ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಜಾಬ್ ತೀರ್ಪು | ಕೊಲೆ ಬೆದರಿಕೆ: ನ್ಯಾಯಮೂರ್ತಿಗಳಿಗೆ 'ವೈ' ಕೆಟಗರಿ ಭದ್ರತೆ–ಸಿಎಂ

Last Updated 20 ಮಾರ್ಚ್ 2022, 18:12 IST
ಅಕ್ಷರ ಗಾತ್ರ

ಬೆಂಗಳೂರು: ‘ಹಿಜಾಬ್‌ ವಿಚಾರವಾಗಿ ತೀರ್ಪು ನೀಡಿರುವ ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಮತ್ತು ಇಬ್ಬರುನ್ಯಾಯಮೂರ್ತಿಗಳಿಗೆ ತಮಿಳುನಾಡಿನಲ್ಲಿ ಕೊಲೆ ಬೆದರಿಕೆ ಹಾಕಿದ ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಈ ನ್ಯಾಯಮೂರ್ತಿಗಳಿಗೆ ಈಗಿರುವ ಭದ್ರತೆಯ ಜೊತೆಗೆ ‘ವೈ’ ಕೆಟಗರಿ ಭದ್ರತೆ ನೀಡಲು ತೀರ್ಮಾನಿಸಲಾಗಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಸುದ್ದಿಗಾರರ ಜೊತೆ ಭಾನುವಾರ ಮಾತನಾಡಿದ ಅವರು, ‘ಈ ರೀತಿಯ ಬೆದರಿಕೆಯ ಮೂಲಕ ಕೆಲವು ದೇಶದ್ರೋಹಿ ಶಕ್ತಿಗಳು ಈ ದೇಶದ ವ್ಯವ್ಯಸ್ಥೆಗೆ ಸವಾಲು ಹಾಕುವ ಪ್ರಯತ್ನ ಮಾಡಿವೆ. ಇಂತಹ ದೇಶದ್ರೋಹಿ ಶಕ್ತಿಗಳನ್ನು ಸಹಿಸುವುದಿಲ್ಲ’ ಎಂದರು.

‘ಕೊಲೆ ಬೆದರಿಕೆ ಬಗ್ಗೆ ತಮಿಳುನಾಡಿನಲ್ಲಿ ಪ್ರಕರಣ ದಾಖಲಾಗಿದೆ. ವಕೀಲರೊಬ್ಬರು ವಿಧಾನಸೌಧದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ಕೂಡಲೇ ತನಿಖೆ ನಡೆಸಲು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಸೂಚಿಸಲಾಗಿದೆ. ತಮಿಳುನಾಡಿನಿಂದ ಆರೋಪಿಗಳನ್ನು ವಶಕ್ಕೆ ಪಡೆದು, ಕಠಿಣ ಕಾನೂನು ಕ್ರಮ ಕೈಗೊಳ್ಳಲು ಈಗಾಗಲೇ ಆದೇಶ ನೀಡಲಾಗಿದೆ’ ಎಂದು ಹೇಳಿದರು.

‘ನ್ಯಾಯಾಲಯದ ತೀರ್ಪನ್ನು ಎಲ್ಲರೂ ಒಪ್ಪಬೇಕಾಗುತ್ತದೆ. ಅರ್ಜಿದಾರರಿಗೆ ತೀರ್ಪು ಸಮಂಜಸ ಎನಿಸದಿದ್ದರೆ ಮೇಲ್ಮನವಿ ಸಲ್ಲಿಸಲು ಎಲ್ಲ ಅವಕಾಶಗಳಿವೆ. ಆದರೂ ವಿಚ್ಛಿದ್ರಕಾರಿ ಶಕ್ತಿಗಳು ಇಂಥ ಹೇಳಿಕೆಗಳನ್ನು ನೀಡುವ ಮೂಲಕ ಜನರನ್ನು ಪ್ರಚೋದಿಸಿ ವ್ಯವಸ್ಥೆಯ ವಿರುದ್ಧ ಎತ್ತಿಕಟ್ಟುತ್ತಿವೆ’ ಎಂದರು.

ಜಾತ್ಯತೀತರು ಮೌನ ಮುರಿಯಬೇಕು: ‘ಈ ಪ್ರಕರಣದ ಬಗ್ಗೆ ಡೋಂಗಿ ಜಾತ್ಯತೀತರು ಮೌನ ವಹಿಸಿದ್ದಾರೆ. ಒಂದು ವರ್ಗದ ಜನರನ್ನು ಈ ರೀತಿ ಓಲೈಸುವುದು ಜಾತ್ಯತೀತತೆ ಅಲ್ಲ, ಕೋಮುವಾದ ಎಂದೆನಿಸುತ್ತದೆ. ಈ ಪ್ರಕರಣದ ಬಗ್ಗೆ ಎಲ್ಲರೂ ಒಗ್ಗಟ್ಟಾಗಿ ಕ್ರಮ ಕೈಗೊಂಡು ಈ ದೇಶದ ನ್ಯಾಯಾಂಗ ವ್ಯವಸ್ಥೆಯನ್ನು ಕಾಯ್ದುಕೊಳ್ಳಬೇಕಿದೆ. ಈ ರೀತಿಯ ಪ್ರಕರಣಗಳು ದೇಶದ ಪ್ರಜಾಪ್ರಭುತ್ವಕ್ಕೆ ಆತಂಕಕಾರಿ’ ಎಂದೂ ಹೇಳಿದರು.

ಸರ್ಕಾರವೇ ವೆಚ್ಚ ಭರಿಸಲಿದೆ: ‘ಪಾವಗಡದಲ್ಲಿ ಶುಕ್ರವಾರ ಸಂಭವಿಸಿದ ಬಸ್‌ ದುರಂತದಲ್ಲಿ ಗಾಯಗೊಂಡವರಿಗೆ ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇದ್ದರೆ ಬೆಂಗಳೂರಿಗೆ ಸ್ಥಳಾಂತರಿಸಲು ತಿಳಿಸಲಾಗಿದೆ. ಗಾಯಾಳುಗಳ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಲಿದೆ’ ಎಂದು ಮುಖ್ಯಮಂತ್ರಿ ತಿಳಿಸಿದರು.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT