕೇಂದ್ರ ಸರ್ಕಾರ ಜಾರಿ ಮಾಡುವ ಕಾರ್ಯಕ್ರಮಗಳನ್ನು ವಿರೋಧಿಸುವುದಕ್ಕೆ ಮಾತ್ರ ಸೀಮಿತವಾಗಿವೆ’ ಎಂದು ಪತ್ರದಲ್ಲಿ ಬರೆದಿದ್ದಾರೆ.

‘ದೇಶದ ಬಹುತೇಕ ರಾಜ್ಯಗಳಲ್ಲಿ ಕಾಂಗ್ರೆಸ್‌ ತಿರಸ್ಕೃತಗೊಂಡಿದೆ. ಪಕ್ಷದ ನಾಯಕರಿಗೆ ದೇಶದ ಪ್ರಮುಖ ಸಮಸ್ಯೆಗಳ ಕುರಿತು ಗಂಭೀರತೆಯೇ ಇಲ್ಲ. ನಾನು ಹಲವಾರು ಬಾರಿ ಪಕ್ಷದ ನಾಯಕರನ್ನು ಭೇಟಿ
ಆಗಿದ್ದೇನೆ. ಅವರಿಗೆ ಗುಜರಾತ್‌ ಜನರ ಸಂಕಷ್ಟಗಳನ್ನು ಕೇಳುವ ಆಸಕ್ತಿಯೇ ಇಲ್ಲ ಎಂದು ನನಗೆ ಪ್ರತಿ ಬಾರಿಯೂ ಅನಿಸಿದೆ’ ಎಂದಿದ್ದಾರೆ.

‘ಹಾರ್ದಿಕ್‌ಗೆ ಬಿಜೆಪಿ ನಂಟು’: ಬಿಜೆಪಿ ತಾಳಕ್ಕೆ ಹಾರ್ದಿಕ್‌ ಹಾಡುತ್ತಿದ್ದಾರೆ. ಅವರೊಬ್ಬ ಅವಕಾಶವಾದಿ ಮತ್ತು ಅಪ್ರಾಮಾಣಿಕವ್ಯಕ್ತಿ. ಪಾಟೀದಾರ್‌ ಮೀಸಲು ಹೋರಾಟವನ್ನು ಮುನ್ನಡೆಸಿದ್ದಕ್ಕಾಗಿ ಅವರ ವಿರುದ್ಧ ದಾಖಲಿಸಲಾಗಿರುವ ಮೊಕದ್ದಮೆಗಳಿಂದ ಬಿಡುಗಡೆ ಪಡೆಯಲು ಅವರು ಆರು ವರ್ಷಗಳಿಂದಲೂ ಬಿಜೆಪಿ ಜೊತೆಸಂಪರ್ಕ ಹೊಂದಿದ್ದಾರೆ ಎಂದು ಕಾಂಗ್ರೆಸ್‌ ಆರೋಪಿಸಿದೆ.

ಪಂಜಾಬ್‌ ಕಾಂಗ್ರೆಸ್‌ನ ಮುಖಂಡ ಸುನೀಲ್ ಜಾಖಡ್‌, ಹಿರಿಯ ನಾಯಕ ಅಶ್ವಿನಿ ಕುಮಾರ್ ಸೇರಿ ಹಲವು ನಾಯಕರು ಇತ್ತೀಚೆಗೆ ಕಾಂಗ್ರೆಸ್‌ ತೊರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT