ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶ: ಕಾಂಗ್ರೆಸ್‌–ಪೊಲೀಸ್‌ ಜಟಾಪಟಿ

ಉತ್ತರ ಪ್ರದೇಶ: ಹಲವೆಡೆ ಪ್ರತಿಭಟನೆ l ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಆಗ್ರಹ
Last Updated 1 ಅಕ್ಟೋಬರ್ 2020, 18:34 IST
ಅಕ್ಷರ ಗಾತ್ರ

ನೊಯಿಡಾ: ಹಾಥರಸ್‌ ಜಿಲ್ಲೆಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು, ಸಂತ್ರಸ್ತೆಯ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿ ದೇಶದ ಹಲವೆಡೆ ಪ್ರತಿಭಟನೆಗಳು ನಡೆದಿವೆ. ಸಂತ್ರಸ್ತೆಯ ಕುಟುಂಬವನ್ನು ಭೇಟಿ ಮಾಡಲು ಹೋಗಿದ್ದ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ರಾಹುಲ್ ಗಾಂಧಿ ಅವರನ್ನು ಉತ್ತರ ಪ್ರದೇಶ ಪೊಲೀಸರು ಗುರುವಾರ ವಶಕ್ಕೆ ಪಡೆದು ಬಿಡುಗಡೆ ಮಾಡಿದ್ದಾರೆ.

ಪ್ರಕರಣ ಖಂಡಿಸಿ ಮುಂಬೈನಲ್ಲಿ ಕಾಂಗ್ರೆಸ್ ಮಹಿಳಾ ಮೋರ್ಚಾ ಸದಸ್ಯರು ಮೊಂಬತ್ತಿ ಮೆರವಣಿಗೆ ನಡೆಸಿದ್ದಾರೆ. ಉತ್ತರ ಪ್ರದೇಶದ ಹಲವೆಡೆ ಸಮಾಜವಾದಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಹರಿಯಾಣ, ಮಹಾರಾಷ್ಟ್ರ, ಪಂಜಾಬ್, ಪಶ್ಚಿಮ ಬಂಗಾಳದಲ್ಲಿ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದಾರೆ. ಸಂತ್ರಸ್ತೆಯ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿ ಟ್ವಿಟರ್‌ನಲ್ಲಿ #JusticeForIndiasDaughters ಎಂಬ ಹ್ಯಾಶ್‌ಟ್ಯಾಗ್‌ನಡಿ ಟ್ವೀಟ್‌ ಮಾಡಲಾಗುತ್ತಿದೆ.

ಉತ್ತರ ಪ್ರದೇಶದ ಬಲರಾಂಪುರದಲ್ಲಿ ಬುಧವಾರ ರಾತ್ರಿ ಯುವತಿಯೊಬ್ಬರ ಮೇಲೆ ಅತ್ಯಾಚಾರ ನಡೆದಿದ್ದು, ಅವರು ಮೃತಪಟ್ಟಿದ್ದಾರೆ. ಈ ಪ್ರಕರಣ ಸಹ ಜನರ ಆಕ್ರೋಶಕ್ಕೆ ಕಾರಣವಾಗಿದೆ.

‘ಉತ್ತರ ಪ್ರದೇಶದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ. ಅತ್ಯಾಚಾರಿಗಳಿಗೆ ಶಿಕ್ಷೆ ಆಗುತ್ತಿಲ್ಲ. ಬಿಜೆಪಿ ಸರ್ಕಾರವನ್ನು ವಜಾ ಮಾಡಬೇಕು. ರಾಷ್ಟ್ರಪತಿ ಆಳ್ವಿಕೆ ಹೇರಬೇಕು’ ಎಂದು ವಿರೋಧ ಪಕ್ಷಗಳು ಒತ್ತಾಯಿಸಿವೆ.

ಪ್ರಿಯಾಂಕಾ ಮತ್ತು ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್‌ನ ಇತರ ನಾಯಕರ ನಿಯೋಗವು ಅತ್ಯಾಚಾರ ಸಂತ್ರಸ್ತೆಯ ಕುಟುಂಬದವರನ್ನು ಭೇಟಿ ಮಾಡಲು ಗುರುವಾರ ದೆಹಲಿಯಿಂದ ಪ್ರಯಾಣ ಆರಂಭಿಸಿತ್ತು. ಹಾಥರಸ್‌ ಜಿಲ್ಲಾಡಳಿತವು ಜಿಲ್ಲೆಯಲ್ಲಿ ನಿಷೇಧಾಜ್ಞೆಯನ್ನು ಜಾರಿ ಮಾಡಿತು. ಜಿಲ್ಲೆಯ ಎಲ್ಲಾ ಗಡಿರಸ್ತೆಗಳನ್ನು ಬಂದ್ ಮಾಡಿತು. ಕಾಂಗ್ರೆಸ್‌ ನಿಯೋಗವು ಗ್ರೇಟರ್ ನೊಯಿಡಾವನ್ನು ಪ್ರವೇಶಿಸದ ತಕ್ಷಣ, ಅವರ ವಾಹನಗಳನ್ನು ಉತ್ತರ ಪ್ರದೇಶ ಪೊಲೀಸರು ತಡೆದರು.

ಕಾಂಗ್ರೆಸ್‌ ನಾಯಕರು ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ನಡೆದುಕೊಂಡೇ ಹಾಥರಸ್‌ನತ್ತ ಹೊರಟರು.

ಅವರನ್ನು ತಡೆಯಲು ಪೊಲೀಸರು ಮುಂದಾದಾಗ, ತಳ್ಳಾಟ ನಡೆಯಿತು. ಆಗ ರಾಹುಲ್ ಕೆಳಗೆ ಬಿದ್ದರು. ನಂತರವೂ ಕಾಲ್ನಡಿಗೆ ಮುಂದುವರಿಯಿತು.ಆಗ ಪೊಲೀಸರು ರಾಹುಲ್ ಮತ್ತು ಪ್ರಿಯಾಂಕಾ ಅವರನ್ನು ವಶಕ್ಕೆ ಪಡೆದು, ಬುದ್ಧ ಇಂಟರ್‌ನ್ಯಾಷನಲ್ ಸರ್ಕಿಟ್‌ನ ಅತಿಥಿಗೃಹದಲ್ಲಿ ಇರಿಸಿದರು. ಅವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲು ಕಾಂಗ್ರೆಸ್‌ ಕರೆ ನೀಡಿತು. ಆದರೆ, ಸಂಜೆ ವೇಳೆಗೆ ಪೊಲೀಸರು ಇಬ್ಬರನ್ನೂ ಬಿಡುಗಡೆ ಮಾಡಿದರು.

'ಅತ್ಯಾಚಾರವೇ ನಡೆದಿಲ್ಲ'

‘ಹಾಥರಸ್‌ ಜಿಲ್ಲೆಯ ಯುವತಿಯ ದೇಹದಿಂದ ಸಂಗ್ರಹಿಸಲಾಗಿದ್ದ ಮಾದರಿಯಲ್ಲಿ ವೀರ್ಯಾಣು ಪತ್ತೆಯಾಗಿಲ್ಲ. ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿಲ್ಲ ಎಂದು ವಿಧಿವಿಜ್ಞಾನ ಪರೀಕ್ಷೆಯ ವರದಿ ಹೇಳುತ್ತದೆ’ ಎಂದು ಉತ್ತರಪ್ರದೇಶ ಪೊಲೀಸರು ಗುರುವಾರ ಸಂಜೆ ಹೇಳಿಕೆ ನೀಡಿದ್ದಾರೆ.

ಹೋಲಿಕೆ ಬೇಡ: ಗೆಹ್ಲೋಟ್

‘ರಾಜಸ್ಥಾನದ ಬಾರಾನ್‌ ಜಿಲ್ಲೆಯಲ್ಲಿ ಬಾಲಕಿಯರ ಮೇಲೆ ಅತ್ಯಾಚಾರ ನಡೆದಿದೆ ಎಂಬುದು ಸುಳ್ಳು. ಹುಡುಗರ ಜೊತೆ
ಸ್ವಇಚ್ಛೆಯಿಂದ ಹೋಗಿದ್ದಾಗಿ ಬಾರಾನ್‌ನಿಂದ ನಾಪತ್ತೆಯಾಗಿದ್ದ ಹುಡುಗಿಯರು ಮ್ಯಾಜಿಸ್ಟ್ರೇಟ್ ಎದುರು ಹೇಳಿಕೆ ನೀಡಿದ್ದಾರೆ. ಅವರ ವೈದ್ಯಕೀಯ ಪರೀಕ್ಷೆಯೂ ನಡೆದಿದೆ. ಅವರ ಮೇಲೆ ಅತ್ಯಾಚಾರ ನಡೆದಿಲ್ಲ. ಹೀಗಾಗಿ ಈ ಘಟನೆಯನ್ನು ಉತ್ತರ ಪ್ರದೇಶದ ಹಾಥರಸ್‌ನ ಅತ್ಯಾಚಾರಕ್ಕೆ ಹೋಲಿಕೆ ಮಾಡುವುದು ಸರಿಯಲ್ಲ’ ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಗುರುವಾರ ಹೇಳಿದ್ದಾರೆ.

ಸೆ.19ರಂದು ಬಾರಾನ್‌ ಜಿಲ್ಲೆಯಿಂದ ಇಬ್ಬರು ಸಹೋದರಿಯರು ನಾಪತ್ತೆಯಾಗಿದ್ದರು. ಅವರು ಸೆ.22ರಂದ ಕೋಟಾದಲ್ಲಿ ಪತ್ತೆಯಾಗಿದ್ದರು. ಹೇಳಿಕೆ ಪಡೆದ ಬಳಿಕ ಅವರನ್ನು ಕುಟುಂಬದವರಿಗೆ ಒಪ್ಪಿಸಲಾಗಿತ್ತು. ಈ ಬಾಲಕಿಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಲಾಗುತ್ತಿದೆ ಎಂದು ರಾಜಸ್ಥಾನ ಬಿಜೆಪಿ ನಾಯಕರು ಆರೋಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT