ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವೈದ್ಯರಿಗೆ ‘ಡೋಲೊ– 650’ ಕೊಟ್ಟಿದ್ದು ₹1,000  ಕೋಟಿ ಮೌಲ್ಯದ ಉಡುಗೊರೆ!

ತೆರಿಗೆ ವಂಚನೆ: ಬೆಂಗಳೂರಿನ ಔಷಧ ಕಂಪನಿ ಮೇಲೆ ಐ.ಟಿ ದಾಳಿ; ಸಿಬಿಡಿಟಿ ಹೇಳಿಕೆ
Published : 14 ಜುಲೈ 2022, 14:23 IST
ಫಾಲೋ ಮಾಡಿ
Comments

ನವದೆಹಲಿ: ಬೆಂಗಳೂರು ಮೂಲದ ಡೋಲೊ–650 ಔಷಧ ತಯಾರಿಕಾ ಕಂಪನಿ ತನ್ನ ಉತ್ಪನ್ನಗಳ ಮಾರಾಟಕ್ಕೆ ವಾಮಮಾರ್ಗದಲ್ಲಿ ಪ್ರಚಾರ ಮಾಡುವ ಸಲುವಾಗಿ ವೈದ್ಯರಿಗೆ ಮತ್ತು ವೈದ್ಯಕೀಯ ಕ್ಷೇತ್ರದ ವೃತ್ತಿಪರರಿಗೆ ಸುಮಾರು ₹1,000 ಕೋಟಿ ಮೌಲ್ಯದ ಉಚಿತ ಉಡುಗೊರೆಗಳನ್ನು ನೀಡಿದೆ ಎಂದುನೇರ ತೆರಿಗೆಯ ಕೇಂದ್ರೀಯ ಮಂಡಳಿ (ಸಿಬಿಡಿಟಿ) ತಿಳಿಸಿದೆ.

ಡೋಲೊ– 650 ಔಷಧ ತಯಾರಿಸುವ ಬೆಂಗಳೂರು ಮೂಲದ ಮೈಕ್ರೋ ಲ್ಯಾಬ್ಸ್‌ ಲಿಮಿಟೆಡ್‌ಗೆ ಸಂಬಂಧಪಟ್ಟ 9 ರಾಜ್ಯಗಳ, 36 ಸ್ಥಳಗಳಲ್ಲಿ ಜುಲೈ 6ರಂದು ಐ.ಟಿ ದಾಳಿ ನಡೆದಿತ್ತು. ಕಂಪನಿಯು ಸುಮಾರು ₹300 ಕೋಟಿ ತೆರಿಗೆ ವಂಚಿಸಿರುವುದನ್ನು ಅಂದಾಜಿಸಲಾಗಿದೆ ಸಿಬಿಡಿಟಿಯು ಮಂಗಳವಾರ ಹೇಳಿಕೆ ಬಿಡುಗಡೆ ಮಾಡಿದೆ.

ಐ.ಟಿ ದಾಳಿಯಲ್ಲಿ ₹1.20 ಕೋಟಿ ಅಕ್ರಮ ನಗದು, ಸೂಕ್ತ ದಾಖಲೆಗಳಿಲ್ಲದ ಸುಮಾರು ₹1.40 ಕೋಟಿ ಮೌಲ್ಯದ ಚಿನ್ನ ಮತ್ತು ವಜ್ರದ ಆಭರಣ ವಶಪಡಿಸಿಕೊಳ್ಳಲಾಗಿದೆ. ಅಕ್ರಮಕ್ಕೆ ಸಂಬಂಧಿಸಿದ ಹಲವು ಮಹತ್ವದ ದಾಖಲೆಗಳು, ಡಿಜಿಟಲ್‌ ದತ್ತಾಂಶಗಳು ಪತ್ತೆಯಾಗಿದ್ದು, ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಬಿಡಿಟಿ ತಿಳಿಸಿದೆ.

ಮೈಕ್ರೋ ಲ್ಯಾಬ್ಸ್‌ ಲಿಮಿಟೆಡ್‌ ತನ್ನ ಸಮೂಹದ ಔಷಧ ಮತ್ತು ಉತ್ಪನ್ನಗಳ ಮಾರಾಟ ಮತ್ತು ಪ್ರಚಾರ ಮಾಡಲು ‘ಉತ್ತೇಜನ ಮತ್ತು ಪ್ರಚಾರ’, ‘ವಿಚಾರ ಸಂಕಿರಣ ಮತ್ತು ಉಪನ್ಯಾಸ’ ಹಾಗೂ ‘ವೈದ್ಯಕೀಯ ಸಲಹೆಗಳು’ ಹೆಸರಿನಡಿ ವೈದ್ಯರಿಗೆ, ವೈದ್ಯಕೀಯ ರಂಗದ ವೃತ್ತಿಪರರಿಗೆ ಉಚಿತ ಉಡುಗೊರೆಗಳನ್ನು ನೀಡಿದೆ. ಉಡುಗೊರೆಯ ಮೊತ್ತವೇ ₹1,000 ಕೋಟಿಗೂ ಹೆಚ್ಚು. ಈ ಉಡುಗೊರೆಯಲ್ಲಿ ಪ್ರಯಾಣ ವೆಚ್ಚ, ವಿಶೇಷ ಸವಲತ್ತುಗಳೂ ಸೇರಿವೆ. ತನ್ನ ಉತ್ಪನ್ನಗಳ ಮತ್ತು ಬ್ರ್ಯಾಂಡ್‌ ಪ್ರಚಾರಕ್ಕಾಗಿ ಕಂಪನಿ ಅನೈತಿಕ ಮಾರ್ಗ ಅಳವಡಿಸಿಕೊಂಡಿದೆ’ ಎಂದು ಅದು ಹೇಳಿದೆ.

ಔಷಧ ಉತ್ಪನ್ನಗಳು ಮತ್ತು ಸಕ್ರಿಯ ಔಷಧೀಯ ಪದಾರ್ಥಗಳ (ಎಪಿಐ) ತಯಾರಿಕೆಯ ಮೈಕ್ರೋ ಲ್ಯಾಬ್ಸ್‌ ಲಿಮಿಟೆಡ್‌ ಭಾಗವಾಗಿರುವ ತಯಾರಕರು50ಕ್ಕೂ ಹೆಚ್ಚು ದೇಶಗಳಲ್ಲಿ ಇದ್ದು, ಇವೆಲ್ಲವೂ ತೆರಿಗೆ ವಂಚನೆ ಮತ್ತು ನಿಯಮ ಉಲ್ಲಂಘನೆಯಲ್ಲಿ ತೊಡಗಿವೆ ಎಂದು ಸಿಬಿಡಿಟಿ ಹೇಳಿದೆ.

ಡೋಲೊ– 650 ಮಾತ್ರೆಗಳು, ಡೋಲೊ– 650 ಸಿರಪ್‌ ಜ್ವರ, ನೋವು ನಿವಾರಕವಾಗಿ ಬಳಕೆಯಲ್ಲಿರುವ ಜನಪ್ರಿಯಔಷಧ. ಕೊರೊನಾ ವೈರಸ್ ರೋಗಿಗಳಿಗೆ ನೋವು ಮತ್ತು ಜ್ವರಕ್ಕಾಗಿ ವೈದ್ಯರು ಮತ್ತು ವೈದ್ಯಕೀಯ ಅಂಗಡಿಗಳ ಮಾಲೀಕರೂ ಡೋಲೊ -650 ಮಾತ್ರೆಗಳನ್ನು ವ್ಯಾಪಕವಾಗಿ ಶಿಫಾರಸು ಮಾಡುತ್ತಿದ್ದರು.

ಕಂಪನಿಯ ಸಿಎಂಡಿ ದಿಲೀಪ್‌ ಸುರಾನಾ ಅವರ ಹೇಳಿಕೆ ಉಲ್ಲೇಖಿಸಿ, ಕೋವಿಡ್‌ –19 ಸಾಂಕ್ರಾಮಿಕದ ವೇಳೆ ಕಂಪನಿಯು ಸುಮಾರು 350 ಕೋಟಿ ಡೋಲೊ –650 ಮಾತ್ರೆಗಳನ್ನು ಮಾರಾಟ ಮಾಡಿತ್ತು. ಕೋವಿಡ್‌ ಶುರುವಿನಿಂದ 2020ರ ಅವಧಿವರೆಗೆ ಕೇವಲ ಒಂದು ವರ್ಷದಲ್ಲಿ ₹400 ಕೋಟಿ ಆದಾಯ ಗಳಿಸಿದ್ದಾಗಿ ಸುದ್ದಿ ಲೇಖನವನ್ನು ಕಂಪನಿಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT