ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರಿಗೆ ಬಯಸಿದ್ದನ್ನು ತಿನ್ನಲು ತಡೆಯೊಡ್ಡಬೇಡಿ: ಗುಜರಾತ್‌ ಹೈಕೋರ್ಟ್‌

Last Updated 9 ಡಿಸೆಂಬರ್ 2021, 16:26 IST
ಅಕ್ಷರ ಗಾತ್ರ

ಅಹಮದಾಬಾದ್‌: ‘ಏನು ತಿನ್ನಬೇಕು, ತಿನ್ನಬಾರದು ಎಂಬುದು ಅವರವರ ಇಷ್ಟಕ್ಕೆ ಬಿಟ್ಟಿದ್ದು. ತಾವು ಬಯಸಿದ್ದನ್ನು ತಿನ್ನಲು ಜನರಿಗೆ ತಡೆಯೊಡ್ಡಬೇಡಿ. ಕೆಲವು ಜನರ ಅಹಂ ಸಂತೃಪ್ತಿಗೊಳಿಸಬೇಡಿ’ ಎಂದು ಗುಜರಾತ್‌ ಹೈಕೋರ್ಟ್‌ ಹೇಳಿದೆ.

ಅಹಮದಾಬಾದ್‌ ಸ್ಥಳೀಯ ಆಡಳಿತವು ಮೊಟ್ಟೆ ಮತ್ತು ಮಾಂಸ ಮಾರಾಟ ಮಾಡುತ್ತಿದ್ದ ಬೀದಿಬದಿ ವ್ಯಾಪಾರಿಗಳನ್ನು ಗುರಿಯಾಗಿಸಿ ತೊಂದರೆ ನೀಡುತ್ತಿರುವ ಬಗ್ಗೆ ವ್ಯಾಪಾರಿಗಳು ಕೋರ್ಟ್‌ ಮೊರೆ ಹೋಗಿದ್ದರು.

ಕೆಲವರ ಅಹಂ ಅನ್ನು ತಣಿಸಲು ಅಥವಾ ನಿರ್ದಿಷ್ಟ ಪದಾರ್ಥಗಳ ವಿರುದ್ಧ ಆಡಳಿತಾರೂಢ ಪಕ್ಷಗಳು ನಿರ್ಣಯ ಕೈಗೊಂಡಿವೆ ಎಂಬ ಕಾರಣಕ್ಕೆವ್ಯಾಪಾರಿಗಳಿಗೆ ತೊಂದರೆಯಾಗುವ ಯಾವುದೇ ನಿರ್ಧಾರ ಕೈಗೊಳ್ಳಬಾರದು ಎಂದು ಸ್ಥಳೀಯ ಆಡಳಿತಕ್ಕೆ ಕೋರ್ಟ್‌ ತಾಕೀತು ಮಾಡಿದೆ.

‘ನಿಮ್ಮ ಸಮಸ್ಯೆ ಏನು? ಮಾಂಸಾಹಾರ ನಿಮಗೆ ಇಷ್ಟವಾಗದಿದ್ದರೆ ಅದು ನಿಮ್ಮ ಅನಿಸಿಕೆ. ನಾನು ಹೊರಗೆ ಏನು ತಿನ್ನಬೇಕೆಂಬುದನ್ನು ನೀವು ಹೇಗೆ ನಿರ್ಧರಿಸುವಿರಿ. ಡಯಾಬಿಟಿಸ್‌ ಬರುತ್ತದೆ ಎಂದು ನಾಳೆ ನೀವು ಕಬ್ಬಿನ ಹಾಲು ಕುಡಿಯಬಾರದು ಎಂದು ಹೇಳಬಹುದು ಅಥವಾ ಕಾಫಿ ಆರೋಗ್ಯಕ್ಕೆ ಹಾನಿಕರ ಎನ್ನಬಹುದು ಎಂದು ನ್ಯಾಯಮೂರ್ತಿ ಬಿರೇನ್‌ ವೈಷ್ಣವ್‌ ಅವರು ಹೇಳಿದರು.

‘ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು’ ಎಂದು ರಾಜ್ಯ ಸರ್ಕಾರ ಪ್ರತಿನಿಧಿಸಿದ್ದ ಸಹಾಯಕ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಅವರನ್ನು ಕೇಳಿದರು. ಅಲ್ಲದೆ ಅಹಮದಾಬಾದ್‌ ನಗರಪಾಲಿಕೆಯ ಕಮಿಷನರ್‌ ಅವರು ಕೋರ್ಟ್‌ಗೆ ಹಾಜರಾಗಬೇಕು ಎಂದು ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT