ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ | ಕಚ್ಚಾ ಬಾಂಬ್‌: ಬಳಕೆ ಹೆಚ್ಚಳ

Last Updated 22 ನವೆಂಬರ್ 2022, 19:15 IST
ಅಕ್ಷರ ಗಾತ್ರ

ಇಂಪ್ರೂವೈಸ್ಡ್‌ ಎಕ್ಸ್‌ಪ್ಲೋಸಿವ್‌ ಡಿವೈಸ್‌ (ಐಇಡಿ) ಅಥವಾ ಕಚ್ಚಾ ಬಾಂಬ್‌ಗಳನ್ನು ಭಯೋತ್ಪಾದಕರು, ನಕ್ಸಲರು ಮತ್ತು ದುಷ್ಕರ್ಮಿಗಳು ಬಳಸುವ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಜಗತ್ತಿನ ವಿವಿಧ ಭಾಗಗಳಲ್ಲಿ ಮತ್ತು ಭಾರತದಲ್ಲಿ ಕಚ್ಚಾ ಬಾಂಬ್‌ ಬಳಕೆ ಹೆಚ್ಚಾಗಿದೆ. ಜಗತ್ತಿನಲ್ಲಿ 2021ರಲ್ಲಿ ಕಚ್ಚಾ ಬಾಂಬ್‌ ಸ್ಫೋಟದಿಂದಾಗಿ 19,473 ಮಂದಿ ಮೃತಪಟ್ಟಿದ್ದಾರೆ ಅಥವಾ ಗಾಯಗೊಂಡಿದ್ದಾರೆ. ಅವರಲ್ಲಿ 11,102 ಮಂದಿ ಅಥವಾ ಶೇ 59ರಷ್ಟು ನಾಗರಿಕರು. 2020ರಲ್ಲಿ ಒಟ್ಟು 18,747 ಜನರು ಕಚ್ಚಾ ಬಾಂಬ್‌ ಸ್ಫೋಟದಿಂದ ಮೃತಪಟ್ಟಿದ್ದಾರೆ ಅಥವಾ ಗಾಯಗೊಂಡಿದ್ದಾರೆ. ಆ ವರ್ಷವೂ ಮೃತರು ಮತ್ತು ಗಾಯಗೊಂಡವರಲ್ಲಿ ನಾಗರಿಕರ ಪ್ರಮಾಣವು ಶೇ 59ರಷ್ಟೇ ಇತ್ತು.

ಕಚ್ಚಾ ಬಾಂಬ್‌ ಬಳಸಿ ಸ್ಫೋಟ ನಡೆಸುವುದು ಅತ್ಯಂತ ಹಳೆಯ ವಿಧಾನಗಳಲ್ಲಿ ಒಂದು. ಇಂತಹ ಬಾಂಬ್‌ಗಳ ಬಳಕೆಯು ವಿಶೇಷವಾಗಿ ಬಂಡುಕೋರ ಸಶಸ್ತ್ರ ಗುಂಪುಗಳು ಮತ್ತು ದುಷ್ಕರ್ಮಿಗಳಲ್ಲಿ ಜಗತ್ತಿನಾದ್ಯಂತ ಹೆಚ್ಚುತ್ತಲೇ ಇದೆ ಎಂದು ವಿಶ್ವ ಸಂಸ್ಥೆಯ ನಿಶ್ಶಸ್ತ್ರೀಕರಣ ವ್ಯವಹಾರಗಳ ವಿಭಾಗವು ಹೇಳಿದೆ. ಸಾವು, ನೋವು ಮತ್ತು ನಾಶವನ್ನು ಹೆಚ್ಚಿಸುವುದಕ್ಕಾಗಿ ಜನ ದಟ್ಟಣೆ ಹೆಚ್ಚು ಇರುವ ಸ್ಥಳಗಳಲ್ಲಿಯೇ ಸ್ಫೋಟ ನಡೆಸಲಾಗುತ್ತಿದೆ.

ಬಂದೂಕು ಮತ್ತು ಫಿರಂಗಿಗಳನ್ನು ಬಿಟ್ಟರೆ, ಕಚ್ಚಾ ಬಾಂಬ್‌ ಸ್ಫೋಟದಿಂದಾಗಿಯೇ ಅತಿ ಹೆಚ್ಚು ಜನರು ಸಾಯುತ್ತಿದ್ದಾರೆ. ಜಗತ್ತಿನ ಅರ್ಧಕ್ಕೂ ಹೆಚ್ಚು ಭಾಗವು ಆಗಾಗ ನಾಡ ಬಾಂಬ್‌ ಸ್ಫೋಟಕ್ಕೆ ಒಳಗಾಗುತ್ತಿದೆ ಎಂಬುದು ವಿಶ್ವ ಸಂಸ್ಥೆಯನಿಶ್ಶಸ್ತ್ರೀಕರಣ ವ್ಯವಹಾರಗಳ ವಿಭಾಗದ ಮಾಹಿತಿ.

ಬಳಕೆ ವ್ಯಾಪಕ: ನಾಡ ಬಾಂಬ್‌ ಬಳಸಿ ವಿಧ್ವಂಸಕ ಕೃತ್ಯಗಳು ಹೆಚ್ಚಲು ಕಾರಣ ಇದರ ಸುಲಭ ಬಳಕೆ. ಇಂತಹ ಬಾಂಬ್‌ಗಳನ್ನು ತಯಾರಿಸುವುದು ಮತ್ತು ಬಳಸುವುದು ಬಹಳ ಸರಳ. ಈ ಬಾಂಬ್‌ ತಯಾರಿಸಲು ಬೇಕಾಗುವ ಕಚ್ಚಾ ವಸ್ತುಗಳು ಸುಲಭವಾಗಿ ಲಭ್ಯವಾಗುತ್ತವೆ. ಜೊತೆಗೆ ಇವು ಅತ್ಯಂತ ಅಗ್ಗವೂ ಹೌದು. ಕಚ್ಚಾ ಬಾಂಬ್‌ ಅನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸುವುದು ಸುಲಭ. ಮೊಬೈಲ್‌ ಅಥವಾ ಇತರ ರೀತಿಯ ರಿಮೋಟ್‌ ಬಳಸಿ ಸ್ಫೋಟಿಸಬಹುದು. ಈ ಎಲ್ಲ ಕಾರಣಗಳಿಂದ ಉಗ್ರರು ಮತ್ತು ಇತರ ದುಷ್ಕರ್ಮಿಗಳು ಇಂತಹ ಬಾಂಬ್‌ಗಳನ್ನು ವ್ಯಾಪಕವಾಗಿ ಬಳಸುತ್ತಿದ್ದಾರೆ.

ನಷ್ಟ ತಡೆ ಯತ್ನ: ಕಚ್ಚಾ ಬಾಂಬ್‌ನಿಂದ ಆಗುವ ತೊಂದರೆ ಮತ್ತು ನಷ್ಟವನ್ನು ತಡೆಯುವ ಯತ್ನ ಜಗತ್ತಿನ ವಿವಿಧ ಭಾಗಗಳಲ್ಲಿ ನಡೆಯುತ್ತಿದೆ. ಸರ್ಕಾರ, ಎನ್‌ಜಿಒ, ಖಾಸಗಿ ಸಂಸ್ಥೆಗಳನ್ನು ಇದರಲ್ಲಿ ತೊಡಗಿಸಲಾಗಿದೆ. ಭಾರತದಲ್ಲಿ, ಜಮ್ಮು ಮತ್ತು ಕಾಶ್ಮೀರ ಹಾಗೂ ಈಶಾನ್ಯ ರಾಜ್ಯಗಳು ಕಚ್ಚಾ ಬಾಂಬ್‌ ಸ್ಫೋಟದಿಂದ ಹೆಚ್ಚು ತೊಂದರೆಗೆ ಒಳಗಾದ ಪ್ರದೇಶಗಳು. ಜಮ್ಮು ಮತ್ತು ಕಾಶ್ಮೀರದಲ್ಲಿ ಕಚ್ಚಾ ಬಾಂಬ್‌ ಹಾವಳಿ ತಡೆಗೆ ಸೇನೆಯು ವಿವಿಧ ಕಾರ್ಯತಂತ್ರಗಳನ್ನು ಅನುಸರಿಸುತ್ತಿದೆ. ಬಾಂಬ್‌ ಪತ್ತೆಗೆ ಹೊಸ ಉಪಕರಣಗಳನ್ನು ಖರೀದಿಸಲಾಗಿದೆ. ಸೈನಿಕರು ಮತ್ತು ಬಾಂಬ್‌ ನಿಷ್ಕ್ರಿಯ ದಳಕ್ಕೆ ವಿಶೇಷ ತರಬೇತಿಯನ್ನೂ ನೀಡಲಾಗಿದೆ.

ಕೇಂದ್ರೀಯ ಮೀಸಲು ಪೊಲೀಸ್‌ ಪಡೆಯು (ಸಿಆರ್‌ಪಿಎಫ್‌) ಇನ್‌ಸ್ಟಿಟ್ಯೂಟ್‌ ಆಫ್‌ ಐಇಡಿ ಮ್ಯಾನೇಜ್‌ಮೆಂಟ್‌ ಎಂಬ ಸಂಸ್ಥೆಯನ್ನು ಪುಣೆಯಲ್ಲಿ 2012ರಲ್ಲಿ ಆರಂಭಿಸಿದೆ. ಸಿಆರ್‌ಪಿಎಫ್‌, ರಾಜ್ಯ ಪೊಲೀಸ್‌ ಇಲಾಖೆಗಳು, ಕೇಂದ್ರೀಯ ಸಶಸ್ತ್ರ ಪಡೆಗಳಿಗೆಕಚ್ಚಾ ಬಾಂಬ್‌ ನಿಯಂತ್ರಣದ ವಿಚಾರದಲ್ಲಿ ತರಬೇತಿ ನೀಡುವ ಪ್ರಮುಖ ಸಂಸ್ಥೆ ಇದಾಗಿದೆ.

ಸ್ಫೋಟಕಗಳ ವಶ: ಭಾರಿ ಏರಿಕೆ

ದೇಶದಲ್ಲಿ ಈಚಿನ ವರ್ಷಗಳಲ್ಲಿ ಪೊಲೀಸರು ಮತ್ತು ಇತರ ಭದ್ರತಾ ಸಂಸ್ಥೆಗಳು ವಶಕ್ಕೆ ಪಡೆದುಕೊಂಡ ಸ್ಫೋಟಕ ಮತ್ತು ಸ್ಫೋಟಕ ಸಾಮಗ್ರಿಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಭಯೋತ್ಪಾದಕರು ಮತ್ತು ತೀವ್ರವಾದಿಗಳು ಮಾತ್ರವಲ್ಲ, ಅಪರಾಧ ಹಿನ್ನೆಲೆಯ ವ್ಯಕ್ತಿಗಳೂ ಸ್ಫೋಟಕ ಹಾಗೂ ಸ್ಫೋಟಕ ಸಾಮಗ್ರಿಗಳನ್ನು ಬಳಸುತ್ತಾರೆ ಎನ್ನುತ್ತವೆ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊವಿನ ದತ್ತಾಂಶಗಳು.

2021ರಲ್ಲಿ ದೇಶದಾದ್ಯಂತ 8.78 ಲಕ್ಷದಷ್ಟು ಸ್ಫೋಟಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಇವುಗಳಲ್ಲಿ ಡಿಟೋನೇಟರ್‌ಗಳು ಮತ್ತು ಜಿಲೆಟನ್‌ ಕಡ್ಡಿಗಳ ಪ್ರಮಾಣವೇ ಹೆಚ್ಚು. ಭಯೋತ್ಪಾದಕರೂ ಈ ಸ್ವರೂಪದ ಸ್ಫೋಟಕಗಳನ್ನು ಹೆಚ್ಚು ಬಳಸುತ್ತಾರೆ, ಇತರ ಅಪರಾಧಿಗಳ ನೆಚ್ಚಿನ ಸ್ಫೋಟಕಗಳು ಇವೇ ಆಗಿವೆ ಎಂಬುದು ಗಮನಾರ್ಹ ಅಂಶ. ಇವು ಸಿದ್ಧರೂಪದಲ್ಲೇ ಮಾರುಕಟ್ಟೆಯಲ್ಲಿ ಲಭ್ಯವಿರುವ ಕಾರಣ, ಇವುಗಳನ್ನು ಭಯೋತ್ಪಾದನೆ ಮತ್ತು ಅಪರಾಧ ಕೃತ್ಯಗಳಲ್ಲಿ ಹೆಚ್ಚು ಬಳಸಲಾಗುತ್ತಿದೆ ಎಂದು ವಿಶ್ಲೇಷಿಸಲಾಗಿದೆ.

ಸೇನಾ ಬಳಕೆಗೆ ಸೀಮಿತವಾಗಿರಬೇಕಿದ್ದ ಗ್ರೆನೇಡ್‌ಗಳು ಭಯೋತ್ಪಾದಕರು ಮಾತ್ರವಲ್ಲ, ಇತರ ಅಪರಾಧಿಗಳಿಗೂ ಸುಲಭವಾಗಿ ಸಿಗುತ್ತವೆ ಎಂಬುದನ್ನು ಈ ದತ್ತಾಂಶಗಳು ಹೇಳುತ್ತವೆ. ಇವುಗಳ ಹೊರತಾಗಿ ನಾಡಬಾಂಬ್‌ಗಳು ಮತ್ತು ಕಚ್ಚಾಬಾಂಬ್‌ಗಳ ಬಳಕೆ ಹೆಚ್ಚು. ಅಪರಾಧಿಗಳು ನಾಡಬಾಂಬ್‌ಗಳನ್ನು ಹೆಚ್ಚು ಬಳಸಿದರೆ, ಭಯೋತ್ಪಾದಕರು ಮತ್ತು ತೀವ್ರವಾದಿಗಳು ಕಚ್ಚಾಬಾಂಬ್‌ಗಳನ್ನು ಹೆಚ್ಚು ಬಳಸುತ್ತಾರೆ ಎನ್ನುತ್ತವೆ ಎನ್‌ಸಿಆರ್‌ಬಿ ದತ್ತಾಂಶಗಳು.

ಎನ್‌ಸಿಆರ್‌ಬಿ ವರದಿಗಳಲ್ಲಿ ಕೆಲವು ಸ್ಫೋಟಕಗಳನ್ನು ‘ಇತರೆ ಸ್ಫೋಟಕಗಳು’ ಎಂದು ವರ್ಗೀಕರಿಸಲಾಗಿದೆ. ಇಂತಹದ್ದೇ ಸ್ಫೋಟಕ ಎಂದು ವರ್ಗೀಕರಿಸಲು ಸಾಧ್ಯವಾಗದ ಸ್ಫೋಟಕಗಳನ್ನು ಈ ವರ್ಗದಲ್ಲಿ ಸೇರಿಸಲಾಗಿದೆ. ಇವುಗಳ ಸಂಖ್ಯೆಯೂ ಭಾರಿ ಹೆಚ್ಚು.

ಸುಲಭದ ಮಾದರಿ ಕುಕ್ಕರ್, ಟಿಫನ್ ಬಾಕ್ಸ್

ಕಚ್ಚಾ ಬಾಂಬ್‌ ಬಳಸಿ ಸ್ಫೋಟ ನಡೆಸುವ ಸುಲಭದ ಮಾದರಿಯನ್ನು ಬಂಡುಕೋರರು, ಉಗ್ರರು ಆಯ್ದುಕೊಂಡಿದ್ದಾರೆ. ಸ್ಫೋಟಕಗಳನ್ನು ಇರಿಸಲು ಹಲವು ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಸೈಕಲ್‌ನ ಪೈಪ್‌ನಲ್ಲಿ ಕಚ್ಚಾ ಬಾಂಬ್‌ ಇರಿಸಿ ವಿಧ್ವಂಸಕ ಕೃತ್ಯ ನಡೆಸಿದ ಹಲವು ಉದಾಹರಣೆಗಳಿವೆ. ಟಿಫಿನ್‌ ಬಾಕ್ಸ್‌ನಲ್ಲಿ ಇರಿಸಿಯೂ ಹಲವು ಬಾರಿ ಸ್ಫೋಟ ನಡೆಸಲಾಗಿದೆ. ಹೆಚ್ಚು ಒತ್ತಡ ಉಂಟು ಮಾಡುವ ಉದ್ದೇಶಕ್ಕೆ ಪ್ರೆಷರ್ ಕುಕ್ಕರ್ ಬಳಸಿ ಸ್ಫೋಟ ನಡೆಸುವ ಮಾದರಿಯನ್ನೂ ಆಗಾಗ್ಗೆ ಪ್ರಯೋಗಿಸಲಾಗುತ್ತಿದೆ.

ಇವು ಸುಲಭ ವಿಧಾನಗಳು ಎಂಬ ಕಾರಣಕ್ಕೆ ಹೆಚ್ಚು ಪ್ರಚಲಿತದಲ್ಲಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಜನದಟ್ಟಣೆಯ ಸ್ಥಳಗಳಲ್ಲಿ ಸೈಕಲ್ ಕೊಂಡೊಯ್ದರೆ ಯಾರಿಗೂ ಅನುಮಾನ ಬಾರದು. ಟಿಫನ್ ಬಾಕ್ಸ್ ಹಾಗೂ ಕುಕ್ಕರ್‌ಗಳನ್ನು ಜನರು ಕೈಚೀಲದಲ್ಲಿ ಒಯ್ಯುವುದು ಸರ್ವೇ ಸಾಮಾನ್ಯ. ಹೀಗಾಗಿ, ಅನುಮಾನ ಬಾರದ ಇಂತಹ ವಸ್ತುಗಳನ್ನೇ ಬಳಸಿಕೊಂಡು, ಅವುಗಳಲ್ಲಿ ಕಚ್ಚಾಬಾಂಬ್‌ ಇರಿಸುವ ಮಾದರಿಯನ್ನು ಭಯೋತ್ಪಾದಕರು ಹೆಚ್ಚು ಬಳಸುತ್ತಿದ್ದಾರೆ.

ಸ್ಫೋಟದ ತೀವ್ರತೆಯನ್ನು ಹೆಚ್ಚಿಸುವ ಸಲವಾಗಿ ಟಿಫಿನ್ ಬಾಕ್ಸ್ ಹಾಗೂ ಕುಕ್ಕರ್‌ಗಳಲ್ಲಿ ಸ್ಪೋಟಕ ಸಾಮಗ್ರಿಗಳ ಜೊತೆ ಚೂಪಾದ ಆಯುಧಗಳು, ಮೊಳೆ, ಸ್ಕ್ರೂ, ಬೋಲ್ಟ್ ಅಥವಾ ಗಾಜಿನ ಚೂರುಗಳನ್ನು ಇರಿಸಲಾಗುತ್ತದೆ. ಸ್ಫೋಟದ ತೀವ್ರತೆಗೆ ಈ ವಸ್ತುಗಳು ಹತ್ತಿರದಲ್ಲಿರುವ ಜನರ ಮೇಲೆ ಚಿಮ್ಮುತ್ತವೆ. ಚೂಪಾದ ಕಬ್ಬಿಣದ ವಸ್ತುಗಳು ಹಾಗೂ ಗಾಜಿನ ವಸ್ತುಗಳು ರಭಸವಾಗಿ ಸಿಡಿಯುವುದರಿಂದ ಜನರು ಪ್ರಾಣ ತೆರಬೇಕಾಗುತ್ತದೆ.

ಪ್ರತೀ ವರ್ಷ 26,000 ಜನ ಬಲಿ

ತೀವ್ರವಾದಿಗಳು ಹಾಗೂ ಭಯೋತ್ಪಾದಕರ ಕೃತ್ಯಗಳಿಂದಾಗಿ ಜಗತ್ತಿನಾದ್ಯಂತ ಪ್ರತೀ ವರ್ಷ ಸರಾಸರಿ 26 ಸಾವಿರ ಜನರು ಮೃತಪಟ್ಟಿದ್ದಾರೆ. ವಿಧ್ವಂಸಕ ಕೃತ್ಯಗಳಿಗೆ ಬಲಿಯಾಗುವ ಜನರ ಪ್ರಮಾಣ ವರ್ಷ ಕಳೆದಂತೆ ಏರಿಕೆಯಾಗಿದೆ. 2011ರಲ್ಲಿ 8,200 ಜನರು ವಿವಿಧ ದೇಶಗಳಲ್ಲಿ ಬಲಿಯಾಗಿದ್ದರು. ಇವರ ಸಂಖ್ಯೆ 2014ರ ವೇಳೆ 44 ಸಾವಿರಕ್ಕೆ ಏರಿಕೆಯಾಯಿತು. ಜಗತ್ತಿನಲ್ಲಿ ಆಗುತ್ತಿರುವ ಒಟ್ಟು ಸಾವಿನಲ್ಲಿ ಭಯೋತ್ಪಾದಕ ಕೃತ್ಯಗಳಿಂದ ಆಗುತ್ತಿರುವ ಸಾವುಗಳ ಪ್ರಮಾಣ ಶೇ 0.5ರಷ್ಟಿದೆ.

ವಿಧ್ವಂಸಕ ಕೃತ್ಯಗಳಿಗೆ ಜನರು ಬಲಿಯಾಗುತ್ತಿರುವ ಪ್ರಮಾಣ ಮಧ್ಯಪ್ರಾಚ್ಯ, ಆಫ್ರಿಕಾ ಹಾಗೂ ದಕ್ಷಿಣ ಏಷ್ಯಾದಲ್ಲೇ ಹೆಚ್ಚು. ಈ ಭಾಗದಲ್ಲೇ ಶೇ 95ರಷ್ಟು ಜನರು ಮೃತಪಟ್ಟಿದ್ದಾರೆ. ಒಂದು ಕಾಲದಲ್ಲಿ ಸಾಮಾನ್ಯವಾಗಿದ್ದ ವಿಮಾನಗಳ ಅಪಹರಣದಂತಹ ಭಯೋತ್ಪಾದಕ ಕೃತ್ಯಗಳು ಈಗ ಇಲ್ಲ. ನಕ್ಸಲರು ಅಥವಾ ಬಂಡುಕೋರರು ಭದ್ರತಾ ಪಡೆಗಳ ಜೊತೆ ನೇರ ಸಂಘರ್ಷಕ್ಕೂ ಇಳಿಯುತ್ತಿಲ್ಲ. ಅವರೆಲ್ಲಾ ಕಚ್ಚಾ ಬಾಂಬ್‌ ಮೊರೆ ಹೋಗುತ್ತಿದ್ದಾರೆ. ಭದ್ರತಾಪಡೆಗಳು ಹಾಗೂ ಜನರನ್ನು ಗುರಿಯಾಗಿಸಿ, ಐಇಡಿಗಳನ್ನು ಸ್ಫೋಟಿಸುವ ಮಾದರಿ ಅನುಸರಿಸುತ್ತಿದ್ದಾರೆ.

ಆರ್‌ಡಿಎಕ್ಸ್‌ ಬಳಕೆ ಅಧಿಕ

1993ರ ಮುಂಬೈ ಸರಣಿ ಸ್ಫೋಟ ಪ್ರಕರಣದಿಂದ ಹಿಡಿದು ಇತ್ತೀಚಿನ ಪುಲ್ವಾಮಾ ಭಯೋತ್ಪಾದಕ ದಾಳಿ ಪ್ರಕರಣದವರೆಗೆ ಬಂಡುಕೋರರು ವಿವಿಧ ರೀತಿಯ ಸ್ಫೋಟಕಗಳನ್ನು ತಮ್ಮ ಕೃತ್ಯಗಳಿಗೆ ಬಳಸಿದ್ದಾರೆ. ಆರ್‌ಡಿಎಕ್ಸ್ ರಾಸಾಯನಿಕವನ್ನು ಹೆಚ್ಚಾಗಿ ನೆಚ್ಚಿಕೊಂಡಂತೆ ತೋರುತ್ತದೆ.

ಮುಂಬೈ ಸ್ಫೋಟಕ್ಕೆ ಆರ್‌ಡಿಎಕ್ಸ್ ಬಳಸಲಾಗಿತ್ತು. ಈ ಸರಣಿ ಸ್ಫೋಟದಲ್ಲಿ ಒಟ್ಟು 13 ಬಾಂಬ್‌ಗಳು ಸಿಡಿದಿದ್ದವು. ಪರಿಣಾಮವಾಗಿ 257 ಜನರು ಮೃತಪಟ್ಟಿದ್ದರು. 2003, 2006 ಹಾಗೂ 2008ರಲ್ಲಿ ನಡೆದ ಮುಂಬೈ ಸ್ಫೋಟ, 2008ರ ಜೈಪುರ ಸ್ಫೋಟ, 2005ರ ದೆಹಲಿ ಸ್ಫೋಟ ಹಾಗೂ 2019ರ ಪುಲ್ವಾಮಾ ಸ್ಫೋಟದಲ್ಲಿ ಆರ್‌ಡಿಎಕ್ಸ್ ಬಳಕೆಯಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ.

2006ರ ಮುಂಬೈ ಸ್ಫೋಟದಲ್ಲಿ ಆರ್‌ಡಿಎಕ್ಸ್ ಜತೆ ಅಮೋನಿಯಂ ನೈಟ್ರೇಟ್ ಅನ್ನೂ ಬಳಸಲಾಗಿದೆ. 2008ರಲ್ಲಿ ಅಹಮದಾಬಾದ್‌ನಲ್ಲೂ ಇದೇ ಬಳಕೆಯಾಗಿದೆ. ಜೈಪುರ ಸ್ಫೋಟದಲ್ಲಿ ಆರ್‌ಡಿಎಕ್ಸ್ ಜೊತೆ ದಹನಕಾರಿ ವಸ್ತು ಬಳಕೆಯಾಗಿತ್ತು. 2001ರ ಸಮಝೋತಾ ಸ್ಫೋಟದಲ್ಲೂ ಹೆಚ್ಚು ದಹನಶೀಲ ವಸ್ತು ಬಳಕೆಯಾಗಿರುವುದು ಕಂಡುಬಂದಿತ್ತು. ಕೊಯಮತ್ತೂರು ಸ್ಫೋಟ ಪ್ರಕರಣದಲ್ಲಿ ಜಿಲೆಟಿನ್‌ ಕಡ್ಡಿಗಳನ್ನು ಕಚ್ಚಾಬಾಂಬ್‌ ಜೊತೆ ಇಟ್ಟು ಸ್ಫೋಟಿಸಲಾಗಿತ್ತು ಎಂದು ತನಿಖಾ ಸಂಸ್ಥೆಗಳು ವರದಿ ಮಾಡಿದ್ದವು.

ಆಧಾರ: ವಿಶ್ವಸಂಸ್ಥೆಯ ನಿಶ್ಯಸ್ತ್ರೀಕರಣ ವ್ಯವಹಾರಗಳ ವಿಭಾಗದ ಜಾಲತಾಣ, ಸಿಆರ್‌ಪಿಎಫ್ ಜಾಲತಾಣ, ಎನ್‌ಸಿಆರ್‌ಬಿಯ ‘ಭಾರತದಲ್ಲಿ ಅಪರಾಧಗಳು’ – ವರದಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT