ಮಂಗಳವಾರ, ಸೆಪ್ಟೆಂಬರ್ 21, 2021
26 °C

ಆಲೋಪತಿ ಮೂರ್ಖವಿಜ್ಞಾನ: ರಾಮ್‌ದೇವ್‌ ವಿರುದ್ಧ ₹1 ಸಾವಿರ ಕೋಟಿ ಮಾನನಷ್ಟ ಮೊಕದ್ದಮೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

AFP Photo

ಡೆಹ್ರಾಡೂನ್‌: ಯೋಗಗುರು ಬಾಬಾ ರಾಮ್‌ದೇವ್‌ ಹೇಳಿಕೆ ವಿರುದ್ಧ ಭಾರತೀಯ ವೈದ್ಯಕೀಯ ಸಂಘ(ಐಎಂಎ) ವು ₹ 1,000 ಕೋಟಿ ಮಾನನಷ್ಟ ಮೊಕದ್ದಮೆ ನೋಟಿಸ್‌ ಜಾರಿ ಮಾಡಿದೆ.

ಬಾಬಾರಾಮ್‌ ದೇವ್‌ ಅವರು ವಿಡಿಯೋ ಮೂಲಕ ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸಿ ಸಾಮಾಜಿಕ ತಾಣಗಳಲ್ಲಿ ಪೋಸ್ಟ್‌ ಮಾಡಬೇಕು. 15 ದಿನಗಳ ಒಳಗೆ ಲಿಖಿತ ರೂಪದಲ್ಲಿಯೂ ಅಲೋಪಥಿ ವೈದ್ಯರ ಕ್ಷಮೆ ಕೇಳಬೇಕು ಎಂದು ಐಎಂಎ ಉತ್ತರಖಂಡ ವಿಭಾಗದ ಕಾರ್ಯದರ್ಶಿ ಅಜಯ್‌ ಖನ್ನಾ ಆಗ್ರಹಿಸಿದ್ದಾರೆ.

ನೋಟಿಸ್‌ನಲ್ಲಿ ಏನಿದೆ?
ಆಲೋಪಥಿಯೊಂದು ಮೂರ್ಖ ವಿಜ್ಞಾನ ಎಂಬ ಹೇಳಿಕೆ ವಿರುದ್ಧ 6 ಪುಟಗಳ ನೋಟಿಸ್‌ ಜಾರಿ ಮಾಡಿರುವ ಐಎಂಎ ಪರ ವಕೀಲ ನೀರಜ್‌ ಪಾಂಡೆ ನೋಟಿಸ್‌ ಕುರಿತು ವಿವರಣೆ ನೀಡಿದ್ದಾರೆ.

ರಾಮ್‌ದೇವ್‌ ಹೇಳಿಕೆಯಿಂದ ಆಲೋಪಥಿಯ ಘನತೆ ಮತ್ತು ಗೌರವಕ್ಕೆ ಧಕ್ಕೆಯಾಗಿದೆ. ಐಎಂಎ ಭಾಗವಾದ ಸುಮಾರು 1,000 ಮಂದಿಯ ಗೌರವಕ್ಕೆ ಹಾನಿಯಾಗಿದೆ. ಭಾರತೀಯ ದಂಡ ಸಂಹಿತೆಯ 499 ಸೆಕ್ಷನ್‌ ಪ್ರಕಾರ ಇದನ್ನು 'ಅಪರಾಧ ಕೃತ್ಯ' ಎಂದು ಪರಿಗಣಿಸಿ ನೋಟಿಸ್‌ ಜಾರಿ ಮಾಡಲಾಗಿದೆ. ಲಿಖಿತ ಕ್ಷಮೆಯಾಚನೆಗೆ 15 ದಿನಗಳ ಕಾಲವಕಾಶ ನೀಡಲಾಗಿದೆ. ವಿಡಿಯೋದಲ್ಲಿ ಕ್ಷಮೆಯಾಚಿಸಿ ಈ ಹಿಂದಿನ ಹೇಳಿಕೆಯಿರುವ ವಿಡಿಯೋವನ್ನು ಹಾಕಿರುವ ಎಲ್ಲ ಸಾಮಾಜಿಕ ತಾಣಗಳಲ್ಲೂ ಪ್ರಕಟಿಸಬೇಕು. ತಪ್ಪಿದಲ್ಲಿ ಪ್ರತಿಯೊಬ್ಬ ಐಎಂಎ ಸದಸ್ಯನಿಗೆ ತಲಾ ₹ 50 ಲಕ್ಷದಂತೆ ಒಟ್ಟು ₹ 1,000 ಕೋಟಿ ಪರಿಹಾರ ಕೊಡಬೇಕು ಎಂದು ಒತ್ತಾಯ ಮಾಡಲಾಗಿದೆ.

ಕೋವಿಡ್‌-19ಕ್ಕೆ ಅತ್ಯುತ್ತಮ ಔಷಧಿ ಕೊರೊನಿಲ್‌ ಕಿಟ್‌ ಎಂಬುದು ಜನರ ದಾರಿ ತಪ್ಪಿಸುವ ಜಾಹೀರಾತಾಗಿದೆ. ತಕ್ಷಣ ಈ ಎಲ್ಲ ಜಾಹೀರಾತುಗಳನ್ನು ತೆಗೆಯಬೇಕು. ತಪ್ಪಿದಲ್ಲಿ ಎಫ್‌ಐಆರ್‌ ಮತ್ತು ಕ್ರಿಮಿನಲ್‌ ಕೇಸ್‌ ದಾಖಲಿಸಲಾಗುವುದು ಎಂದು ನೋಟಿಸ್‌ನಲ್ಲಿ ಎಚ್ಚರಿಕೆ ನೀಡಲಾಗಿದೆ.

ಬಾಬಾ ರಾಮ್‌ದೇವ್‌ ವಿವಾದಿತ ಹೇಳಿಕೆ
ಸಂದರ್ಶನವೊಂದರಲ್ಲಿ ಕೋವಿಡ್‌-19ಕ್ಕೆ ಆಲೋಪಥಿ ಔಷಧಿ ತೆಗೆದುಕೊಂಡು ಲಕ್ಷಾಂತರ ಮಂದಿ ಸಾವನ್ನಪ್ಪಿದ್ದಾರೆ ಎಂದು ಬಾಬಾ ರಾಮ್‌ದೇವ್‌ ಆರೋಪಿಸಿದ್ದರು. ಆಲೋಪಥಿ ಒಂದು ಮೂರ್ಖ ವಿಜ್ಞಾನ ಎಂದು ಜರೆದಿದ್ದರು. ಈ ಹೇಳಿಕೆಗೆ ಸಾಮಾಜಿಕ ತಾಣಗಳಲ್ಲಿ ತೀವ್ರ ಪ್ರತಿರೋಧ ವ್ಯಕ್ತವಾಗಿತ್ತು. ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ಕೂಡ ಹೇಳಿಕೆಯನ್ನು ಹಿಂತೆಗೆದುಕೊಳ್ಳುವಂತೆ ರಾಮ್‌ದೇವ್‌ ಅವರಿಗೆ ಸೂಚಿಸಿದ್ದರು.

ಟ್ವಿಟರ್‌ನಲ್ಲಿ ಆಲೋಪಥಿಗೆ ಸವಾಲು
ಇದಾದ ಒಂದು ದಿನದ ಬಳಿಕ ಟ್ವಿಟರ್‌ನಲ್ಲಿ ಐಎಂಎಗೆ ಬಹಿರಂಗ ಪತ್ರವೊಂದನ್ನು ಪೋಸ್ಟ್‌ ಮಾಡಿ 25 ಪ್ರಶ್ನೆಗಳನ್ನು ಕೇಳಿದ್ದರು. ಅದರಲ್ಲಿ ಹೈಪರ್‌ಟೆನ್ಷನ್‌ ಮತ್ತು ಟೈಪ್‌-1 ಮತ್ತು 2 ಮಧುಮೇಹಕ್ಕೆ ಶಾಶ್ವತ ಪರಿಹಾರ ಆಲೋಪಥಿಯಿಂದ ಸಾಧ್ಯವೆ? ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದರು.

ಆಧುನಿಕ ರೋಗಗಳಲ್ಲೊಂದು ಎಂದು ಪರಿಗಣಿಸಲಾದ ಮರೆವು ರೋಗಕ್ಕೆ ಔಷಧದ ಬಗ್ಗೆಯೂ ಪ್ರಶ್ನಿಸಿದ್ದ ರಾಮ್‌ದೇವ್‌, ಆಲೋಪಥಿಯಿಂದ ರಕ್ತದಲ್ಲಿ ಕೆಂಪು ರಕ್ತ ಕಣಗಳನ್ನು ಹೆಚ್ಚಿಸಲು ಸಾಧ್ಯವೆ? ಯೌವನದಲ್ಲೇ ವಯಸ್ಸಾಗದಂತೆ ತಡೆಯಲು ಸಾಧ್ಯವೆ? ಎಂಬ ಪ್ರಶ್ನೆಗಳನ್ನು ಮುಂದಿಟ್ಟಿದ್ದರು.

ಕ್ರಿಶ್ಚಿಯಾನಿಟಿಗೆ ಮತಾಂತರಿಸುವ ಕುತಂತ್ರ
ರಾಮ್‌ದೇವ್‌ ಟ್ವೀಟ್‌ ಬೆನ್ನಲ್ಲೇ ಆಚಾರ್ಯ ಬಾಲಕೃಷ್ಣ ಅವರು ಆಯುರ್ವೇದ, ಯೋಗ ಮತ್ತು ಬಾಬಾ ರಾಮ್‌ದೇವ್‌ ವಿರುದ್ಧ ಆಲೋಪಥಿ ವೈದ್ಯರು ಷಡ್ಯಂತ್ರ ನಡೆಸಿದ್ದಾರೆ. ಇದರಲ್ಲಿ ಐಎಂಎ ಭಾಗಿಯಾಗಿದೆ. ಇದು ರಾಷ್ಟ್ರವನ್ನು ಕ್ರಿಶ್ಚಿಯಾನಿಟಿಗೆ ಮತಾಂತರಗೊಳಿಸುವ ಕುತಂತ್ರ ಎಂದು ಗಂಭೀರವಾಗಿ ಆರೋಪಿಸಿ ಟ್ವೀಟ್‌ ಮಾಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು