ದೇಶಭಕ್ತಿ ಹಿಂದೂಗಳ ಮೂಲ ಗುಣ: ಮೋಹನ್ ಭಾಗವತ್
ನವದೆಹಲಿ: ದೇಶಭಕ್ತಿ ಎನ್ನುವುದು ಹಿಂದೂಗಳ ಮೂಲ ಗುಣ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ‘ವ್ಯಕ್ತಿಯ ದೇಶಪ್ರೇಮವು ಆತನ ಧರ್ಮದಿಂದ ಹುಟ್ಟಿಕೊಳ್ಳುತ್ತದೆ’ ಎಂಬ ಮಹಾತ್ಮ ಗಾಂಧಿ ಅವರ ಮಾತನ್ನು ಉಲ್ಲೇಖಿಸಿ ಭಾಗವತ್ ಈ ಹೇಳಿಕೆ ನೀಡಿದ್ದಾರೆ.
ಜೆ.ಕೆ.ಬಜಾಜ್ ಮತ್ತು ಎಂ.ಡಿ.ಶ್ರೀನಿವಾಸ್ ಅವರು ಬರೆದಿರುವ, ‘ಮೇಕಿಂಗ್ ಎ ಹಿಂದೂ ಪೇಟ್ರಿಯೆಟ್: ಬ್ಯಾಕ್‌ಗ್ರೌಂಡ್ ಆಫ್ ಗಾಂಧೀಜಿಸ್ ಹಿಂದ್ ಸ್ವರಾಜ್’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದ್ದಾರೆ.
ಇದನ್ನೂ ಓದಿ: ಬಿಹಾರ ಸಿಎಂ ನಿತೀಶ್ ಕುಮಾರ್ಗಿಂತಲೂ ಅವರ ಮಗನೇ ಶ್ರೀಮಂತ! ಆಸ್ತಿ ವಿವರ ಬಹಿರಂಗ
ಸಂಘವು ಗಾಂಧಿ ಅವರನ್ನು ತನ್ನವರೆಂದು ಬಿಂಬಿಸಿಕೊಳ್ಳಲು ಯತ್ನಿಸುತ್ತಿದೆ ಎಂಬ ಊಹಾಪೋಹಗಳ ಕುರಿತು ಪ್ರತಿಕ್ರಿಯಿಸಿದ ಅವರು, ಇದು ನಿಜವಲ್ಲ. ಅಂತಹ ಮಹಾನ್ ಚೇತನಗಳನ್ನು ಯಾರೂ ತಮ್ಮವರೆಂದು ಸೀಮಿತಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಗಾಂಧಿ ಅವರ ಕುರಿತಾದ ಸಂಶೋಧನಾ ದಾಖಲೆ ಪುಸ್ತಕದ ಬಗ್ಗೆ ಮಾತನಾಡಿದ ಭಾಗವತ್, ‘ತಮ್ಮ ಪಾಲಿಗೆ ಧರ್ಮ ಮತ್ತು ದೇಶಪ್ರೇಮ ಬೇರೆಯಲ್ಲ. ತಾಯ್ನಾಡಿನ ಮೇಲಿನ ಪ್ರೀತಿ ಅಧ್ಯಾತ್ಮದಿಂದ ಹುಟ್ಟಿಕೊಂಡಿದೆ’ ಎಂಬುದಾಗಿ ಗಾಂಧಿ ಹೇಳಿದ್ದರು ಎಂದಿದ್ದಾರೆ.
‘ನನ್ನ ದೇಶಪ್ರೇಮವು ಧರ್ಮದಿಂದ ಹುಟ್ಟಿಕೊಂಡಿರುವುದು’ ಎಂದು ಗಾಂಧಿ ಹೇಳಿದ್ದರು. ಧರ್ಮ ಎಂದರೆ ಕೇವಲ ‘ರಿಲೀಜನ್’ ಎಂದಷ್ಟೇ ಅರ್ಥವಲ್ಲ. ಆ ಪದಕ್ಕೆ ವಿಶಾಲವಾದ ಅರ್ಥವಿದೆ ಎಂದು ಭಾಗವತ್ ಹೇಳಿದ್ದಾರೆ.
ಇದನ್ನೂ ಓದಿ: ಕಟ್ಟಡ ತೆರವು ತಡೆಗೆ ಕಂಗನಾ ಮಾಡಿದ್ದ ಮನವಿ ತಿರಸ್ಕೃತ: ಕೋರ್ಟ್ ನೀಡಿದ ಕಾರಣವೇನು?
‘ಯಾರಾದರೂ ಹಿಂದೂ ಆಗಿದ್ದರೆ, ಅವರು ದೇಶಭಕ್ತರಾಗಿರಲೇಬೇಕು. ಅದು ಅವರ ಮೂಲ ಗುಣ. ಕೆಲವೊಮ್ಮೆ ನೀವು ಅವನ ಅಥವಾ ಅವಳ ದೇಶಭಕ್ತಿಯನ್ನು ಜಾಗೃತಗೊಳಿಸಬೇಕಾಗಬಹುದು. ಆದರೆ ಹಿಂದೂ ಎಂದಿಗೂ ಭಾರತ ವಿರೋಧಿ ಆಗಲು ಸಾಧ್ಯವಿಲ್ಲ. ಒಬ್ಬನು ತನ್ನ ದೇಶವನ್ನು ಪ್ರೀತಿಸುತ್ತಾನೆ ಎಂದರೆ ಅದು ಕೇವಲ ಭೂಮಿಯನ್ನು ಎಂದಷ್ಟೇ ಅರ್ಥವಲ್ಲ. ಅವನು ಭೂಮಿಯ ಜನ, ನದಿಗಳು, ಸಂಸ್ಕೃತಿ, ಸಂಪ್ರದಾಯ ಎಲ್ಲವನ್ನೂ ಪ್ರೀತಿಸುತ್ತಾನೆಂದು ಅರ್ಥ’ ಎಂದು ಭಾಗವತ್ ಹೇಳಿದ್ದಾರೆ.
ಹಿಂದುತ್ವವು ಏಕತೆಯಲ್ಲಿ ನಂಬಿಕೆ ಇರಿಸಿದೆ ಎಂದೂ ಅವರು ಹೇಳಿದ್ದಾರೆ.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.