ಪರೀಕ್ಷಾ ಶುಲ್ಕ ಮರುಪಾವತಿ: 8 ವಾರಗಳಲ್ಲಿ ನಿರ್ಧರಿಸಲು ದೆಹಲಿ ಹೈಕೋರ್ಟ್ ನಿರ್ದೇಶನ

ನವದೆಹಲಿ: ಕೋವಿಡ್–19 ಕಾರಣದಿಂದ 10 ಹಾಗೂ 12ನೇ ತರಗತಿ ಪರೀಕ್ಷೆಗಳನ್ನು ರದ್ದುಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕವನ್ನು ಹಿಂದಿರುಗಿಸುವ ಕುರಿತು 8 ವಾರಗಳ ಒಳಗಾಗಿ ನಿರ್ಧಾರ ಕೈಗೊಳ್ಳುವಂತೆ ದೆಹಲಿ ಹೈಕೋರ್ಟ್ ಸಿಬಿಎಸ್‌ಇಗೆ ಬುಧವಾರ ನಿರ್ದೇಶನ ನೀಡಿತು.
10ನೇ ತರಗತಿ ವಿದ್ಯಾರ್ಥಿಯೊಬ್ಬರ ತಾಯಿ ದೀಪಾ ಜೋಸೆಫ್ ಎಂಬುವವರು ಈ ಸಂಬಂಧ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪ್ರತೀಕ್ ಜಲನ್ ಈ ನಿರ್ದೇಶನ ನೀಡಿದರು.
‘ನಾನು ಪರೀಕ್ಷಾ ಶುಲ್ಕ ₹2,100 ಪಾವತಿಸಿದ್ದೇನೆ. 10ನೇ ತರಗತಿ ಪರೀಕ್ಷೆಗಳು ರದ್ದಾಗಿರುವ ಕಾರಣ ಈ ಶುಲ್ಕವನ್ನು ಮರುಪಾವತಿ ಮಾಡಲು ಸಿಬಿಎಸ್‌ಇಗೆ ನಿರ್ದೇಶನ ನೀಡಬೇಕು’ ಎಂದು ಕೋರಿ ಅವರು ಅರ್ಜಿ ಸಲ್ಲಿಸಿದ್ದರು.
ಅರ್ಜಿದಾರರ ಪರ ವಕೀಲ ರಾಬಿನ್ ರಾಜು. ‘ಸಿಬಿಎಸ್‌ಇ ಪರೀಕ್ಷೆಗಳನ್ನು ರದ್ದು ಮಾಡಿರುವ ಕಾರಣ, ಪರೀಕ್ಷಾ ಶುಲ್ಕದಲ್ಲಿ ಭಾಗಶಃ ಮೊತ್ತವನ್ನಾದರೂ ವಿದ್ಯಾರ್ಥಿಗಳಿಗೆ ಮರುಪಾವತಿ ಮಾಡಬೇಕು’ ಎಂದು ವಾದಿಸಿದರು.
‘ವಿದ್ಯಾರ್ಥಿಗಳು ಪಡೆದ ಅಂಕಗಳನ್ನು ಆಯಾ ಶಾಲೆಗಳು ಮಂಡಳಿಯ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡುತ್ತಿದ್ದಾರೆ. ಪರೀಕ್ಷೆ ನಡೆಸಿ, ಫಲಿತಾಂಶ ಪ್ರಕಟಿಸುವುದಕ್ಕೆ ತಗಲುವ ವೆಚ್ಚವೂ ಕಡಿಮೆಯಾಗಿದೆ’ ಎಂದೂ ಅವರು ವಾದಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿಬಿಎಸ್ಇ ಪರ ವಕೀಲ ರೂಪೇಶ್‌ಕುಮಾರ್, ‘ವಿದ್ಯಾರ್ಥಿಗಳಿಂದ ಪರೀಕ್ಷಾ ಶುಲ್ಕ ರೂಪದಲ್ಲಿ ಸಂಗ್ರಹವಾಗುವ ಮೊತ್ತವನ್ನೇ ಸಿಬಿಎಸ್‌ಇ ತನ್ನ ವೆಚ್ಚಕ್ಕೆ ಬಳಸಿಕೊಳ್ಳುತ್ತದೆ. ಅಲ್ಲದೇ, ಪರೀಕ್ಷೆಗಳನ್ನು ಭೌತಿಕವಾಗಿ ನಡೆಸುವುದಕ್ಕೂ ಪರೀಕ್ಷಾ ಶುಲ್ಕ ಸಂಗ್ರಹಿಸುವುದಕ್ಕೂ ಸಂಬಂಧವೇ ಇಲ್ಲ’ ಎಂದು ಕೋರ್ಟ್‌ಗೆ ತಿಳಿಸಿದರು.
‘ಶುಲ್ಕ ಮರುಪಾವತಿ ಮಾಡುವ ಕುರಿತು ಸಿಬಿಎಸ್‌ಇ ಕೈಗೊಳ್ಳುವ ನಿರ್ಧಾರ ತೃಪ್ತಿಕರವಾಗಿರದಿದ್ದರೆ, ಅದನ್ನು ಪ್ರಶ್ನಿಸಲು ದೀಪಾ ಅವರಿಗೆ ಅವಕಾಶ ಇದೆ’ ಎಂದು ಹೇಳಿದ ನ್ಯಾಯಮೂರ್ತಿ ಜಲನ್, ಅರ್ಜಿಯನ್ನು ವಿಲೇವಾರಿ ಮಾಡಿದರು.
ಇದನ್ನೂ ಓದಿ... PV Web Exclusive: 1000+ ಸಿಕ್ಸರ್, 1000+ ಬೌಂಡರಿ, 14,000+ ರನ್=ಕ್ರಿಸ್ ಗೇಲ್
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.