ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವೇಷ ಭಾಷಣ ವಿರುದ್ಧ ಪ್ರಕರಣ ದಾಖಲು ವಿಳಂಬ: ದೆಹಲಿ ಪೊಲೀಸರಿಗೆ ‘ಸುಪ್ರೀಂ’ ಚಾಟಿ

‘ನೀವು ಏನು ಮಾಡುತ್ತಿದ್ದೀರಿ? ಎಷ್ಟು ಜನರನ್ನು ಬಂಧಿಸಿದ್ದೀರಿ?: ಕೋರ್ಟ್‌ ಪ್ರಶ್ನೆ
Last Updated 14 ಜನವರಿ 2023, 2:41 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಕಳೆದ ಎರಡು ವರ್ಷಗಳಲ್ಲಿ ದ್ವೇಷ ಭಾಷಣಗಳ ವಿರುದ್ಧದ ಪ್ರಕರಣಗಳನ್ನು ದಾಖಲಿಸಲು ತೋರಿದ ವಿಳಂಬ ಮತ್ತು ತನಿಖೆಯಲ್ಲಿ ಗಣನೀಯ ಪ್ರಗತಿ ಸಾಧಿಸದಿರುವುದನ್ನು ಪ್ರಶ್ನಿಸಿರುವ ಸುಪ್ರೀಂ ಕೋರ್ಟ್‌ ಶುಕ್ರವಾರ ದೆಹಲಿ ಪೊಲೀಸರಿಗೆ ಚಾಟಿ ಬೀಸಿದೆ.

ರಾಜಧಾನಿಯಲ್ಲಿ 2021ರಿಂದ ಇಲ್ಲಿಯವರೆಗೆ ಧಾರ್ಮಿಕ ಸಭೆಗಳಲ್ಲಿ ಮಾಡಿದ ದ್ವೇಷ ಭಾಷಣಗಳ ಕುರಿತು ದಾಖಲಿಸಿರುವ ಪ್ರಕರಣಗಳ ತನಿಖೆಯ ವಿವರ ಮತ್ತು ತನಿಖಾಧಿಕಾರಿಯ ವರದಿಯನ್ನು ಎರಡು ವಾರಗಳ ಒಳಗೆ ಸಲ್ಲಿಸುವಂತೆ ಸುಪ್ರೀಂಕೋರ್‌ಟ್‌ ದೆಹಲಿ ಪೊಲೀಸರಿಗೆ ಸೂಚಿಸಿತು.

‘2021ರ ಡಿಸೆಂಬರ್‌ 19ರಂದು ನಡೆದ ಘಟನೆಯ ಬಗ್ಗೆ 2022ರ ಮಾರ್ಚ್‌ 4ರಂದು ಎಫ್‌ಐಆರ್‌ ದಾಖಲಿಸಲಾಗಿದೆ. ಅಂದರೆ ಎಫ್‌ಐಆರ್‌ ದಾಖಲಿಸಲು ಐದು ತಿಂಗಳು ಏಕೆ ಬೇಕು? ಯಾವ ರೀತಿಯ ತನಿಖೆ ನಡೆಸುತ್ತಿದ್ದೀರಿ?’ ಎಂದು ಸಿಜೆಐ ನೇತೃತ್ವದ ಪೀಠವು ಪೊಲೀಸರನ್ನು ತೀವ್ರ ತರಾಟೆಗೆ ತೆಗೆದುಕೊಂಡಿತು.

‘ನೀವು ಏನು ಮಾಡುತ್ತಿದ್ದೀರಿ? ಎಷ್ಟು ಜನರನ್ನು ಬಂಧಿಸಿದ್ದೀರಿ? ಎಷ್ಟು ಮಂದಿ ವಿಚಾರಣೆ ನಡೆಸಿದ್ದೀರಿ’ ಎಂದು ಪೀಠವು, ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ. ನಟರಾಜ ಅವರನ್ನೂ ಕಟುವಾಗಿ ಪ್ರಶ್ನಿಸಿತು. 2021ರ ಡಿಸೆಂಬರ್ 17 ರಿಂದ 19ರವರೆಗೆ ಹರಿದ್ವಾರದಲ್ಲಿ ನಡೆದ ‘ಧರ್ಮ ಸಂಸದ್‌’ ಮತ್ತು ಡಿಸೆಂಬರ್ 19ರಂದು ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದ್ವೇಷದ ಭಾಷಣ ಮಾಡಲಾಗಿದೆ.

ಭಾಷಣಗಳು ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಿವೆ. ಆದರೆ, ಉತಾರಖಂಡ ಮತ್ತು ದೆಹಲಿ ಪೊಲೀಸರು ಅಪರಾಧಿಗಳ ವಿರುದ್ಧ ಕ್ರಮ ಕೈಗೊಂಡಿಲ್ಲವೆಂದು ದೂರಿ ಸಾಮಾಜಿಕ ಹೋರಾಟಗಾರ ತುಷಾರ್ ಗಾಂಧಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT