ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್: ಬಿಜೆಪಿ ಪ್ರಣಾಳಿಕೆ– ಅತಿ ದೊಡ್ಡ ಶ್ರೀಕೃಷ್ಣ ಮೂರ್ತಿ ನಿರ್ಮಿಸುವ ಭರವಸೆ

ಏಕರೂಪ ನಾಗರಿಕ ಸಂಹಿತೆ ಜಾರಿ, 20 ಲಕ್ಷ ಉದ್ಯೋಗ ಅವಕಾಶ ಸೃಷ್ಟಿ: ಗುಜರಾತ್‌ಗೆ ಬಿಜೆಪಿ ಪ್ರಣಾಳಿಕೆ
Last Updated 26 ನವೆಂಬರ್ 2022, 14:40 IST
ಅಕ್ಷರ ಗಾತ್ರ

ಗಾಂಧಿನಗರ:ಗುಜರಾತ್‌ನ ಆಡಳಿತಾರೂಢ ಬಿಜೆಪಿ ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯನ್ನು ಶನಿವಾರ ಬಿಡುಗಡೆ ಮಾಡಿದೆ. ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ, ಭಯೋತ್ಪಾದನೆ ಬೆದರಿಕೆಯನ್ನು ನಿರ್ಮೂಲನೆ ಮಾಡುವುದಕ್ಕಾಗಿ ‘ಮೂಲಭೂತವಾದದತ್ತ ಜನರನ್ನು ಆಕರ್ಷಿಸುವುದನ್ನು ತಡೆಯುವ ಕೇಂದ್ರ’ ಸ್ಥಾಪನೆಯ ಭರವಸೆಯನ್ನು ನೀಡಲಾಗಿದೆ. ಮದರಸಗಳ ಪಠ್ಯಕ್ರಮಗಳ ಸಮೀಕ್ಷೆ ಮತ್ತು ವಕ್ಫ್‌ ಮಂಡಳಿಯ ಆಸ್ತಿಯ ಪರಿಶೀಲನೆಯ ವಾಗ್ದಾನವೂ ಪ್ರಣಾಳಿಕೆಯಲ್ಲಿ ಒಳಗೊಂಡಿದೆ.

20 ಲಕ್ಷ ಉದ್ಯೋಗ ಅವಕಾಶಗಳ ಸೃಷ್ಟಿ, ರಾಜ್ಯದ ಅರ್ಥವ್ಯವಸ್ಥೆಯನ್ನು ಮುಂದಿನ ಐದು ವರ್ಷದಲ್ಲಿ ಒಂದು ಲಕ್ಷ ಕೋಟಿ ಡಾಲರ್‌ಗೆ (ಸುಮಾರು ₹80 ಲಕ್ಷ ಕೋಟಿ) ಏರಿಸುವುದು, ಮಹಿಳೆಯರಿಗಾಗಿಯೇ ಒಂದು ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುವ ಭರವಸೆಯನ್ನೂ ಪ್ರಣಾಳಿಕೆಯು ಹೊಂದಿದೆ.

ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಬಿಜೆಪಿ ರಾಜ್ಯ ಘಟಕದ ಕೇಂದ್ರ ಕಚೇರಿಯಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿದರು. ಗುಜರಾತ್‌ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌ ಮತ್ತು ರಾಜ್ಯ ಘಟಕದ ಅಧ್ಯಕ್ಷ ಸಿ.ಆರ್‌. ಪಾಟೀಲ್‌ ಅವರು ಹಾಜರಿದ್ದರು.

ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯ (ಆಯುಷ್ಮಾನ್‌ ಭಾರತ) ವಿಮಾ ಮೊತ್ತವನ್ನು ಈಗಿನ ₹5 ಲಕ್ಷದಿಂದ ₹10 ಲಕ್ಷಕ್ಕೆ ಏರಿಸಲಾಗುವುದು. ಹೆಣ್ಣು ಮಕ್ಕಳಿಗೆ ಪೂರ್ವ ಪ್ರಾಥಮಿಕದಿಂದ ಸ್ನಾತಕೋತ್ತರದವರೆಗೆ ಉಚಿತ ಶಿಕ್ಷಣ ನೀಡುವ ಭರವಸೆಯನ್ನೂ ಕೊಡಲಾಗಿದೆ.

‘ರಾಜ್ಯ ಸರ್ಕಾರ ನೇಮಿಸಿರುವ ಸಮಿತಿಯ ಶಿಫಾರಸು ಅನುಸಾರ ಏಕರೂಪ ನಾಗರಿಕ ಸಂಹಿತೆ ಜಾರಿಯನ್ನು ಪೂರ್ಣಗೊಳಿಸುತ್ತೇವೆ’ ಎಂದು ನಡ್ಡಾ ಹೇಳಿದ್ದಾರೆ. ಏಕರೂಪ ನಾಗರಿಕ ಸಂಹಿತೆ ಜಾರಿಗಾಗಿ ಸಮಿತಿಯೊಂದನ್ನು ರಚಿಸುವುದಾಗಿಗುಜರಾತ್‌ ಸರ್ಕಾರವು ಇತ್ತೀಚೆಗೆ ಹೇಳಿತ್ತು. ಬಿಜೆಪಿ ಆಳ್ವಿಕೆ ಇರುವ ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿಯೂ ಏಕರೂಪ ನಾಗರಿಕ ಸಂಹಿತೆ ಜಾರಿಯ ಭರವಸೆ ಕೊಡಲಾಗಿದೆ.

ಬಲವಂತದ ಮತಾಂತರ ಮಾಡಿದವರಿಗೆ ಗುಜರಾತ್‌ ಧಾರ್ಮಿಕ ಸ್ವಾತಂತ್ರ್ಯ (ತಿದ್ದುಪಡಿ) ಕಾಯ್ದೆ ಅಡಿಯಲ್ಲಿ ಕಠಿಣ ಶಿಕ್ಷೆ ದೊರೆಯುವಂತೆ ನೋಡಿಕೊಳ್ಳಲಾಗುವುದು ಎಂಬ ಭರವಸೆಯೂ ಇದೆ. ಮುಖ್ಯಮಂತ್ರಿ ಶರಣಾರ್ಥಿ ಯೋಜನೆ ಎಂಬ ಹೊಸ ಯೋಜನೆಯ ಭರವಸೆ ಕೊಡಲಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆಯಡಿ ಪೌರತ್ವ ಪಡೆದುಕೊಂಡವರಿಗೆ ನೆರವು ನೀಡುವುದು ಈ ಯೋಜನೆಯ ಉದ್ದೇಶವಾಗಿದೆ. ಇಂತಹ ನಿರಾಶ್ರಿತರಿಗೆ ಐದು ವರ್ಷ ಕಾಲ ವರ್ಷಕ್ಕೆ ₹10 ಸಾವಿರ ನೆರವು ನೀಡಲಾಗುವುದು ಎಂಬ ಭರವಸೆ ಕೊಡಲಾಗಿದೆ.

‘ಅತಿ ದೊಡ್ಡ ಶ್ರೀಕೃಷ್ಣ ಮೂರ್ತಿ’

ಜಗತ್ತಿನಲ್ಲಿಯೇ ಅತಿ ಎತ್ತರದ ಶ್ರೀಕೃಷ್ಣ ಮೂರ್ತಿಯನ್ನು ಸ್ಥಾಪಿಸುವ ಭರವಸೆಯನ್ನು ಬಿಜೆಪಿ ನೀಡಿದೆ. ದೇವಭೂಮಿ ದ್ವಾರಕಾ ಕಾರಿಡಾರ್ ಅಭಿವೃದ್ಧಿಪಡಿಸಲಾಗುವುದು. ಇದು ಪಶ್ಚಿಮ ಭಾರತದ ಅತ್ಯಂತ ದೊಡ್ಡ ಆಧ್ಯಾತ್ಮಿಕ ಕೇಂದ್ರ ಎನಿಸಿಕೊಳ್ಳಲಿದೆ ಎಂದು ಬಿಜೆಪಿ ಹೇಳಿದೆ. ದೇವಾಲಯಗಳ ನವೀಕರಣಕ್ಕೆ ₹1,000 ಕೋಟಿ ಮೀಸಲು ಇರಿಸುವ ಭರವಸೆಯನ್ನೂ ಬಿಜೆಪಿ ಕೊಟ್ಟಿದೆ.

ಭರವಸೆಗಳೇನು?

* ಗುಜರಾತ್‌ ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗೆ ಹಾನಿಯಾದರೆ ದಂಡ ವಸೂಲಿ ಕಾಯ್ದೆಯನ್ನು ಜಾರಿಗೆ ತರಲಾಗುವುದು. ಸಮಾಜ ವಿರೋಧಿ ಶಕ್ತಿಗಳು ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗೆ ಹಾನಿ ಮಾಡಿದರೆ, ಆ ನಷ್ಟವನ್ನು ಅವರಿಂದಲೇ ಪಡೆಯುವುದು ಈ ಕಾಯ್ದೆಯ ಉದ್ದೇಶ

* ದಕ್ಷಿಣ ಗುಜರಾತ್ ಮತ್ತು ಸೌರಾಷ್ಟ್ರದಲ್ಲಿ ಎರಡು ಸಮುದ್ರ ಆಹಾರ ಪಾರ್ಕ್‌

* ಆರೋಗ್ಯ ಕೇಂದ್ರಗಳಲ್ಲಿ ಉಚಿತ ಪರೀಕ್ಷೆ ಸೇವೆ, ಆರ್ಥಿಕವಾಗಿ ದುರ್ಬಲ ವರ್ಗದವರಿಗೆ (ಇಡಬ್ಲ್ಯುಎಸ್‌) ಲ್ಯಾಬೊರೇಟರಿ

* ಏಮ್ಸ್‌ ಮಾದರಿಯಎರಡು ಸಂಸ್ಥೆಗಳು

* 20 ಸಾವಿರ ಸರ್ಕಾರಿ ಶಾಲೆಗಳನ್ನು ‘ಉತ್ಕೃಷ್ಟತಾ ಶಾಲೆ’ಗಳಾಗಿ ಪರಿವರ್ತಿಸಲಾಗುವುದು

* ಐಐಟಿ ಮಾದರಿಯಲ್ಲಿ ನಾಲ್ಕು ಗುಜರಾತ್‌ ಇನ್ಸ್‌ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಸ್ಥಾಪನೆ

* ಮೂರು ಹೊತ್ತು ಊಟ ಒದಗಿಸುವ ಅನ್ನಪೂರ್ಣಾ ಕ್ಯಾಂಟೀನ್‌ ಸ್ಥಾಪನೆ. ಇಲ್ಲಿ ತಲಾ ₹5ಕ್ಕೆ ಮೂರು ಹೊತ್ತೂ ಊಟ ಲಭ್ಯವಿರಲಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT