ಶುಕ್ರವಾರ, ನವೆಂಬರ್ 27, 2020
19 °C
ಮೈತ್ರಿಕೂಟದ ವಿರುದ್ಧ ಹರಿಹಾಯ್ದ ಕೇಂದ್ರ ಗೃಹಸಚಿವ ಅಮಿತ್‌ ಶಾ

ಕಾಶ್ಮೀರ ವಿಚಾರದಲ್ಲಿ ವಿದೇಶಿ ಹಸ್ತಕ್ಷೇಪಕ್ಕೆ ಗುಪ್ಕಾರ್‌ ಇಚ್ಛೆ: ಅಮಿತ್‌ ಶಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ವಿಚಾರದಲ್ಲಿ ವಿದೇಶಿ ಶಕ್ತಿಗಳು ಹಸ್ತಕ್ಷೇಪ ನಡೆಸಬೇಕು ಎಂಬುದು ಗುಪ್ಕಾರ್‌ ಕೂಟದ ಬಯಕೆಯಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಆರೋಪಿಸಿದ್ದಾರೆ. ಈ ವಿಚಾರದಲ್ಲಿ ಕಾಂಗ್ರೆಸ್‌ ಪಕ್ಷದ ನಿಲುವೇನು ಎಂಬುದನ್ನು ಕಾಂಗ್ರೆಸ್‌ ಮುಖ್ಯಸ್ಥೆ ಸೋನಿಯಾ ಗಾಂಧಿ ಮತ್ತು ಹಿರಿಯ ಮುಖಂಡ ರಾಹುಲ್ ಗಾಂಧಿ ಸ್ಪಷ್ಟಪಡಿಸಬೇಕು ಎಂದು ಅವರು ಹೇಳಿದ್ದಾರೆ. 

ಜಮ್ಮು–ಕಾಶ್ಮೀರದ ಜಿಲ್ಲಾ ಅಭಿವೃದ್ಧಿ ಸಮಿತಿಗಳಿಗೆ ನವೆಂಬರ್‌ 28ರಿಂದ ಡಿಸೆಂಬರ್‌ 22ರ ನಡುವೆ ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಹಾಗಾಗಿ, ಗುಪ್ಕಾರ್‌ ಕೂಟದ ವಿರುದ್ಧ ಬಿಜೆಪಿಯ ಆಕ್ಷೇಪ ಹೆಚ್ಚಾಗಿದೆ. ಏಳು ಪಕ್ಷಗಳಿರುವ ಈ ಕೂಟದಲ್ಲಿ ನ್ಯಾಷನಲ್ ಕಾನ್ಫರೆನ್ಸ್‌ ಮತ್ತು ಪಿಡಿಪಿ ಸೇರಿವೆ. ಜಮ್ಮು–ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿಯನ್ನು ಈ ಕೂಟವು ವಿರೋಧಿಸುತ್ತಿದೆ.  ‘ಗುಪ್ಕಾರ್ ಕೂಟವು ತ್ರಿವರ್ಣ ಧ್ವಜವನ್ನು ಅವಮಾನಿಸುತ್ತಿದೆ’ ಎಂದೂ ಶಾ ಟ್ವೀಟ್‌ನಲ್ಲಿ ಹೇಳಿದ್ದಾರೆ. 

ಜಮ್ಮು–ಕಾಶ್ಮೀರವು ಭಯೋತ್ಪಾದನೆ ಹಾಗೂ ಕ್ಷೋಭೆಯ ದಿನಗಳಿಗೆ ಮರಳಲಿ ಎಂಬುದು ಕಾಂಗ್ರೆಸ್‌ ಮತ್ತು ಗುಪ್ಕಾರ್‌ ಕೂಟದ ಇಚ್ಛೆಯಾಗಿದೆ. ವಿಶೇಷಾಧಿಕಾರ ರದ್ದತಿ ಮೂಲಕ ದಲಿತರು, ಬುಡಕಟ್ಟು ಸಮುದಾಯಗಳು ಮತ್ತು ಮಹಿಳೆಯರಿಗೆ ನೀಡಿದ್ದ ಹಕ್ಕುಗಳನ್ನು ಕಸಿದುಕೊಳ್ಳಲು ಈ ಕೂಟವು ಬಯಸಿದೆ ಎಂದು ಶಾ ಆಪಾದಿಸಿದ್ದಾರೆ. 

ಗುಪ್ಕಾರ್‌ ಕೂಟದ ಮುಖಂಡರ ಹೇಳಿಕೆಗಳು ಈ ಹಿಂದೆ ವಿವಾದಕ್ಕೆ ಕಾರಣ ಆಗಿದ್ದವು. ವಿಶೇಷ ಸ್ಥಾನಮಾನ ಮರು
ಸ್ಥಾಪನೆಗೆ ಜಮ್ಮು–ಕಾಶ್ಮೀರದ ಜನರಿಗೆ ಚೀನಾ ನೆರವಾಗಲಿದೆ ಎಂದು ನ್ಯಾಷನಲ್‌ ಕಾನ್ಫರೆನ್ಸ್‌ ನಾಯಕ ಫಾರೂಕ್‌ ಅಬ್ದುಲ್ಲಾ ಹೇಳಿದ್ದರು. ಜಮ್ಮು–ಕಾಶ್ಮೀರದ ಪ್ರತ್ಯೇಕ ಧ್ವಜಕ್ಕೆ ಅವಕಾಶ ಇಲ್ಲದಿದ್ದರೆ ತ್ರಿವರ್ಣ ಧ್ವಜ ಹಾರಿಸುವುದಿಲ್ಲ ಎಂದು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಹೇಳಿದ್ದರು. 

******

ಒಮರ್‌–ಮೆಹಬೂಬಾ ಆಕ್ರೋಶ

ಶಾ ಅವರ ಹೇಳಿಕೆಯ ವಿರುದ್ಧ ಎನ್‌ಸಿ ನಾಯಕ ಒಮರ್‌ ಅಬ್ದುಲ್ಲಾ ಮತ್ತು ಮೆಹಬೂಬಾ ಮುಫ್ತಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗುಪ್ಕಾರ್‌ ಕೂಟವನ್ನು ‘ಗ್ಯಾಂಗ್‌’ ಎಂದು ಶಾ ಅವರು ಕರೆದಿರುವುದನ್ನು ಅವರು ಆಕ್ಷೇಪಿಸಿದ್ದಾರೆ. 

‘ಅಮಿತ್‌ ಶಾ ಅವರೇ, ನಾವು ಗ್ಯಾಂಗ್‌ ಅಲ್ಲ. ನಮ್ಮದು ಕಾನೂನುಬದ್ಧವಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ರಾಜಕೀಯ ಮೈತ್ರಿಕೂಟ’ ಎಂದು ಒಮರ್‌ ಹೇಳಿದ್ದಾರೆ. ‘ಸತ್ಯ ಏನು ಎಂದರೆ, ಬಿಜೆಪಿಯ ಸಿದ್ಧಾಂತವನ್ನು ವಿರೋಧಿಸುವ ಎಲ್ಲರನ್ನೂ ಭ್ರಷ್ಟರು ಮತ್ತು ದೇಶ ವಿರೋಧಿಗಳು ಎಂದು ಬಣ್ಣಿಸಲಾಗುತ್ತಿದೆ’ ಎಂದು ಮೆಹಬೂಬಾ ಹೇಳಿದ್ದಾರೆ. 

‘ಅಧಿಕಾರದಾಹದ ಬಿಜೆಪಿ ಎಷ್ಟು ಮೈತ್ರಿಕೂಟಗಳನ್ನು ಬೇಕಿದ್ದರೂ ಕಟ್ಟಿಕೊಳ್ಳಬಹುದು. ಆದರೆ, ನಾವು ಮೈತ್ರಿಕೂಟ ಕಟ್ಟಿದರೆ ಅದು ದೇಶದ ಹಿತಾಸಕ್ತಿಗೆ ಮಾರಕ ಎಂದು ಹೇಳಲಾಗುತ್ತಿದೆ. ಮೈತ್ರಿಕೂಟದ ಮೂಲಕ ಚುನಾವಣೆ ಎದುರಿಸುವುದು ಕೂಡ ಈಗ ದೇಶ ವಿರೋಧಿ ಆಗಿಬಿಟ್ಟಿದೆ’ ಎಂದು ಮೆಹಬೂಬಾ ಹೇಳಿದ್ದಾರೆ.

****

ಕೂಟದ ಭಾಗ ಅಲ್ಲ: ಕಾಂಗ್ರೆಸ್‌

ತಾನು ಗುಪ್ಕಾರ್‌ ಕೂಟದ ಭಾಗ ಅಲ್ಲ ಎಂದು ಕಾಂಗ್ರೆಸ್‌ ಸ್ಪಷ್ಟಪಡಿಸಿದೆ. ಆದರೆ, ಪ್ರಜಾಸತ್ತಾತ್ಮಕ ಪ್ರಕ್ರಿಯೆ ಮೂಲಕ ಬಿಜೆಪಿಯ ಬಣ್ಣ ಬಯಲು ಮಾಡುವುದಕ್ಕಾಗಿ ಜಿಲ್ಲಾ ಅಭಿವೃದ್ಧಿ ಸಮಿತಿ ಚುನಾವಣೆಯಲ್ಲಿ ಸ್ಪರ್ಧಿಸಲಾಗುವುದು ಎಂದು ಹೇಳಿದೆ. ಸಮಾನಮನಸ್ಕ ಪಕ್ಷಗಳ ಜತೆಗೆ ಸ್ಥಳೀಯ ಮಟ್ಟದಲ್ಲಿ ಚುನಾವಣಾ ಮೈತ್ರಿಗೆ ಸಿದ್ಧ ಎಂದೂ ಹೇಳಿದೆ. 

ಕಾಂಗ್ರೆಸ್‌ ಮುಖಂಡರಾದ ತಾರೀಕ್‌ ಅನ್ವರ್‌ ಮತ್ತು ಅಜಯ್‌ ಮಾಕನ್‌ ಅವರು ಶಾ ಹೇಳಿಕೆಯನ್ನು ಪ್ರಶ್ನಿಸಿದ್ದಾರೆ. ಇಂತಹ ಹೇಳಿಕೆ ನೀಡಲು ಶಾ ಅವರಿಗೆ ನೈತಿಕ ಹಕ್ಕೇ ಇಲ್ಲ ಎಂದಿದ್ದಾರೆ. ಜಮ್ಮು–ಕಾಶ್ಮೀರದಲ್ಲಿ ಪಿಡಿಪಿ ಜತೆಗೆ ತೀರಾ ಇತ್ತೀಚಿನ ಮೈತ್ರಿ ಸರ್ಕಾರದಲ್ಲಿ ಬಿಜೆಪಿ ಭಾಗಿಯಾಗಿತ್ತು ಎಂಬುದನ್ನು ನೆನಪಿಸಿದ್ದಾರೆ. 

 *********

ಚುನಾವಣೆಯಲ್ಲಿ ಸ್ಪರ್ಧಿಸಿ, ಪ್ರಜಾಸತ್ತಾತ್ಮಕ ಪ್ರಕ್ರಿಯೆಯಲ್ಲಿ ಭಾಗಿಯಾದ ಕಾರಣಕ್ಕೆ ನಾಯಕರನ್ನು ಬಂಧಿಸಿ ದೇಶವಿರೋಧಿ ಎಂದು ಹಣೆಪಟ್ಟಿ ಕಟ್ಟುವುದು ಜಮ್ಮು–ಕಾಶ್ಮೀರದಲ್ಲಿ ಮಾತ್ರ ಸಾಧ್ಯ
-ಮೆಹಬೂಬಾ ಮುಫ್ತಿ, ಪಿಡಿಪಿ ಅಧ್ಯಕ್ಷೆ

 

ಕುಚೋದ್ಯದ ಹೇಳಿಕೆಗಳ ಮೂಲಕ ಸುಳ್ಳುಗಳನ್ನು ಉದ್ದೇಶಪೂರ್ವಕವಾಗಿ ಹರಡಲಾಗುತ್ತಿದೆ. ಆಂತರಿಕ ಭದ್ರತೆ ಖಾತರಿಪಡಿಸುವ ಹೊಣೆಯನ್ನು ನಿರ್ಲಕ್ಷಿಸಲಾಗಿದೆ
-ರಣದೀಪ್‌ ಸಿಂಗ್‌ ಸುರ್ಜೇವಾಲಾ ,ಕಾಂಗ್ರೆಸ್‌ ವಕ್ತಾರ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು