ಬುಧವಾರ, 7 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: 1000+ ಸಿಕ್ಸರ್, 1000+ ಬೌಂಡರಿ, 14,000+ ರನ್=ಕ್ರಿಸ್ ಗೇಲ್

Last Updated 14 ಜುಲೈ 2021, 10:09 IST
ಅಕ್ಷರ ಗಾತ್ರ

ಆಟದ ಮನೆ

***

ಕೆರೀಬಿಯನ್ ಬ್ಯಾಟ್ಸ್‌ಮನ್‌ಗಳ ಧಾರ್ಷ್ಟ್ಯದ ಪ್ರತಿನಿಧಿಯಾಗಿ ಕಾಣುವ ಕ್ರಿಸ್‌ ಗೇಲ್ ವಯಸ್ಸು ಆದಂತೆಲ್ಲ ಟೀಕಾಕಾರರ ಬಾಯಿಯನ್ನು ಆಟದ ಮೂಲಕವೇ ಪದೇ ಪದೇ ಮುಚ್ಚಿಸುತ್ತಿದ್ದಾರೆ. ಈ ಭೂಗ್ರಹದ ಮೇಲೆ ಟ್ವೆಂಟಿ20 ಕ್ರಿಕೆಟ್‌ನಲ್ಲಿ 14 ಸಾವಿರ ರನ್‌ಗಳ ಗಡಿ ದಾಟಿದ ಏಕೈಕ ಬ್ಯಾಟ್ಸ್‌ಮನ್ ಅವರು. ಇಂಥ ಆಟಗಾರ ನೆಟ್ಟಿರುವ ಮೈಲುಗಲ್ಲುಗಳ ಮೇಲೆ ಕೂತು ಅವರದ್ದೇ ಆಟವನ್ನು ನೆನೆಯುವುದು ದೊಡ್ಡ ಸುಖ...

***

ಜುಲೈ 14ಕ್ಕೆ ಅರ್ಥಾತ್ ಇದೇ ಬುಧವಾರಕ್ಕೆ ಸರಿಯಾಗಿ ಕ್ರಿಸ್ಟೊಫರ್ ಹೆನ್ರಿ ಗೇಲ್ ವಯಸ್ಸು 41 ವರ್ಷ 296 ದಿನ. ಅವರು ಇದುವರೆಗೆ 35 ಬೇರೆ ಬೇರೆ ದೇಶಗಳ ತಂಡಗಳ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಅವರನ್ನು ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌)ನಲ್ಲಿ ತಾರಾ ವರ್ಚಸ್ಸಿನ ಬ್ಯಾಟ್ಸ್‌ಮನ್ ಆಗಿಸಿದ್ದನ್ನು ಕಂಡಿದ್ದೇವೆ.

ಟ್ವೆಂಟಿ20 ಕ್ರಿಕೆಟ್‌ ಅನ್ನು ಅವರಷ್ಟು ಹೆಚ್ಚಾಗಿ ಜೀವಿಸಿದ ಇನ್ನೊಬ್ಬ ಬ್ಯಾಟ್ಸ್‌ಮನ್ ಕಾಣಸಿಗುವುದಿಲ್ಲ. ಆಸ್ಟ್ರೇಲಿಯಾ ವಿರುದ್ಧ ಮೂರನೇ ಟ್ವೆಂಟಿ20 ಪಂದ್ಯದಲ್ಲಿ ಅವರು ಮೊನ್ನೆ ಹೊಡೆದ 67 ರನ್‌ಗಳು ಅವರ ನೀಳಕಾಯಕ್ಕೆ ಆಗಿರುವ ವಯಸ್ಸನ್ನು ಮತ್ತೆ ಮರೆಮಾಚುವಂತೆ ಇದ್ದವು. ಚುಟುಕು ಕ್ರಿಕೆಟ್‌ನಲ್ಲಿ 14 ಸಾವಿರ ರನ್‌ಗಳನ್ನು ಈ ಭೂಗ್ರಹದಲ್ಲಿ ಬೇರೆ ಯಾವ ಬ್ಯಾಟ್ಸ್‌ಮನ್‌ ಕೂಡ ಕಲೆಹಾಕಿಲ್ಲ. ಅಂಥ ಸಾಧನೆಯನ್ನು ಅವರು ತಮ್ಮ ಹೆಸರಿಗೆ ಆ ಪಂದ್ಯದಲ್ಲಿ ಬರೆದುಕೊಂಡ ಬಗೆಯೂ ಆಸಕ್ತಿಕರ. ಅನುಭವಿ ಬೌಲರ್ ಆಡಂ ಜಂಪಾ ಎಸೆತವೊಂದನ್ನು ಸಿಕ್ಸರ್‌ಗೆ ಎತ್ತಿ 14 ಸಾವಿರ ರನ್‌ಗಳ ಗುರಿ ದಾಟಿದ ದಿಗ್ಗಜನಾದರು. ಜಾಝ್ ಹ್ಯಾಜಲ್‌ವುಡ್‌ ಮಾಡಿದ ಓವರ್‌ ಒಂದರಲ್ಲಿ ಒಂದು ಸಿಕ್ಸರ್‌ ಹೊಡೆದ ಬೆನ್ನಿಗೇ ಮೂರು ಬೌಂಡರಿಗಳನ್ನು ಗಳಿಸಿ, ತಾವು ಯಾಕೆ ಚುಟುಕು ಕ್ರಿಕೆಟ್‌ನಲ್ಲಿ ‘ಯೂನಿವರ್ಸ್ ಬಾಸ್’ ಎಂದು ಮತ್ತೊಮ್ಮೆ ಸಾಬೀತುಪಡಿಸಿದರು.

ಗೇಲ್ ಈ ಅರ್ಧಶತಕ ಗಳಿಸಿದ ಸಂದರ್ಭ ಅವರ ಸ್ಥಾನದ ಮೇಲೆ ತೂಗುಗತ್ತಿ ಇದ್ದಂಥದ್ದು. ಯಾಕೆಂದರೆ, ಆಸ್ಟ್ರೇಲಿಯಾದ ಎದುರು ಮೊದಲ ಎರಡು ಚುಟುಕು ಪಂದ್ಯಗಳಲ್ಲಿ ಅವರು ಹೆಚ್ಚು ರನ್ ಗಳಿಸದೇ ಔಟಾಗಿದ್ದರು. ಇನ್ನೂ ಅವರನ್ನು ತಂಡದಲ್ಲಿ ಯಾಕೆ ಇಟ್ಟುಕೊಳ್ಳಬೇಕು ಎಂಬ ಧಾಟಿಯಲ್ಲಿ ಕೆಲವರು ಅಭಿಪ್ರಾಯ ಹೊರಡಿಸಲಾರಂಭಿಸಿದ್ದರು. ಇಂತಹ ಸಂದಿಗ್ಧದಲ್ಲಿ ಬಹುತೇಕರಿಗೆ ಮನಸ್ಸಿನಲ್ಲಿ ಏಳುವ ತರಂಗಗಳಿಂದ ಆಟ ಇನ್ನೂ ಮುಕ್ಕಾಗುವ ಸಂಭವನೀಯತೆಯೇ ಹೆಚ್ಚು. ಆದರೆ, ಗೇಲ್ 38 ಎಸೆತಗಳಲ್ಲಿ 67 ರನ್‌ ಬಾಚಿ, ತಮ್ಮ ತಂಡಕ್ಕೆ ಆರು ವಿಕೆಟ್‌ಗಳ ಗೆಲುವನ್ನಷ್ಟೇ ಅಲ್ಲದೆ ಸರಣಿ ವಿಜಯವನ್ನೂ ದಕ್ಕಿಸಿಕೊಟ್ಟರು.

ಚುಟುಕು ಕ್ರಿಕೆಟ್‌ನಲ್ಲಿ ವಿಂಡೀಸ್‌ ಬ್ಯಾಟ್ಸ್‌ಮನ್‌ಗಳು ಯಾಕೆ ಅಪಾಯಕಾರಿ ಎನ್ನುವುದಕ್ಕೆ ಗೇಲ್‌ ಅವರಷ್ಟೇ ಅಲ್ಲದೆ, ಈ ಮಾದರಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದವರ ಪಟ್ಟಿಯಲ್ಲಿ ಅವರ ನಂತರ ಸ್ಥಾನದಲ್ಲಿರುವ ಕೀರನ್ ಪೊಲಾರ್ಡ್‌ ಕೂಡ ಸಾಕ್ಷಿಯಾಗಿದ್ದಾರೆ. ಗೇಲ್‌ ಹಾಗೂ ಪೊಲಾರ್ಡ್‌ ಇಬ್ಬರ ನಡುವಿನ ರನ್‌ ಗಳಿಕೆಯ ಅಂತರ ಟ್ವೆಂಟಿ20 ಕ್ರಿಕೆಟ್‌ನಲ್ಲಿ 3,100ಕ್ಕೂ ಹೆಚ್ಚು. ಅಂದರೆ, ಗೇಲ್ ಇಟ್ಟಿರುವ ದಾಪುಗಾಲು ಎಂಥದ್ದು ಎನ್ನುವುದನ್ನು ಅಂದಾಜು ಮಾಡಬಹುದು.

<strong>ಚುಟುಕು ಕ್ರಿಕೆಟ್ ತ್ರಿವಿಕ್ರಮ</strong>
ಚುಟುಕು ಕ್ರಿಕೆಟ್ ತ್ರಿವಿಕ್ರಮ

13,971 ರನ್‌ಗಳನ್ನು ಚುಟುಕು ಕ್ರಿಕೆಟ್‌ನ ಖಾತೆಯಲ್ಲಿಟ್ಟುಕೊಂಡು ಆಸ್ಟ್ರೇಲಿಯಾ ಎದುರಿನ ಮೂರನೇ ಪಂದ್ಯದಲ್ಲಿ ಬ್ಯಾಟಿಂಗ್ ಮಾಡಲು ಅವರು ಹೋದದ್ದು. ಇನ್ನು 29 ರನ್‌ಗಳನ್ನು ಗಳಿಸಿದ್ದೇ ಅವರ ಆತ್ಮಬಲ ಮರಳಿತು. 2016ರ ನಂತರ ಅವರಿಗೆ ಅಂತರರಾಷ್ಟ್ರೀಯ ಚುಟುಕು ಕ್ರಿಕೆಟ್‌ನಲ್ಲಿ ಒಂದೂ ಅರ್ಧಶತಕ ಗಳಿಸಲು ಆಗಿರಲಿಲ್ಲ. ಹೀಗಾಗಿ ಅವರ ಫಾರ್ಮ್ ಚರ್ಚಾವಸ್ತುವಾಗಿತ್ತು. ಮೂವತ್ತೇಳೂವರೆ ಸರಾಸರಿಯಲ್ಲಿ 431 ಚುಟುಕು ಪಂದ್ಯಗಳಲ್ಲಿ ಗೇಲ್ ಇಷ್ಟೊಂದು ರನ್‌ಗಳನ್ನು ಜಮೆಮಾಡಿರುವುದು. ಮೇಲೆ ಬರೆದಂತೆ, 35 ತಂಡಗಳ ಪರವಾಗಿ ಅವರು ಆಡಿದ್ದರ ಫಲವಿದು. ವಿಶ್ವದ ವಿವಿಧೆಡೆ ಬದಲಾದ ವಾತಾವರಣದಲ್ಲಿ ಅವರು ಹೋಗಿ ತಮ್ಮತನದ ಆಟದ ಸವಿಯೂಟ ಉಣಬಡಿಸುತ್ತಾ ಬಂದಿದ್ದಾರೆ. ಅವರಿಗೆ ಇರುವ ಹೃದಯದ ಬಡಿತದ ಸಮಸ್ಯೆಯಿಂದಾಗಿ ಜೋರಾಗಿ ರನ್‌ಗಳನ್ನು ಓಡಿ ಹೆಕ್ಕಲಾಗದು. ಅದನ್ನು ಅವರು ಊನವಾಗಿಸಿಕೊಳ್ಳದೆ, ದೊಡ್ಡ ಹೊಡೆತಗಳನ್ನು ಹೊಡೆಯುವ ಅವಕಾಶವನ್ನಾಗಿ ಬದಲಿಸಿಕೊಂಡಿದ್ದು ಸ್ತುತ್ಯರ್ಹ. ಬರೀ 20 ಓವರ್‌ಗಳ ಪಂದ್ಯಗಳಲ್ಲಿ 22 ಶತಕ ಹಾಗೂ 86 ಅರ್ಧಶತಕಗಳನ್ನು ದಾಖಲಿಸುವುದು ವಿರಳಾತಿ ವಿರಳ ಸಾಧನೆಯೇ ಹೌದು. ಯಾಕೆಂದರೆ, ಪೊಲಾರ್ಡ್‌ ಈಗಾಗಲೇ 500ಕ್ಕಿಂತ ಹೆಚ್ಚು ಚುಟುಕು ಪಂದ್ಯಗಳನ್ನು ಆಡಿರುವ ಹೆಗ್ಗಳಿಕೆಗೆ ಪಾತ್ರರಾಗಿ ಆಗಿದೆ. ಅವರಿಗಿಂತ ಕಡಿಮೆ ಪಂದ್ಯಗಳನ್ನು ಆಡಿರುವ ಗೇಲ್, ತಮ್ಮ ಮೇಲಿನ ಕ್ರಮಾಂಕದ ಬ್ಯಾಟಿಂಗ್‌ ಅವಕಾಶವನ್ನು ಹೆಚ್ಚು ಹಣ್ಣಾಗಿಸಿಕೊಂಡಿರುವುದಕ್ಕೆ ಅವರ ರನ್‌ಗಳ ರಾಶಿ ಕನ್ನಡಿ ಹಿಡಿಯುತ್ತದೆ. ಸಾವಿರಕ್ಕೂ ಹೆಚ್ಚು ಬೌಂಡರಿಗಳು ಹಾಗೂ ಅದೇ ಸಂಖ್ಯೆಯನ್ನು ಮೀರುವಷ್ಟು ಸಿಕ್ಸರ್‌ಗಳನ್ನು ಗೇಲ್ ಸಿಡಿಸಿದ್ದಾರೆ.

ಪುಣೆ ವಾರಿಯರ್ಸ್‌ ತಂಡದ ವಿರುದ್ಧ 2013ರ ಐಪಿಎಲ್‌ನಲ್ಲಿ ನಡೆದ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಪರವಾಗಿ ಅವರು ಗಳಿಸಿದ 175 ಈ ಮಾದರಿಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವೈಯಕ್ತಿಕ ಸ್ಕೋರ್‌ ಆಗಿ ಉಳಿದಿದೆ. ಅತಿ ವೇಗದ ಶತಕ, ಅತಿ ಹೆಚ್ಚು ಸಿಕ್ಸರ್‌ಗಳನ್ನು ಗಳಿಸಿದ ಶ್ರೇಯವನ್ನು ಕೊಟ್ಟಂತಹ ಇನಿಂಗ್ಸ್‌ ಅದು.

ಟ್ವೆಂಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೊದಲ ಶತಕ ದಾಖಲಿಸಿದವರೂ ಗೇಲ್. 2007ರಲ್ಲಿ ದಕ್ಷಿಣ ಆಫ್ರಿಕಾ ಎದುರು 57 ಎಸೆತಗಳಲ್ಲಿ 117 ರನ್ ಗಳಿಸಿದ ಅವರು, ತಾವು ಭವಿಷ್ಯದಲ್ಲಿ ನೆಡಲಿರುವ ಮೈಲಿಗಲ್ಲುಗಳ ಕುರಿತು ಸೂಚನೆ ಕೊಟ್ಟಿದ್ದರು.

<strong>ಇನ್ನೊಂದು ಸಿಕ್ಸರ್</strong>
ಇನ್ನೊಂದು ಸಿಕ್ಸರ್

ಚುಟುಕು ಕ್ರಿಕೆಟ್‌ ಹಾಗೂ ಏಕದಿನ ಪಂದ್ಯಗಳಿಗಷ್ಟೆ ಸೂಕ್ತವಾದ ಆಟ ಇವರದ್ದು ಎಂದು ಟೀಕಾಕಾರರು ಅಡಿಗೆರೆ ಎಳೆದರು. ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್‌ ಪಂದ್ಯದ ಇನಿಂಗ್ಸ್‌ ಒಂದರಲ್ಲಿ ಏಳೂವರೆ ಗಂಟೆ ಆಡಿ ಬಂದು ಅವರು ಬೆವರು ಒರೆಸಿಕೊಂಡಿದ್ದರು. ವಿಂಡೀಸ್ ತಂಡದ ಬುಡವೇ ಅಲ್ಲಾಡುತ್ತಿದ್ದ ಸ್ಥಿತಿ 2004ರಲ್ಲಿ ಇತ್ತು. ದಕ್ಷಿಣ ಆಫ್ರಿಕಾ ವಿರುದ್ಧ ಅದರದ್ದೇ ಸೆಂಚೂರಿಯನ್ ನೆಲದಲ್ಲಿ ಟೆಸ್ಟ್‌ ಪಂದ್ಯ. 500ಕ್ಕೂ ಹೆಚ್ಚು ರನ್‌ಗಳನ್ನು ಆತಿಥೇಯರು ಗುಡ್ಡೆ ಹಾಕಿದ್ದರು. ಆಗ 79 ಎಸೆತಗಳಲ್ಲಿ ಶತಕ ಸಿಡಿಸಿ, ಎದುರಾಳಿಗಳಿಗೆ ಗೇಲ್ ಚುರುಕು ಮುಟ್ಟಿಕೊಳ್ಳುವಂತಹ ಸಂದೇಶ ನೀಡಿದ್ದರು.

ಬೇರೆ ದೇಶಗಳ ಚುಟುಕು ಕ್ರಿಕೆಟ್‌ ತಂಡಗಳ ಪಾಲಿಗಷ್ಟೇ ಗೇಲ್ ಡಾರ್ಲಿಂಗ್ ಅಲ್ಲ. ತಮ್ಮದೇ ಹೆಮ್ಮೆಯ ವಿಂಡೀಸ್ ತಂಡದ ‍ಪರವಾಗಿಯೂ ಈ ಮಾದರಿಯಲ್ಲಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಅವರಿಗೇ ಅಗ್ರ ಸ್ಥಾನ.

ಕ್ರಿಕೆಟ್ ತಂತ್ರಗಾರಿಕೆಯಲ್ಲಿ ಗೇಲ್ ನಿಪುಣರೇನೂ ಅಲ್ಲ. ಅವರ ಆಟದ ವಿಲಕ್ಷಣ ಸ್ವರೂಪವನ್ನು ಸುಲಭವಾಗಿ ಟೀಕಿಸಬಹುದು. ಆದರೆ, ತಮ್ಮ ಊನಗಳನ್ನು ಅವರು ಮುಚ್ಚಿಹಾಕಿಕೊಳ್ಳುವುದು ಕೈ ಹಾಗೂ ಕಣ್ಣಿನ ಊಹಾತೀತ ಸಂಯೋಜನೆಯಿಂದ. ಗುಡ್‌ ಲೆಂತ್ ಎಸೆತಗಳಿಗೆ ಕ್ರಿಕೆಟ್‌ನಲ್ಲಿ ಮರ್ಯಾದೆ ಇದೆ. ಅದನ್ನು ಚಿಂದಿ ಮಾಡಿದ್ದು ಗೇಲ್ ಅವರ ಈ ಸಂಯೋಜನೆಯೇ. ಲಾರಾ ತರಹ ಫುಟ್‌ ವರ್ಕ್ ಇಲ್ಲ, ಕ್ಲೈವ್ ಲಾಯ್ಡ್ ಅವರಂಥ ಕ್ಲಾಸ್ ಇಲ್ಲ. ಡೆಸ್ಮಂಡ್ ಹೇನ್ಸ್‌ ಹಾಗೂ ಗಾರ್ಡನ್ ಗ್ರೀನಿಜ್ ಇಬ್ಬರ ದಾಳಿಕೋರ ಸ್ವಭಾವವನ್ನು ಎರವಲು ಪಡೆದಂತೆ ಆಡುವ ಗೇಲ್ ಆಟಕ್ಕೆ ತನ್ನತನವಿದೆ. ನಗುನಗುತ್ತಲೇ ಮಗುವಿನಂತೆ ಆಡುವ ಅವರು, ಬೌಲರ್‌ಗಳನ್ನು ಬಲು ಬೇಗ ಮುದುರಿಕೊಳ್ಳುವಂತೆ ಮಾಡಬಲ್ಲರು. ಹೀಗಾಗಿ ಅವರನ್ನು ಪ್ರೀತಿಯ ಹೊಡೆತಗಳ ಬ್ಯಾಟ್ಸ್‌ಮನ್‌ ಎನ್ನಬಹುದೇನೋ?

ಅಡಿಲೇಡ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಏಳೂವರೆ ಗಂಟೆ ನಿಂತು ಆಡಿ 165 ರನ್ ಸೇರಿಸಿ ಟೆಸ್ಟ್‌ ಪಂದ್ಯವನ್ನು ಉಳಿಸಿಕೊಂಡು ಬಂದಿದ್ದ ಗೇಲ್, ಮುಂದಿನ ಟೆಸ್ಟ್‌ನ ಇನಿಂಗ್ಸ್‌ನಲ್ಲೇ 70 ಎಸೆತಗಳಲ್ಲಿ ಶತಕ ಬಾರಿಸಿ ಅದೇ ತನ್ನತನ ಎಂದು ತಲೆ ಮೇಲೆ ಮೊಟಕುವಂತೆ ಸಾರಿದ್ದರು.

‘ಸಚಿನ್, ದ್ರಾವಿಡ್ ಎಲ್ಲರೂ ಇನ್ನೂರು ಇನ್ನೂರು ಎಸೆತಗಳನ್ನು ಆಡಿ ಶತಕ ಗಳಿಸುತ್ತಿದ್ದರು. ನಾನೂ ಹಾಗೆಯೇ ಆಡಿದರೆ ಯಾರೂ ನನ್ನನ್ನು ಮೂಸುವುದಿಲ್ಲ ಎಂದೇ ಹೊಡೆಯಲಾರಂಬಿಸಿದ್ದೆ. ಅದೇ ನನ್ನನ್ನು ಉಳಿಸಿತು’ ಎಂದು ವೀರೇಂದ್ರ ಸೆಹ್ವಾಗ್ ಹೇಳಿದ್ದರು. ಏಕದಿನ ಹಾಗೂ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅವರು ರುಜು ಮಾಡಿ ಹೋದರು. ಈಗ ಅಂಥದ್ದೇ ರುಜುವನ್ನು ಚುಟುಕು ಕ್ರಿಕೆಟ್‌ನಲ್ಲಿ ಗೇಲ್ ಮಾಡಿದ್ದಾರೆ. ತಮ್ಮ ನಿವೃತ್ತಿ ಯಾವಾಗ ಎಂದು ಇಂತಹ ಆಟಗಾರನನ್ನು ಕೇಳಲು ಕ್ರಿಕೆಟ್ ಸಹೃದಯರಿಗೆ ನಿಜಕ್ಕೂ ಮನಸ್ಸಾಗದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT