ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ 130 ಕೋಟಿ ಜನ ಒಗ್ಗಟ್ಟಾಗಿರುವುದೇ ನಿಜವಾದ ಹಿಂದುತ್ವ: ಅರವಿಂದ್ ಕೇಜ್ರಿವಾಲ್

Last Updated 11 ನವೆಂಬರ್ 2021, 3:02 IST
ಅಕ್ಷರ ಗಾತ್ರ

ನವದೆಹಲಿ: ‘ಭಾರತ ದೇಶದ 130 ಕೋಟಿ ಜನ ಒಗ್ಗಟ್ಟಿನಿಂದ ಇರುವುದೇ ನಿಜವಾದ ಹಿಂದುತ್ವ’ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಖಾಸಗಿ ಸುದ್ದಿವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಅವರು, ತಾವು ಮೃದು ಹಿಂದುತ್ವದತ್ತ ಹೊರಳುತ್ತಿರುವುದನ್ನುತಳ್ಳಿ ಹಾಕಿದ್ದಾರೆ. ‘ಮೃದು ಹಿಂದುತ್ವ ಎಂಬುದು ನನಗೆ ಗೊತ್ತಿಲ್ಲ. ಬೇಕಾಗಿರುವುದು ನಿಜವಾದ ಹಿಂದುತ್ವ. ಈ ದೇಶದ 130 ಕೋಟಿ ಜನ ಒಬ್ಬರಿಗೊಬ್ಬರು ಮಾನವೀಯತೆಯಿಂದ ಬದುಕುವುದೇ ನಿಜವಾದ ಹಿಂದುತ್ವ. ಇದನ್ನೇ ನಮ್ಮ ಪಕ್ಷ ಬೆಂಬಲಿಸುತ್ತದೆ’ಎಂದು ತಿಳಿಸಿದ್ದಾರೆ.

ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್ ಹಾಗೂ ಗೋವಾ ರಾಜ್ಯಗಳ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವುದಾಗಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಘೋಷಿಸಿದೆ. ಈ ಚುನಾವಣೆಗಳಿಗಾಗಿ ಮತದಾರರನ್ನು ಸೆಳೆಯಲುಕೇಜ್ರಿವಾಲ್ ಮೃದು ಹಿಂದುತ್ವದತ್ತ ವಾಲುತ್ತಿದ್ದಾರೆ ಎನ್ನಲಾಗಿದೆ. ಇತ್ತೀಚೆಗಷ್ಟೇ ಅವರು ಅಯೋಧ್ಯೆ ರಾಮಜನ್ಮಭೂಮಿಗೂ ಭೇಟಿ ನೀಡಿದ್ದರು. ಅಲ್ಲದೇ ದೆಹಲಿ ಹಿರಿಯ ನಾಗರಿಕರಿಗೆ ಉಚಿತ ತೀರ್ಥಯಾತ್ರೆಗಾಗಿ ಯೋಜನೆ ಪ್ರಕಟಿಸಿದ್ದರು.

‘ಧರ್ಮದ ಹೆಸರಿನಲ್ಲಿ ಜನರನ್ನು ಬೇರ್ಪಡಿಸುವುದು, ಗಲಭೆಗಳನ್ನು ಹುಟ್ಟುಹಾಕುವುದು, ದಲಿತರ ಮೇಲೆ ಹಲ್ಲೆ ಮಾಡುವುದು ಹಿಂದುತ್ವ ಅಲ್ಲ. ಎಲ್ಲರೂ ಪರಸ್ಪರ ಮಾನವೀಯತೆಯಿಂದ ಬದುಕುವುದೇ ಹಿಂದುತ್ವ’ಎಂದು ಕೇಜ್ರಿವಾಲ್ ಪ್ರತಿಪಾದಿಸಿದ್ದಾರೆ.

‘ಅಯೋಧ್ಯೆಯಲ್ಲಿ ರಾಮನ ದರ್ಶನ ಮಾಡಿದರೆ, ದೀಪಾವಳಿ ಆಚರಿಸಿದರೇ ಅದೇನು ಪಾಪವೇ?‘ ಎಂದು ಪ್ರಶ್ನಿಸಿರುವ ಅವರು, ‘ಇವತ್ತು ದೇಶದಲ್ಲಿ ಹಿಂದುತ್ವದ ಹೆಸರಿನಲ್ಲಿ ನಡೆಯುತ್ತಿರುವುದು ನಿಜವಾದ ಹಿಂದುತ್ವ ಅಲ್ಲ’ಎಂದು ಪರೋಕ್ಷವಾಗಿ ಹೇಳಿದ್ದಾರೆ.

‘ದೇಶದಲ್ಲಿ ಜನ ದೆಹಲಿ ಮಾದರಿ ಸರ್ಕಾರ ಬೇಕು ಎಂಬ ಕನಸು ಕಾಣುತ್ತಿದ್ದಾರೆ. ಈ ನಿಟ್ಟಿನಲ್ಲಿಉತ್ತರಾಖಂಡ, ಪಂಜಾಬ್ ಹಾಗೂ ಗೋವಾ ರಾಜ್ಯಗಳ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲಾಗುತ್ತಿದೆ’ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT