ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಔಷಧ, ಐಟಿ ಕ್ಷೇತ್ರಗಳಿಗೆ ಪ್ರೋತ್ಸಾಹ ಯೋಜನೆ

₹22,350 ಕೋಟಿ ನೀಡಲು ಕೇಂದ್ರ ಸಚಿವ ಸಂಪುಟ ಸಭೆ ಒಪ್ಪಿಗೆ
Last Updated 24 ಫೆಬ್ರುವರಿ 2021, 19:06 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಔಷಧ ತಯಾರಿಕೆ ಹಾಗೂ ಮಾಹಿತಿ ತಂತ್ರಜ್ಞಾನ ಹಾರ್ಡ್‌ವೇರ್‌ ತಯಾರಿಕಾ ಕ್ಷೇತ್ರಗಳಿಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರವು ಬುಧವಾರ ₹ 22,350 ಕೋಟಿ ಮೌಲ್ಯದ ಉತ್ಪಾದನೆ ಆಧಾರಿತ ಪ್ರೋತ್ಸಾಹ ಯೋಜನೆಯನ್ನು ಘೋಷಿಸಿದೆ.

ಈ ಕ್ಷೇತ್ರಗಳಲ್ಲಿ ಹೂಡಿಕೆ ಆಕರ್ಷಿಸುವುದು ಮತ್ತು ಉದ್ಯೋಗಾವಕಾಶ ಹೆಚ್ಚಿಸುವ ಗುರಿ ಹೊಂದಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಪ್ರೋತ್ಸಾಹ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ.

‘ಔಷಧ ತಯಾರಿಕಾ ಕ್ಷೇತ್ರಕ್ಕೆ ₹15,000 ಕೋಟಿಯ ಪ್ರೋತ್ಸಾಹ ಯೋಜನೆ ಘೋಷಿಸಲಾಗಿದ್ದು, 2020–21ರಿಂದ 2028–29ರ ಅವಧಿಯಲ್ಲಿ ಇದು ಜಾರಿಯಾಗಲಿದೆ. ದೇಶೀಯ ಔಷಧ ತಯಾರಕರಿಗೆ ಈ ಯೋಜನೆಯಿಂದ ಪ್ರೋತ್ಸಾಹ ಲಭಿಸುವುದಲ್ಲದೆ ಗ್ರಾಹಕರಿಗೆ ಕಡಿಮೆ ದರದಲ್ಲಿ ಔಷಧಗಳನ್ನು ಪೂರೈಸಲು ಸಹಾಯವಾಗಲಿದೆ. ರಫ್ತು ವಿಚಾರದಲ್ಲೂ ಈ ಯೋಜನೆಯು ಸಹಾಯಕವಾಗಲಿದೆ ಎಂದು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್‌ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

‘2022ರಿಂದ 2028ರವರೆಗಿನ ಆರು ವರ್ಷಗಳಲ್ಲಿ ಮಾರಾಟದಲ್ಲಿ ₹2.94 ಲಕ್ಷ ಕೋಟಿ ಹಾಗೂ ರಫ್ತಿನಲ್ಲಿ ₹1.96 ಲಕ್ಷ ಕೋಟಿಯಷ್ಟು ಏರಿಕೆಯನ್ನು ನಿರೀಕ್ಷಿಸಲಾಗಿದೆ. ದೇಶದ ಔಷಧ ಕ್ಷೇತ್ರದಲ್ಲಿ ಸುಮಾರು ₹15,000 ಕೋಟಿ ವಿದೇಶಿ ಬಂಡವಾಳ ಹೂಡಿಕೆಯಾಗುವ ನಿರೀಕ್ಷೆ ಇದೆ. ಈ ಯೋಜನೆಯು 20,000 ನೇರ ಹಾಗೂ ಸುಮಾರು 80,000ದಷ್ಟು ಪರೋಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ ಎಂದೂ ಅವರು ತಿಳಿಸಿದರು.

‘ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ಇನ್ನಷ್ಟು ಅಭಿವೃದ್ಧಿ ಸಾಧಿಸುವ ಶಕ್ತಿ ಭಾರತದ ಔಷಧ ಕ್ಷೇತ್ರಕ್ಕೆ ಇದೆ. ಹೂಡಿಕೆಯನ್ನು ಆಕರ್ಷಿಸಿ ತಯಾರಿಕಾ ಸಾಮರ್ಥ್ಯವನ್ನು ಹೆಚ್ಚಿಸುವುದು, ಆ ಮೂಲಕ ದೇಶದ ಔಷಧ ತಯಾರಿಕಾ ಕ್ಷೇತ್ರವನ್ನು ಜಾಗತಿಕ ನಾಯಕನನ್ನಾಗಿಸುವುದು ಈ ಯೋಜನೆಯ ಉದ್ದೇಶ’ ಎಂದು ಅವರು ಹೇಳಿದರು.

ಕಂಪ್ಯೂಟರ್‌ ತಯಾರಿಕೆಗೆ ಪ್ರೋತ್ಸಾಹ: ಲ್ಯಾಪ್‌ಟಾಪ್‌, ಟ್ಯಾಬ್ಲೆಟ್‌, ಆಲ್ ‌ಇನ್‌ ವನ್‌ ಕಂಪ್ಯೂಟರ್‌ ಹಾಗೂ ಸರ್ವರ್‌ಗಳಂಥ ಹಾರ್ಡ್‌ವೇರ್‌ ತಯಾರಿಕೆಗೆ ಪ್ರೋತ್ಸಾಹ ನೀಡಲು ₹ 7,350 ಕೋಟಿಯ ತಯಾರಿಕೆ ಆಧರಿತ ಪ್ರೋತ್ಸಾಹ ಯೋಜನೆಗೂ ಸಚಿವ ಸಂಪುಟ ಅನುಮೋದನೆ ನೀಡಿದೆ.

‘ಸ್ಥಳೀಯ ಮತ್ತು ಜಾಗತಿಕ ಮಟ್ಟದ ಕಂಪನಿಗಳು ಈ ಯೋಜನೆಯ ಲಾಭ ಪಡೆಯಲಿವೆ. ಹೊಸ ಯೋಜನೆಯಡಿ ಮುಂದಿನ ನಾಲ್ಕು ವರ್ಷಗಳಲ್ಲಿ ₹ 3.26 ಕೋಟಿ ಮೌಲ್ಯದ ತಯಾರಿಕೆ ಹಾಗೂ ₹ 2.45 ಕೋಟಿ ಮೌಲ್ಯದ ರಫ್ತನ್ನು ನಿರೀಕ್ಷಿಸಲಾಗಿದೆ. 1.80 ಲಕ್ಷ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ.

‘ಭಾರತವು ₹29,470 ಕೋಟಿ ಮೌಲ್ಯದ ಲ್ಯಾಪ್‌ಟಾಪ್‌ ಹಾಗೂ ₹2870 ಕೋಟಿ ಮೌಲ್ಯದ ಟ್ಯಾಬ್ಲೆಟ್‌ಗಳನ್ನು ಈಗ ಆಮದು ಮಾಡುತ್ತಿದೆ. ಜಾಗತಿಕ ಮಟ್ಟದಲ್ಲಿ ನಾಲ್ಕೈದು ಕಂಪನಿಗಳೇ ಶೇ 70ರಷ್ಟು ಮಾರುಕಟ್ಟೆ ಪಾಲನ್ನು ತಮ್ಮದಾಗಿಸಿಕೊಂಡಿವೆ. ಈ ಕಂಪನಿಗಳು ಹಾಗೂ ದೇಶೀಯ ಕಂಪನಿಗಳು ಸಹ ಪ್ರೋತ್ಸಾಹ ಯೋಜನೆಯ ಲಾಭ ಪಡೆದುಕೊಳ್ಳಬಹುದು’ ಎಂದು ರವಿಶಂಕರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT