ಟಿಕ್ರಿ ಗಡಿ ಸಮೀಪ ರೈತನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಚಂಡೀಗಡ: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಟಿಕ್ರಿ ಗಡಿಯಲ್ಲಿ ಪ್ರತಿಭಟನೆ ನಡೆಯುತ್ತಿರುವ ಸ್ಥಳದಿಂದ ಎರಡು ಕಿ.ಮೀ ದೂರದಲ್ಲಿ ರೈತನೊಬ್ಬನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಭಾನುವಾರ ಪತ್ತೆಯಾಗಿದೆ.
‘ಹರಿಯಾಣದ ಜಿಂದ್ ಗ್ರಾಮದ ನಿವಾಸಿ ಕರ್ಮವೀರ್ ಸಿಂಗ್(52) ಅವರ ಶವ ಭಾನುವಾರ ಬೆಳಿಗ್ಗೆ ಟಿಕ್ರಿ ಗಡಿ ಪ್ರದೇಶದಿಂದ ಎರಡು ಕಿಲೋ ಮೀಟರ್ ದೂರದಲ್ಲಿರುವ ಮರವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ಥಳದಲ್ಲಿ ಮರಣ ಪತ್ರವೂ ಸಿಕ್ಕಿದೆ. ಈ ಬಗ್ಗೆ ಪರಿಶೀಲಿಸಲಾಗುತ್ತಿದೆ’ ಎಂದು ನಗರ ಪೊಲೀಸ್ ಠಾಣೆಯ ವರಿಷ್ಠಾಧಿಕಾರಿ ವಿಜಯ್ ಕುಮಾರ್ ಮಾಹಿತಿ ನೀಡಿದರು.
‘ಆತ್ಮೀಯ ರೈತ ಭಾಂದವರೇ, ಮೋದಿ ಸರ್ಕಾರವು ಪ್ರತಿನಿತ್ಯ ಹೊಸ ಹೊಸ ದಿನಾಂಕವನ್ನು ನೀಡುತ್ತಿದೆ. ಈ ಕಪ್ಪು ಕೃಷಿ ಕಾಯ್ದೆಗಳು ಯಾವಾಗ ರದ್ದಾಗುತ್ತವೆ ಎಂಬುದು ಯಾರಿಗೂ ತಿಳಿದಿಲ್ಲ ಎಂದು ಮರಣ ಪತ್ರದಲ್ಲಿ ಬರೆಯಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
15 ದಿನಗಳ ಹಿಂದೆ ಹರಿಯಾಣದ ಮತ್ತೊಬ್ಬ ರೈತ ಟಿಕ್ರಿ ಗಡಿಯಲ್ಲಿ ವಿಷ ಸೇವಿಸಿದ್ದರು. ಬಳಿಕ, ದೆಹಲಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಸಾವಿಗೀಡಾಗಿದ್ದರು.
ಡಿಸೆಂಬರ್ ತಿಂಗಳಲ್ಲಿ ಪಂಜಾಬ್ನ ವಕೀಲರೊಬ್ಬರು ಟಿಕ್ರಿ ಗಡಿಯ ಪ್ರತಿಭಟನಾ ಸ್ಥಳದ ಸಮೀಪದಿಂದ ಕೆಲವು ಕಿಲೋ ಮೀಟರ್ ದೂರದಲ್ಲಿ ವಿಷ ಸೇವಿಸಿ ಸಾವಿಗೀಡಾಗಿದ್ದರು.
ಇದನ್ನೂ ಓದಿ: ದುರಂಹಕಾರ ಬಿಟ್ಟು ಕೃಷಿ ಕಾಯ್ದೆ ಹಿಂಪಡೆಯಿರಿ: ರಾಹುಲ್ ಗಾಂಧಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.