ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್: ಜಡ್ಜ್ ಕುಟುಂಬದವರ ಚಿಕಿತ್ಸೆಗೆ ವಿಶೇಷ ಸೌಲಭ್ಯಕ್ಕೆ ದೆಹಲಿ ಹೈಕೋರ್ಟ್ ತಡೆ

Last Updated 27 ಏಪ್ರಿಲ್ 2021, 14:44 IST
ಅಕ್ಷರ ಗಾತ್ರ

ನವದೆಹಲಿ: ನ್ಯಾಯಾಧೀಶರು ಮತ್ತು ಅವರ ಕುಟುಂಬದವರ ಕೋವಿಡ್ ಚಿಕಿತ್ಸೆಗೆಂದು ಪಂಚತಾರಾ ಹೋಟೆಲ್‌ನಲ್ಲಿ 100 ಹಾಸಿಗೆಗಳ ವಿಶೇಷ ವ್ಯವಸ್ಥೆ ಕಲ್ಪಿಸಲು ಮುಂದಾಗಿರುವ ದೆಹಲಿ ಸರ್ಕಾರದ ನಿರ್ಧಾರಕ್ಕೆ ದೆಹಲಿ ಹೈಕೋರ್ಟ್ ತಡೆಯೊಡ್ಡಿದೆ.

‘ನಾವು ಎಂದಿಗೂ ವಿಶೇಷ ಚಿಕಿತ್ಸಾ ಸೌಲಭ್ಯವನ್ನು ಕೇಳಿಲ್ಲ. ಇದು ನಮ್ಮ ಕಲ್ಪನೆಗೂ ನಿಲುಕದ್ದು’ ಎಂದು ನ್ಯಾಯಪೀಠ ಹೇಳಿದೆ.

‘ಜನರಿಗೆ ಆಸ್ಪತ್ರೆಗಳಲ್ಲಿ ಹಾಸಿಗೆ ದೊರೆಯದಿರುವಾಗ ನೀವು ಹೇಗೆ ಇಂಥ ಆದೇಶ ನೀಡುತ್ತೀರಿ? ನಮ್ಮನ್ನು ಸಮಾಧಾನಪಡಿಸಲೆಂದು ಈ ನಿರ್ಧಾರವೇ? ನೀವು ಇಂಥ ವಿಶೇಷ ಸೌಲಭ್ಯ ಕಲ್ಪಿಸುವಂತಿಲ್ಲ. ನಾವು ಅದನ್ನು ಕೇಳಿಯೂ ಇಲ್ಲ’ ಎಂದು ನ್ಯಾಯಮೂರ್ತಿ ವಿಪಿನ್ ಸಂಘಿ ಮತ್ತು ರೇಖಾ ಪಳ್ಳಿ ಅವರಿದ್ದ ನ್ಯಾಯಪೀಠವು ಸರ್ಕಾರದ ಪರ ವಕೀಲ ರಾಹುಲ್ ಮೆಹ್ರಾ ಅವರನ್ನು ತರಾಟೆಗೆ ತೆಗೆದುಕೊಂಡಿದೆ.

ದೆಹಲಿಯ ಅಶೋಕ ಹೋಟೆಲ್‌ನಲ್ಲಿ ನ್ಯಾಯಾಧೀಶರು ಮತ್ತು ಅವರ ಕುಟುಂಬದವರಿಗಾಗಿ ವಿಶೇಷ ಸೌಲಭ್ಯ ಕಲ್ಪಿಸಿರುವ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದವು. ಇದನ್ನು ಗಮನಿಸಿದ ದೆಹಲಿ ಹೈಕೋರ್ಟ್‌ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿತ್ತು.

ವಿಶೇಷ ಸೌಲಭ್ಯ ಕಲ್ಪಿಸುವ ಸಂಬಂಧ ಏಪ್ರಿಲ್ 25ರಂದು ದೆಹಲಿ ಸರ್ಕಾರ ಸುತ್ತೋಲೆ ಹೊರಡಿಸಿತ್ತು. ಇದಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.

‘ಒಂದು ಸಂಸ್ಥೆಯಾಗಿ ನಮಗೆ ವಿಶೇಷ ಸೌಲಭ್ಯ ಒದಗಿಸಿ ಎಂದು ನಾವು ಕೇಳಬಹುದೇ? ಜನರಿಗೆ ಚಿಕಿತ್ಸೆ ದೊರೆಯುವುದು ಕಷ್ಟವಾಗಿರುವ ಈ ಸಂದರ್ಭದಲ್ಲಿ ನಮಗೆ ಪಂಚತಾರಾ ಹೋಟೆಲ್‌ನಲ್ಲಿ ಚಿಕಿತ್ಸೆ ನೀಡಿ ಎಂದು ಕೇಳಿದರೆ ಅದು ತಾರತಮ್ಯವಲ್ಲವೇ? ಎಂದು ನ್ಯಾಯಪೀಠ ಪ್ರಶ್ನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT