ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನ್‍ಸುಖ್‍ ಹಿರೇನ್‍ ಶಂಕಾಸ್ಪದ ಸಾವಿನ ಪ್ರಕರಣ: ವಾಜೆ ಪ್ರಮುಖ ಆರೋಪಿ ಎಂದ ಎಟಿಎಸ್‌

Last Updated 23 ಮಾರ್ಚ್ 2021, 18:55 IST
ಅಕ್ಷರ ಗಾತ್ರ

ಮುಂಬೈ: ಉದ್ಯಮಿ ಮುಕೇಶ್‍ ಅಂಬಾನಿ ನಿವಾಸದ ಬಳಿ ಪತ್ತೆಯಾಗಿದ್ದ, ಸ್ಫೋಟಕಗಳಿದ್ದ ವಾಹನದ ಮಾಲೀಕ ಮನ್‍ಸುಖ್‍ ಹಿರೇನ್‍ ಶಂಕಾಸ್ಪದ ಸಾವಿನ ಪ್ರಕರಣದಲ್ಲಿ ಅಮಾನತುಗೊಂಡಿರುವ ಪೊಲೀಸ್‌ ಅದಿಕಾರಿ ಸಚಿವ್‌ ವಾಜೆ ‘ಪ್ರಮುಖ ಆರೋಪಿ’ ಎಂದು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಮಂಗಳವಾರ ತಿಳಿಸಿದೆ.

ಅಲ್ಲದೆ ವಾಜೆ ಅವರನ್ನು ವಿಚಾರಣೆ ಸಲುವಾಗಿ ವಶಕ್ಕೆ ಪಡೆಯಲು ಮಾರ್ಚ್‌ 25ರಂದು ವಿಶೇಷ ಎನ್‌ಐಎ ನ್ಯಾಯಾಲಯದ ಮೊರೆ ಹೋಗುವುದಾಗಿ ಎಟಿಎಸ್ ಮುಖ್ಯಸ್ಥ ಜೈಜೀತ್ ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಈ ಪ್ರಕರಣದ ಆರೋಪಿಗಳು ಸಿಮ್ ಕಾರ್ಡ್‌ಗಳು, ಮೊಬೈಲ್ ಫೋನ್ ಮತ್ತು ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ನಾಶಪಡಿಸಿದ್ದಾರೆ ಎಂದ ಅವರು, ಈ ಪ್ರಕರಣದಲ್ಲಿ ಇನ್ನಷ್ಟು ಜನರ ಬಂಧನವಾಗುವ ಸಾಧ್ಯತೆ ಇದೆ ಎಂದರು.

ದುಬಾರಿ ಬೆಲೆಯ ಕಾರು ವಶಕ್ಕೆ: ಈ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಎಟಿಎಸ್‌ ದಮನ್‌ನಲ್ಲಿ ದುಬಾರಿ ಬೆಲೆಯ ಕಾರೊಂದನ್ನು ವಶಪಡಿಸಿಕೊಂಡಿದ್ದಾರೆ.

‘ಮಹಾರಾಷ್ಟ್ರದ ನೋಂದಣಿ ಸಂಖ್ಯೆಯಿರುವ ವೊಲ್ವೊ ಕಾರ‌ನ್ನು ವಶಪಡಿಸಿಕೊಳ್ಳಲಾಗಿದೆ. ಇದು ಯಾರ ಒಡೆತನದಲ್ಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಶಂಕಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ರಾತ್ರಿ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ ಎಟಿಎಸ್ ತಂಡ, ನಂತರ ಗುಜರಾತ್ ಮೂಲದ ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಂಡಿದೆ. ಈ ವ್ಯಕ್ತಿ ಬಂಧಿತರಿಗೆ ಸಿಮ್ ಕಾರ್ಡ್ ನೀಡಿದ್ದಾನೆ ಎಂದು ತಿಳಿದುಬಂದಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಬಂಧಿತನಿಂದ ಅನೇಕ ಸಿಮ್ ಕಾರ್ಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

‘ಮಹಾರಾಷ್ಟ್ರ ಸರ್ಕಾರದಿಂದ ಸುಲಿಗೆ’: ಮಹಾರಾಷ್ಟ್ರದ ಮೂರು ಪಕ್ಷಗಳ ಮೈತ್ರಿ ಸರ್ಕಾರವು ಸುಲಿಗೆಯಿಂದ, ಸುಲಿಗೆಗಾಗಿ, ಸುಲಿಗೆಗೋಸ್ಕರ ಇರುವ ಸರ್ಕಾರವಾಗಿದೆ ಎಂದು ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್‌ ದೂರಿದ್ದಾರೆ. ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರಿಗೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕ ಹಕ್ಕಿಲ್ಲ ಎಂದಿದ್ದಾರೆ.

ಮಹಾರಾಷ್ಟ್ರದ ಗೃಹ ಸಚಿವ ಅನಿಲ್‌ ದೇಶಮುಖ್‌ ವಿರುದ್ಧ ಮುಂಬೈ ಮಾಜಿ ಪೊಲೀಸ್‌ ಕಮಿಷನರ್ ಪರಮ್‌ ಬಿರ್‌ ಸಿಂಗ್‌ ಅವರು ಮಾಡಿರುವ ₹100 ಕೋಟಿ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಅವರು ಮಹಾರಾಷ್ಟ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT