ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರಾ ಖಂಡದಲ್ಲಿ ಅಂಚೆ ಮತಪತ್ರ ತಿದ್ದುತ್ತಿರುವ ವಿಡಿಯೊ ಹಂಚಿಕೊಂಡ ಹರೀಶ್ ರಾವತ್

Last Updated 23 ಫೆಬ್ರುವರಿ 2022, 5:48 IST
ಅಕ್ಷರ ಗಾತ್ರ

ಡೆಹರಾಡೂನ್: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹರೀಶ್ ರಾವತ್ ಅವರು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊಂದನ್ನು ಪೋಸ್ಟ್ ಮಾಡಿದ್ದು, ಒಬ್ಬ ವ್ಯಕ್ತಿ ಹಲವಾರು ಅಂಚೆ ಮತಪತ್ರಗಳಿಗೆ ಟಿಕ್ ಮತ್ತು ಸಹಿ ಮಾಡುತ್ತಿರುವುದನ್ನು ಇದರಲ್ಲಿ ಕಾಣಬಹುದಾಗಿದೆ.

ಈ ವಿಡಿಯೊವನ್ನು ಉಲ್ಲೇಖಿಸಿ, ಉತ್ತರಾಖಂಡದಲ್ಲಿ ಮತಪತ್ರಗಳನ್ನು ತಿದ್ದಲಾಗುತ್ತಿದೆ ಎಂದು ರಾವತ್ ಆರೋಪಿಸಿದ್ದಾರೆ.

ಮಂಗಳವಾರ, ತಮ್ಮ ಟ್ವಿಟರ್ ಹ್ಯಾಂಡಲ್ ಮತ್ತು ಫೇಸ್‌ಬುಕ್‌ನಲ್ಲಿ ವಿಡಿಯೊವನ್ನು ರಾವತ್ ಹಂಚಿಕೊಂಡಿದ್ದು, ‘ಇದು ಎಲ್ಲರ ಗಮನಕ್ಕೆ, ಮತಪತ್ರಗಳಿರುವ ಕೇಂದ್ರದಲ್ಲಿ ಒಬ್ಬ ವ್ಯಕ್ತಿ ಹಲವಾರು ಮತಪತ್ರಗಳಿಗೆ ಟಿಕ್ ಮತ್ತು ಸಹಿ ಹಾಕುತ್ತಿರುವುದನ್ನು ಕಾಣಬಹುದಾಗಿದೆ. ಚುನಾವಣಾ ಆಯೋಗವು ಇದನ್ನು ಗಮನಿಸುತ್ತದೆಯೇ? ’ಎಂದು ಪ್ರಶ್ನಿಸಿದ್ದಾರೆ.

ಟ್ವೀಟ್ ಕುರಿತು ಕೇಳಿದಾಗ, ರಾವತ್ ಅವರ ವಕ್ತಾರ ಸುರೇಂದ್ರ ಕುಮಾರ್ ಅವರು ವಿಡಿಯೊದ ಮೂಲವನ್ನು ಬಹಿರಂಗಪಡಿಸಲು ನಿರಾಕರಿಸಿದರು. ಆದರೆ, ಅದು ಉತ್ತರಾಖಂಡದಿಂದ ಬಂದಿದೆ ಎಂದಷ್ಟೆ ಹೇಳಿದ್ದಾರೆ. ಈ ಬಗ್ಗೆ ಪಕ್ಷವು ಚುನಾವಣಾ ಆಯೋಗಕ್ಕೆ ಇನ್ನೂ ದೂರು ನೀಡಿಲ್ಲ. ಆದರೆ, ಆಯೋಗ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಳ್ಳಬಹುದು ಎಂದು ಅವರು ಹೇಳಿದರು.

ಕಾಂಗ್ರೆಸ್ ನಾಯಕರು ಇದನ್ನು ಪ್ರಜಾಪ್ರಭುತ್ವದ ಅಣಕ ಎಂದು ಬಣ್ಣಿಸಿದ್ದು, ಚುನಾವಣಾ ಆಯೋಗವು ವಿಡಿಯೊವನ್ನು ಗಮನದಲ್ಲಿಟ್ಟುಕೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ರಾವತ್ ಅವರ ಟ್ವೀಟ್ ಅನ್ನು ಉತ್ತರಾಖಂಡ ರಾಜ್ಯ ಕಾಂಗ್ರೆಸ್ ರಿಟ್ವೀಟ್ ಮಾಡಿದೆ.

ಉತ್ತರಾಖಂಡ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಪ್ರೀತಮ್ ಸಿಂಗ್ ಮಾತನಾಡಿ, ‘ಪ್ರಜಾಪ್ರಭುತ್ವವನ್ನು ಅಪಹಾಸ್ಯ ಮಾಡುವ ಈ ವಿಡಿಯೊದಲ್ಲಿ ಸೇನಾ ಕೇಂದ್ರದ ವ್ಯಕ್ತಿಯೊಬ್ಬರು ತಮಗೆ ಬೇಕಾದ ಪಕ್ಷದ ಪರವಾಗಿ ಹಲವಾರು ಅಂಚೆ ಮತಪತ್ರಗಳಿಗೆ ಟಿಕ್ ಮತ್ತು ಸಹಿ ಹಾಕುತ್ತಿರುವುದನ್ನು ಕಾಣಬಹುದು’ಎಂದು ಹೇಳಿದ್ದಾರೆ

ಈ ಬಗ್ಗೆ ಚುನಾವಣಾ ಆಯೋಗ ತುರ್ತು ಕ್ರಮ ಜರುಗಿಸಬೇಕು ಮತ್ತು ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT