ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶದಲ್ಲಿ ‘ಲಾಲ್‌ ಸಿಂಗ್‌ ಚಡ್ಡಾ’ ನಿಷೇಧಕ್ಕೆ ಹಿಂದೂ ಸಂಘಟನೆ ಆಗ್ರಹ

Last Updated 11 ಆಗಸ್ಟ್ 2022, 11:39 IST
ಅಕ್ಷರ ಗಾತ್ರ

ಲಖನೌ: ಬಾಲಿವುಡ್‌ ನಟ ಆಮೀರ್ ಖಾನ್ ಅಭಿನಯದ ‘ಲಾಲ್ ಸಿಂಗ್ ಚಡ್ಡಾ‘ ಚಲನಚಿತ್ರದ ವಿರುದ್ಧ ಹಿಂದೂ ಸಂಘಟನೆಯ ಸದಸ್ಯರು ಗುರುವಾರ ಪ್ರತಿಭಟನೆ ನಡೆಸಿದರು. ಚಿತ್ರದಲ್ಲಿ ಹಿಂದೂ ದೇವತೆಗಳನ್ನು ಆಮೀರ್‌ ಖಾನ್‌ ಗೇಲಿ ಮಾಡಿದ್ದಾರೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಉತ್ತರ ಪ್ರದೇಶದಲ್ಲಿ ಅದನ್ನು ನಿಷೇಧಿಸಬೇಕೆಂದು ಒತ್ತಾಯಿಸಿದರು.

‘ಸನಾತನ ರಕ್ಷಕ ಸೇನೆ’ಯ ಸದಸ್ಯರು ಸಿನಿಮಾದ ವಿರುದ್ಧ ಘೋಷಣೆಗಳನ್ನು ಕೂಗಿದರು. ಭೇಲುಪುರದ ಐಪಿ ವಿಜಯ ಮಾಲ್ ಎದುರು ಪ್ರತಿಭಟನೆ ನಡೆಸಿದರು.

‘ತಮ್ಮ ಚಲನಚಿತ್ರಗಳಲ್ಲಿ ಆಮೀರ್ ಖಾನ್ ಹಿಂದೂ ದೇವತೆಗಳನ್ನು ಗೇಲಿ ಮಾಡುತ್ತಾರೆ ಮತ್ತು ಅವರು ಸನಾತನ ಧರ್ಮಕ್ಕೆ ವಿರುದ್ಧವಾಗಿದ್ದಾರೆ’ ಎಂದು ಸಂಘಟನೆಯ ಯುವ ಘಟಕದ ರಾಜ್ಯಾಧ್ಯಕ್ಷ ಚಂದ್ರಪ್ರಕಾಶ್ ಸಿಂಗ್ ಮತ್ತು ಅದರ ಉಪಾಧ್ಯಕ್ಷ ಅರುಣ್ ಪಾಂಡೆ ಆರೋಪಿಸಿದ್ದಾರೆ.

‘ನಾವೆಲ್ಲರೂ ಸನಾತನಿಗಳು, ನಮ್ಮ ದೇಶದಲ್ಲಿ ಆಮೀರ್‌ ಚಲನಚಿತ್ರಗಳು ಪ್ರದರ್ಶನವಾಗಲು ಬಿಡುವುದಿಲ್ಲ’ ಎಂದು ಅವರು ಹೇಳಿದರು.

‘ಆಮೀರ್ ಖಾನ್ ಅವರ ಚಿತ್ರಗಳನ್ನು ಬಹಿಷ್ಕರಿಸುವಂತೆ ನಾವು ಮನೆ ಮನೆಗೆ ತೆರಳಿ ಜನರನ್ನು ವಿನಂತಿಸುತ್ತೇವೆ. ಚಲನಚಿತ್ರವನ್ನು ನಿಷೇಧಿಸುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಲ್ಲಿಯೂ ವಿನಂತಿಸುತ್ತೇವೆ’ ಎಂದು ಅವರು ಹೇಳಿದರು.

ಆಮೀರ್ ಖಾನ್ ಮತ್ತು ಕರೀನಾ ಕಪೂರ್ ಖಾನ್ ಪ್ರಮುಖ ಭೂಮಿಕೆಯ ‘ಲಾಲ್ ಸಿಂಗ್ ಚಡ್ಡಾ‘ ಸಿನಿಮಾವು, ಹಾಲಿವುಡ್‌ ನಟ ಟಾಮ್ ಹಂಕ್ಸ್‌ ಅವರ 1994ರ ಚಿತ್ರ ‘ಫಾರೆಸ್ಟ್ ಗಂಪ್’ನಿಂದ ಪ್ರೇರಣೆ ಪಡೆದಿದೆ.

‘ಲಾಲ್‌ ಸಿಂಗ್‌ ಚಡ್ಡಾ’ಸಿನಿಮಾ ಘೋಷಣೆಯಾದಾಗಿನಿಂದಲೂ ಆಮೀರ್‌ ಖಾನ್‌ ಅವರ ಸಿನಿಮಾದ ವಿರುದ್ಧ ಹಲವು ಅಭಿಪ್ರಾಯಗಳು ಕೇಳಿಬಂದಿದ್ದವು. ಸಿನಿಮಾವನ್ನು ಬಹಿಷ್ಕರಿಸುವಂತೆ ಬಿಡುಗಡೆಗೂ ಮೊದಲು ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಯಾನ ನಡೆದಿತ್ತು. ಅಭಿಯಾನಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ್ದ ಆಮೀರ್‌ ಖಾನ್‌ ‘ದಯವಿಟ್ಟು ಸಿನಿಮಾ ನೋಡಿ’ ಎಂದು ಪ್ರೇಕ್ಷಕರನ್ನು ವಿನಂತಿಸಿದ್ದರು. ಚಿತ್ರ ಬಿಡುಗಡೆಯ ನಂತರವೂ ಅದರ ಸುತ್ತ ಪರ, ವಿರೋಧದ ಚರ್ಚೆಗಳು ನಡೆಯುತ್ತಲೇ ಇವೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT