ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಜಾಬ್‌: ದ್ವಿಸದಸ್ಯ ಪೀಠ ಭಿನ್ನ ತೀರ್ಪು, ವಿಸ್ತೃತ ಪೀಠ ರಚನೆಗೆ ಸಿಜೆಐ ಶಿಫಾರಸು

Last Updated 13 ಅಕ್ಟೋಬರ್ 2022, 6:17 IST
ಅಕ್ಷರ ಗಾತ್ರ

ನವದೆಹಲಿ:ಕರ್ನಾಟಕದ ಪದವಿಪೂರ್ವ ಕಾಲೇಜುಗಳಲ್ಲಿ ಹಿಜಾಬ್‌ ನಿಷೇಧಿಸಿರುವ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸಲ್ಲಿಕೆಯಾಗಿರುವ ಮೇಲ್ಮನವಿ ಸಂಬಂಧ ವಿಭಿನ್ನ ತೀರ್ಪು ನೀಡಿರುವಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠವು, ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಿದೆ.

ನ್ಯಾಯಮೂರ್ತಿ ಹೇಮಂತ್‌ ಗುಪ್ತ ಅವರು ವಿದ್ಯಾರ್ಥಿನಿಯರ ಮೇಲ್ಮನವಿಗಳನ್ನು ತಿರಸ್ಕರಿಸಿದರು. ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರು ಹಿಜಾಬ್‌ ನಿಷೇಧಿಸಿಕರ್ನಾಟಕ ಸರ್ಕಾರ ಹೊರಡಿಸಿರುವ ಫೆಬ್ರುವರಿ 5ರ ಅಧಿಸೂಚನೆಯನ್ನು ರದ್ದುಪಡಿಸಿದರು. ಇಬ್ಬರು ನ್ಯಾಯಮೂರ್ತಿಗಳು ವಿಭಿನ್ನ ಅಭಿಪ್ರಾಯ ತಳೆದರು. ಆದ್ದರಿಂದ ಪ್ರಕರಣದ ವಿಚಾರಣೆಗೆ ವಿಸ್ತೃತ ಪೀಠ ರಚಿಸುವಂತೆ ನ್ಯಾಯಪೀಠ ಮುಖ್ಯ ನ್ಯಾಯಮೂರ್ತಿಗಳಿಗೆ ಶಿಫಾರಸು ಮಾಡಿತು.

ಅಗತ್ಯ ಧಾರ್ಮಿಕ ಪದ್ಧತಿ ಕುರಿತು ವಿವಾದ ಸೃಷ್ಟಿಸುವ ಅಗತ್ಯ ಇರಲಿಲ್ಲ. ಮತ್ತು ಹೈಕೋರ್ಟ್‌ ತಪ್ಪು ನಿರ್ಧಾರ ಕೈಗೊಂಡಿದೆ ಎಂದು ಸುಧಾಂಶು ಧುಲಿಯಾ ಅಭಿಪ್ರಾಯಪಟ್ಟರು. ಹಿಜಾಬ್‌ ಧರಿಸುವುದು ಆಯ್ಕೆಗೆ ಬಿಟ್ಟಿದ್ದು. ಅದಕ್ಕಿಂತ ಹೆಚ್ಚೂ ಇಲ್ಲ ಕಡಿಮೆಯೂ ಇಲ್ಲ ಎಂದಿರುವ ಅವರು, ಇಂತಹ ನಿರ್ಬಂಧಗಳನ್ನು ಹೇರುವ ಮೂಲಕ ನಾವು ವಿದ್ಯಾರ್ಥಿನಿಯರ ಜೀವನ ಸುಧಾರಿಸುತ್ತಿದ್ದೇವೆಯೇ ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿದೆ ಎಂದರು.

ಈ ಹಿನ್ನೆಲೆಯಲ್ಲಿ ಪ್ರಕರಣದ ಮರು ವಿಚಾರಣೆ ನಡೆಸಿ ಅಂತಿಮ ತೀರ್ಪು ಹೊರಬರುವವರೆಗೆ ಹಿಜಾಬ್‌ ಕುರಿತು ಕರ್ನಾಟಕ ಹೈಕೋರ್ಟ್‌ ನೀಡಿರುವ ಆದೇಶ ಜಾರಿಯಲ್ಲಿರಲಿದೆ.

10 ದಿನಗಳ ಕಾಲ ವಾದ–ಪ್ರತಿವಾದ ಆಲಿಸಿದ್ದ ನ್ಯಾಯಮೂರ್ತಿಗಳಾದಹೇಮಂತ್‌ ಗುಪ್ತ ಹಾಗೂ ಸುಧಾಂಶು ಧುಲಿಯಾ ಅವರನ್ನು ಒಳಗೊಂಡ ಪೀಠವು ಸೆಪ್ಟೆಂಬರ್‌ 22ರಂದು ತೀರ್ಪನ್ನು ಕಾಯ್ದಿರಿಸಿತ್ತು. ಗುರುವಾರ ಬೆಳಿಗ್ಗೆ 10.30ಕ್ಕೆ ತೀರ್ಪನ್ನು ಪ್ರಕಟಿಸಿತು.

‘ಸರ್ಕಾರಿ ಕಾಲೇಜುಗಳ ತರಗತಿಗಳಲ್ಲಿ ಹಿಜಾಬ್‌ ಧರಿಸಲು ಅವಕಾಶ ನೀಡುವಂತೆ ನಿರ್ದೇಶಿಸಬೇಕು' ಎಂದು ಕೋರಲಾಗಿದ್ದ ಎಲ್ಲಾ ವೈಯಕ್ತಿಕ ಹಾಗೂ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮಾರ್ಚ್‌ 15ರಂದುಸಾರಾಸಗಟಾಗಿ ತಿರಸ್ಕರಿಸಿದ್ದ ಹೈಕೋರ್ಟ್‌ನ ತ್ರಿಸದಸ್ಯ ಪೀಠ, ‘ಈ ವಿಷಯವನ್ನು ದೇಶದಾದ್ಯಂತ ವಿವಾದದ ವಿಷಯವನ್ನಾಗಿ ಮಾಡಿರುವ ಹಿಂದೆ ಕಾಣದ ಕೈಗಳು ಅಡಗಿವೆ’ ಎಂಬ ಸಂಶಯ ವ್ಯಕ್ತಪಡಿಸಿತ್ತು.

‘ಹಿಜಾಬ್ ಇಸ್ಲಾಂನ ಅತ್ಯಾವಶ್ಯಕ ಧಾರ್ಮಿಕ ಆಚರಣೆ ಎಂಬುದನ್ನು ಸಾಬೀತುಪಡಿಸುವಲ್ಲಿ ಅರ್ಜಿದಾರರು ವಿಫಲವಾಗಿದ್ದಾರೆ. ಅಂತೆಯೇ ಇಸ್ಲಾಂ ಧರ್ಮದ ಅನುಸಾರ ಹಿಜಾಬ್ ಅತ್ಯಾವಶ್ಯಕ ಆಚರಣೆ ಎಂಬ ಉಲ್ಲೇಖಕ್ಕೆ ಕುರಾನಿನಲ್ಲಿ ಯಾವುದೇ ಅಧಿಕೃತ ಆಧಾರವಿಲ್ಲ’ ಎಂದು ನ್ಯಾಯಪೀಠ ಅಭಿಪ್ರಾಯ ವ್ಯಕ್ತಪಡಿಸಿತ್ತು.

ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದ 22 ಅರ್ಜಿದಾರರು, ‘ವಿದ್ಯಾರ್ಥಿಗಳಿಗೆ ಕಡ್ಡಾಯವಾದ ಸಮವಸ್ತ್ರ ರೂಪಿಸಿ ಕರ್ನಾಟಕಸರ್ಕಾರ ಕಾಯ್ದೆ ಅಥವಾ ನಿಯಮ ಜಾರಿಗೊಳಿಸಿಲ್ಲ. ಹಾಗಾಗಿ, ಹಿಜಾಬ್‌ ಧರಿಸುವುದನ್ನು ನಿಷೇಧಿಸಿರುವುದು ಸರಿಯಲ್ಲ. ಹಿಜಾಬ್‌ ಧರಿಸುವುದನ್ನು ಸಂವಿಧಾನದ ಅಡಿ ಖಾತರಿಪಡಿಸಲಾದ ಗೋಪ್ಯತೆ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಆತ್ಮಸಾಕ್ಷಿಯ ಮೂಲಭೂತ ಹಕ್ಕುಗಳ ಅಡಿಯಲ್ಲಿ ರಕ್ಷಿಸಲಾಗಿದೆ. ಆದರೆ, ಅದನ್ನು ಅರಿಯದೇ ಹೈಕೋರ್ಟ್‌ ಪ್ರಮಾದವೆಸಗಿದೆ’ ಎಂದು ಆಕ್ಷೇಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT