ಮಂಗಳವಾರ, ಡಿಸೆಂಬರ್ 7, 2021
19 °C

ದೇಶೀಯ ವಿಮಾನಗಳ ಸಂಚಾರ ಹೆಚ್ಚಳ: ಸಚಿವ ಸಿಂಧಿಯಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕೋವಿಡ್‌ ಪಿಡುಗಿನಿಂದಾಗಿ ಕಡಿಮೆಯಾಗಿದ್ದ ದೇಶೀಯ ವಿಮಾನ ಪ್ರಯಾಣ ಈಗ ಸುಧಾರಿಸುತ್ತಿದ್ದು, ಭಾನುವಾರ 2,372 ವಿಮಾನಗಳಲ್ಲಿ ಒಟ್ಟು 3,27,923 ಮಂದಿ ಪ್ರಯಾಣಿಸಿದ್ದಾರೆ ಎಂದು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ. 

‘ಕೋವಿಡ್‌ ಆರಂಭದ ನಂತರ ಕಡಿಮೆಯಾಗಿದ್ದ ದೇಶೀಯ ವಿಮಾನ ಸಂಚಾರವು ಕೇಂದ್ರ ಸರ್ಕಾರದ ರಚನಾತ್ಮಕ ನೀತಿಗಳಿಂದಾಗಿ ಈಗ ಅತ್ಯುನ್ನತ ಮಟ್ಟ ತಲು‍ಪುತ್ತಿದೆ’ ಎಂದು ಸಚಿವ ಸಿಂಧಿಯಾ ಸೋಮವಾರ ಟ್ವೀಟ್‌ ಮಾಡಿದ್ದಾರೆ.  

‘ಅನೇಕ ಸವಾಲುಗಳ ನಡುವೆ ಭಾರತದಲ್ಲಿ ನಾಗರಿಕ ವಿಮಾನಯಾನ ಕ್ಷೇತ್ರವು ಅಭಿವೃದ್ಧಿ ಹೊಂದುತ್ತಿದೆ. ಆದಷ್ಟು ಬೇಗ ಸಹಜ ಸ್ಥಿತಿಗೆ ಮರಳಲು ನಾವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತೇವೆ’ ಎಂದು ಹೇಳಿದ್ದಾರೆ. 

ಸಾಂಕ್ರಾಮಿಕಕ್ಕೂ ಮೊದಲು ಭಾರತದ ದೈನಂದಿನ ದೇಶೀಯ ವಿಮಾನ ಸಂಚಾರವು ಸುಮಾರು 4.25 ಲಕ್ಷ ಪ್ರಯಾಣಿಕರನ್ನು ಹೊಂದಿತ್ತು.

ಕೋವಿಡ್‌ ಸೋಂಕಿನ ತಡೆಗೆ ವಿಧಿಸಿದ ಲಾಕ್‌ಡೌನ್‌ ಭಾಗವಾಗಿ ಕೇಂದ್ರ ಸರ್ಕಾರ 2020ರ ಮಾರ್ಚ್‌ 25ರಿಂದ ಮೇ 25ರವರೆಗೆ ಎಲ್ಲಾ ನಿಗದಿತ ದೇಶೀಯ ವಿಮಾನಗಳ ಸಂಚಾರವನ್ನು ಸ್ಥಗಿತಗೊಳಿಸಿತ್ತು.  

2020ರ ಮೇ 25ರ ನಂತರ ದೇಶೀಯ ವಿಮಾನಗಳು ಪುನರಾರಂಭವಾದಾಗ ಶೇ 33ರಷ್ಟು ಮಾತ್ರ ಕಾರ್ಯನಿರ್ವಹಿಸಲು ಕೇಂದ್ರ ಅನುಮತಿ ನೀಡಿತು. ಕ್ರಮೇಣ ಈ ಸಾಮರ್ಥ್ಯವನ್ನು ಹೆಚ್ಚಿಸಲಾಯಿತು. ಅಕ್ಟೋಬರ್‌ 18ರಿಂದ ಪೂರ್ಣ ಬಳಕೆಗೆ ಅನುಮತಿ ನೀಡಲಾಯಿತು.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು