ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಕ್ಷಣಾ ವಲಯದ ಉತ್ಪಾದನೆಯಲ್ಲಿ ₹1.75 ಲಕ್ಷ ಕೋಟಿ ಗುರಿ: ರಾಜನಾಥ್‌ ಸಿಂಗ್‌

ಎಚ್‌ಎಎಲ್‌ನ ಎಲ್‌ಸಿಎ–ತೇಜಸ್‌ ವಿಭಾಗ ಉದ್ಘಾಟನೆ
Last Updated 2 ಫೆಬ್ರುವರಿ 2021, 14:39 IST
ಅಕ್ಷರ ಗಾತ್ರ

ಬೆಂಗಳೂರು: ‘ಮುಂದಿನ ಕೆಲ ವರ್ಷಗಳಲ್ಲಿ ಭಾರತವು ರಕ್ಷಣಾ ವಲಯದ ಉತ್ಪಾದನೆಯಲ್ಲಿ ₹1.75 ಲಕ್ಷ ಕೋಟಿ ಗುರಿಯನ್ನು ಕ್ರಮಿಸಲಿದೆ’ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ವಿಶ್ವಾಸ ವ್ಯಕ್ತಪ‍ಡಿಸಿದರು.

ಹಿಂದೂಸ್ಥಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ನ (ಎಚ್‌ಎಎಲ್‌) ಎಲ್‌ಸಿಎ–ತೇಜಸ್‌ ವಿಭಾಗವನ್ನು (ಘಟಕ–2)ಮಂಗಳವಾರ ಉದ್ಘಾಟಿಸಿ ಮಾತನಾಡಿದ ಅವರು ‘ಲಘು ಯುದ್ಧ ವಿಮಾನಗಳ (ಎಲ್‌ಸಿಎ) ಉತ್ಪಾದನೆ ಹೆಚ್ಚಿಸಲು ಬೇಕಿರುವ ಮೂಲ ಸೌಕರ್ಯವನ್ನು ಎಚ್‌ಎಎಲ್‌, ವಿಸ್ತರಿಸಿದೆ. ಇದು ಆತ್ಮ ನಿರ್ಭರ ಭಾರತಕ್ಕೆ ಉತ್ತಮ ಉದಾಹರಣೆ. ಈ ಕಾರಣದಿಂದಾಗಿಯೇ ಭಾರತೀಯ ವಾಯುಪಡೆಗಾಗಿ (ಐಎಎಫ್‌) ಸ್ವದೇಶಿ ನಿರ್ಮಿತ 83 ತೇಜಸ್‌ ಎಂಕೆ–1ಎ ವಿಮಾನಗಳನ್ನು ತಯಾರಿಸುವ ಗುತ್ತಿಗೆ ಎಚ್‌ಎಎಲ್‌ಗೆ ಲಭಿಸಿದೆ. ತೇಜಸ್‌ ವಿಮಾನವು ಭಾರತದ ಹೆಮ್ಮೆ’ ಎಂದರು.

‘ಎಚ್‌ಎಎಲ್‌ನಲ್ಲಿ ನುರಿತ ತಂತ್ರಜ್ಞರಿದ್ದಾರೆ. ಕೋವಿಡ್‌ ಸಮಯದಲ್ಲೂ ಅವಿರತವಾಗಿ ಶ್ರಮಿಸಿ ಅತ್ಯಾಧುನಿಕ ಮೂಲ ಸೌಕರ್ಯ ನಿರ್ಮಿಸಿದ್ದಾರೆ. ಭವಿಷ್ಯದಲ್ಲಿ ಇನ್ನಷ್ಟು ಗುತ್ತಿಗೆಗಳು ಈ ಸಂಸ್ಥೆಯನ್ನು ಅರಸಿ ಬರಲಿವೆ. ಭದ್ರತಾ ವಿಷಯದಲ್ಲಿ ಇತರ ರಾಷ್ಟ್ರಗಳ ಮೇಲೆ ಹೆಚ್ಚು ಅವಲಂಬನೆಯಾಗುವುದು ಸರಿಯಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ಮುಂದಿನ ದಿನಗಳಲ್ಲಿ ಎಚ್‌ಎಎಲ್‌ ಅನ್ನು ಮತ್ತಷ್ಟು ಬಲಪಡಿಸಲು ಅಗತ್ಯ ಕ್ರಮ ಕೈಗೊಳ್ಳುತ್ತೇವೆ’ ಎಂದು ರಾಜನಾಥ್‌ ನುಡಿದರು.

‘ತೇಜಸ್‌ ವಿಮಾನವು ಮುಂದಿನ ದಿನಗಳಲ್ಲಿ ಭಾರತೀಯ ವಾಯುಪಡೆಯ ಯುದ್ಧ ಘಟಕದ ಬೆನ್ನೆಲುಬಾಗಿ ರೂಪುಗೊಳ್ಳಲಿದೆ. ಈ ವಿಮಾನಗಳ ಖರೀದಿಗೆ ಹಲವು ರಾಷ್ಟ್ರಗಳು ಆಸಕ್ತಿ ತೋರಿವೆ. ವಿದೇಶದಲ್ಲಿ ತಯಾರಾದ ಹಲವು ಯುದ್ಧ ವಿಮಾನಗಳಿಗಿಂತಲೂ ಅತ್ಯುನ್ನತ ಸಾಮರ್ಥ್ಯವನ್ನು ತೇಜಸ್‌ ಹೊಂದಿದೆ. ಬೇರೆ ಯುದ್ಧ ವಿಮಾನಗಳಿಗೆ ಹೋಲಿಸಿದರೆ ಕಡಿಮೆ ವೆಚ್ಚದಲ್ಲಿ ಇದು ಸಿಗುತ್ತದೆ’ ಎಂದೂ ಅವರು ಹೇಳಿದರು.

‘ರಕ್ಷಣಾ ಸಚಿವರು ಎಚ್‌ಎಎಲ್‌ಗೆ ಭೇಟಿ ನೀಡಿದ್ದು ಅತೀವ ಖುಷಿ ನೀಡಿದೆ. ಐಎಎಫ್‌ನ ಹೊಸ ಬೇಡಿಕೆಗಳನ್ನು ಪೂರೈಸುವುದಕ್ಕಾಗಿ ನಿರ್ಮಾಣ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ. ಎಚ್‌ಎಎಲ್‌ನ ಬೆಂಗಳೂರು ಘಟಕದ ವಾರ್ಷಿಕ ವಿಮಾನ ತಯಾರಿಕಾ ಸಾಮರ್ಥ್ಯವನ್ನು 8ರಿಂದ 16ಕ್ಕೆ ಏರಿಸಲಾಗಿದೆ. ಮೂರು ವರ್ಷಗಳ ನಂತರ ವಿಮಾನಗಳ ಪೂರೈಕೆ ಆರಂಭವಾಗಲಿದೆ’ ಎಂದು ಎಚ್‌ಎಎಲ್‌ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ (ಸಿಎಂಡಿ) ಆರ್‌.ಮಾಧವನ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT