ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ಗಿಂತ ಕಾಯ್ದೆಗಳೇ ಅಪಾಯಕಾರಿ: ಪ್ರತಿಭಟನಾ ನಿರತ ರೈತರ ಪ್ರತಿಪಾದನೆ

ಕೃಷಿ ಕಾಯ್ದೆಗಳ ವಿರುದ್ಧ ರೈತರ ಹೋರಾಟಕ್ಕೆ ಹೆಚ್ಚಿದ ಬೆಂಬಲ l ಬುರಾಡಿಯಲ್ಲಿ ರೈತರ ಆರೋಗ್ಯ ತಪಾಸಣೆ
Last Updated 30 ನವೆಂಬರ್ 2020, 20:26 IST
ಅಕ್ಷರ ಗಾತ್ರ

ನವದೆಹಲಿ: ‘ರೈತರು ನಡೆಸುತ್ತಿರುವ ಪ್ರತಿಭಟನೆಯಿಂದ ಕೋವಿಡ್‌ ವ್ಯಾಪಕವಾಗಿ ಹರಡಲಿದೆ. ಈ ಪ್ರತಿಭಟನೆಯಲ್ಲಿ ಭಾಗವಹಿಸಿರುವವರು ಸೂಪರ್ ಸ್ಪ್ರೆಡರ್‌ ಆಗುವ ಅಪಾಯವಿದೆ’ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು (ಐಸಿಎಂಆರ್) ಹೇಳಿದೆ. ಆದರೆ ‘ಎಷ್ಟೇ ಅಪಾಯವಿದ್ದರೂ ನಾವು ಪ್ರತಿಭಟನೆ ಹಿಂಪಡೆಯುವುದಿಲ್ಲ. ಕೋವಿಡ್‌ಗಿಂತಲೂ ಕೃಷಿ ಸುಧಾರಣಾ ಕಾಯ್ದೆಗಳೇ ಹೆಚ್ಚು ಅಪಾಯಕಾರಿ’ ಎಂದುರೈತರು ಹೇಳಿದ್ದಾರೆ.

‘ಪ್ರತಿಭಟನೆಯ ಸ್ಥಳದಲ್ಲಿ ಅಂತರ ಕಾಯ್ದುಕೊಳ್ಳುತ್ತಿಲ್ಲ. ಯಾರೂ ಮಾಸ್ಕ್ ಧರಿಸಿಲ್ಲ. ಕೋವಿಡ್‌ ನಿಯಂತ್ರಣ ಮಾರ್ಗಸೂಚಿಗಳನ್ನು ಯಾರೂ ಪಾಲಿಸುತ್ತಿಲ್ಲ. ಇದರಿಂದ ಕೋವಿಡ್‌ ಕ್ಷಿಪ್ರವಾಗಿ ಹರಡಲಿದೆ. ರೈತರು ತಮ್ಮ ಸ್ಥಳಗಳಿಗೆ ಹಿಂತಿರುಗಿದ ನಂತರ, ಅವರಿಂದ ಮತ್ತಷ್ಟು ಜನರಿಗೆ ಕೋವಿಡ್‌ ಹರಡುವ ಅಪಾಯವಿದೆ’ ಎಂದು ಐಸಿಎಂಆರ್ ಕಳವಳ ವ್ಯಕ್ತಪಡಿಸಿದೆ. ಬಿಜೆಪಿ ಸಹ, ಈ ಪ್ರತಿಭಟನೆಯಿಂದ ಕೋವಿಡ್ ವ್ಯಾಪಕವಾಗಿ ಹರಡಲಿದೆ ಎಂದು ಹೇಳಿದೆ.

‘ಕೋವಿಡ್‌ ಹರಡುವುದನ್ನು ನಾವು ತಡೆಯಬಹುದು. ಅಗತ್ಯ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡರೆ ಕೋವಿಡ್ನಿಂದ ರಕ್ಷಣೆ ಪಡೆಯಬಹುದು. ಆದರೆ ಈಗ ಈ ಕಾಯ್ದೆಗಳ ವಿರುದ್ಧ ಹೋರಾಟ ನಡೆಸದೇ ಇದ್ದರೆ, ಮುಂದೆ ನಾವೆಲ್ಲರೂ ಸಾಯಬೇಕಾಗುತ್ತದೆ. ಹೀಗಾಗಿ ನಾವು ಈ ಹೋರಾಟ ಕೈಬಿಡುವುದಿಲ್ಲ’ ಎಂದು ಪ್ರತಿಭಟನಾ ನಿರತ ರೈತ ನಾಯಕ ಗುರ್ಮೀತ್ ಸಿಂಗ್ ಹೇಳಿದ್ದಾರೆ.

ಬುರಾಡಿಯಲ್ಲಿ ತಪಾಸಣೆ:ದೆಹಲಿ ಹೊರವಲಯದ ಬುರಾಡಿ ಮೈದಾನದಲ್ಲಿ ದೆಹಲಿಯ ವೈದ್ಯಕೀಯ ಸಿಬ್ಬಂದಿ ಭಾನು
ವಾರದಿಂದಲೇ ರೈತರ ಕೋವಿಡ್ ತಪಾಸಣೆ ಆರಂಭಿಸಿದ್ದಾರೆ. ಇದಕ್ಕಾಗಿ ಮೂರು ತಂಡಗಳಲ್ಲಿ ವೈದ್ಯಕೀಯ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಮೂರು ಪಾಳಿಗಳಲ್ಲಿ ಮೂರು ತಂಡವು ತಪಾಸಣೆ ನಡೆಸುತ್ತಿದೆ.

‘ಈವರೆಗೆ 90 ರೈತರನ್ನು ಕೋವಿಡ್ ತಪಾಸಣೆಗೆ ಒಳಪಡಿಸಲಾಗಿದೆ.ಯಾರೊಬ್ಬರಲ್ಲೂ ಸೋಂಕು ಪತ್ತೆಯಾಗಿಲ್ಲ. ಇಲ್ಲಿ ಇರುವ ಎಲ್ಲಾ ರೈತರನ್ನೂ ತಪಾಸಣೆಗೆ ಒಳಪಡಿಸಲಾಗುತ್ತದೆ’ ಎಂದು ವೈದ್ಯಕೀಯ ಸಿಬ್ಬಂದಿ ಹೇಳಿದ್ದಾರೆ.

ಕಾಂಗ್ರೆಸ್‌ನಿಂದ ಅಭಿಯಾನ:ಪ್ರತಿಭಟನಾ ನಿರತ ರೈತರಿಗೆ ಬೆಂಬಲ ನೀಡಿ ಕಾಂಗ್ರೆಸ್‌ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭಿಸಿದೆ. ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಅಗತ್ಯ ನೆರವು ನೀಡಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ರೈತರಿಗೆ ನೆರವು, ಅಗತ್ಯ ವಸ್ತುಗಳನ್ನು ಒದಗಿಸಿ ಎಂದು ಎಎಪಿ ಸಹ ತನ್ನ ಕಾರ್ಯಕರ್ತರಿಗೆ ಸೂಚನೆ ನೀಡಿದೆ.

ಹರಿಯಾಣದ 30ಕ್ಕೂ ಹೆಚ್ಚು ಜಾತಿ ಸಮಿತಿಗಳು (ಖಾಪ್‌) ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿವೆ. ಎಲ್ಲಾ ಜಾತಿ ಸಮಿತಿಗಳು ಹರಿಯಾಣದಿಂದ ಕಾಲ್ನಡಿಗೆ ಮೆರವಣಿಗೆ ಆರಂಭಿಸಿವೆ. ರೈತರ ಹೋರಾಟ ಮುಗಿಯುವವರೆಗೂ ಅವರ ಜತೆಯಲ್ಲಿ ಇರುತ್ತೇವೆ ಎಂದು ಜಾತಿ ಸಮಿತಿಗಳ ಒಕ್ಕೂಟವು ಹೇಳಿದೆ.

‘ಖಲಿಸ್ತಾನಿಗಳು, ನಕ್ಸಲರು’

ಬಿಜೆಪಿ ಐಟಿ ಘಟಕದ ಮುಖ್ಯಸ್ಥ ಅಮಿತ್ ಮಾಳವೀಯ ಅವರು ಪ್ರತಿಭಟನಾ ನಿರತ ರೈತರನ್ನು ಖಲಿಸ್ತಾನ ಉಗ್ರರು ಮತ್ತು ನಕ್ಸಲರು ಎಂದು ಕರೆದಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಟೀಕಿಸುವಾಗ, ಮಾಳವೀಯ ಅವರು ರೈತರನ್ನು ಹೀಗೆ ಕರೆದಿದ್ದಾರೆ.

‘ದೆಹಲಿ ಸರ್ಕಾರವು ನವೆಂಬರ್ 23ರಂದೇ ಕೃಷಿ ಸುಧಾರಣಾ ಕಾಯ್ದೆಗಳನ್ನು ಜಾರಿಗೆ ತಂದಿದೆ. ಆದರೆ ಈಗ ಖಲಿಸ್ತಾನಿಗಳು ಮತ್ತು ನಕ್ಸಲರು ಈ ಕಾಯ್ದೆಗಳನ್ನು ವಿರೋಧಿಸುತ್ತಿದ್ದಾರೆ. ದೆಹಲಿಯನ್ನು ಸುಟ್ಟುಹಾಕಬಹುದಾದ ಒಂದು ಕಾರಣ ಅರವಿಂದ ಕೇಜ್ರಿವಾಲ್ ಅವರಿಗೆ ಕಾಣಿಸಿದೆ. ಇದು ರೈತರ ಪರವಾದ ನಿಲುವಲ್ಲ. ಬರೀ ರಾಜಕೀಯ’ ಎಂದು ಅಮಿತ್ ಮಾಳವೀಯ ಟ್ವೀಟ್ ಮಾಡಿದ್ದಾರೆ.

ಎಎಪಿ ಇದಕ್ಕೆ ಪ್ರತಿಕ್ರಿಯೆ ನೀಡಿದೆ. ‘ರೈತರು ತಮ್ಮ ಉತ್ಪನ್ನಗಳನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು ಎಂದಷ್ಟೇ ನವೆಂಬರ್ 23ರ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಮಂಡಿ ವ್ಯವಸ್ಥೆಯನ್ನು ನಮ್ಮ ಸರ್ಕಾರ ರದ್ದುಪಡಿಸಿಲ್ಲ. ಹಣ್ಣು ಮತ್ತು ತರಕಾರಿಗಳನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದಾದ ವ್ಯವಸ್ಥೆ ದೆಹಲಿಯಲ್ಲಿ ಬಹಳ ವರ್ಷಗಳಿಂದ ಇದೆ. ಈಗ ಅದನ್ನು ದವಸ-ಧಾನ್ಯಗಳಿಗೂ ವಿಸ್ತರಿಸಲಾಗಿದೆ. ಅದು ಮಂಡಿ ಆಗಿರಲಿ ಅಥವಾ ಮುಕ್ತ ಮಾರುಕಟ್ಟೆ ಆಗಿರಲಿ, ಕನಿಷ್ಠ ಬೆಂಬಲ ಬೆಲೆ ಇರಬೇಕು ಎಂದು ರೈತರು ಒತ್ತಾಯಿಸುತ್ತಿದ್ದಾರೆ. ರೈತರ ಒತ್ತಾಯವನ್ನು ನಾವು ಬೆಂಬಲಿಸುತ್ತೇವೆ’ ಎಂದು ಎಎಪಿ ಹೇಳಿಕೆ ಬಿಡುಗಡೆ ಮಾಡಿದೆ.

‘ರೈತರ ಪರವಾಗಿ ನಿಲ್ಲುವುದು ರಾಜಕೀಯ ಎನ್ನುವುದಾದರೆ, ರಾಜಕೀಯ ಮಾಡಿದ ಅಪವಾದವನ್ನು ಹೊರಲು ನಾವು ಸಿದ್ಧರಿದ್ದೇವೆ’ ಎಂದು ಎಎಪಿ ಮುಖಂಡ ರಾಘವ್ ಚಡ್ಡಾ ಹೇಳಿದ್ದಾರೆ.

ರೈತ ಸಾವು

ಸಿಂಘು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಪಂಜಾಬ್‌ನ ಲೂಧಿಯಾನದವರಾದ ಗಜ್ಜನ್ ಸಿಂಗ್ ಎಂಬುವವರು ಹೃದಯಾಘಾತದಿಂದಭಾನುವಾರ ತಡರಾತ್ರಿ ಮೃತಪಟ್ಟಿದ್ದಾರೆ. ಇದರಿಂದ ಪ್ರತಿಭಟನೆಯಲ್ಲಿ ಮೃತಪಟ್ಟವರ ಸಂಖ್ಯೆ ಎರಡಕ್ಕೆ ಏರಿದೆ. ಬುರಾಡಿ ಮೈದಾನದಲ್ಲಿ ಶನಿವಾರ ರೈತರ ಟ್ರ್ಯಾಕ್ಟರ್‌ ರಿಪೇರಿಗೆ ಬಂದಿದ್ದ ಮೆಕ್ಯಾನಿಕ್ ಒಬ್ಬರು ಬೆಂಕಿ ಅವಘಡದಲ್ಲಿ ಮೃತಪಟ್ಟದ್ದರು.

***

ಈ ಕಾಯ್ದೆಗಳಿಂದ ಅಪಾಯವಿಲ್ಲ ಎಂದು ಪ್ರಧಾನಿ ಹೇಳುತ್ತಿದ್ದಾರೆ. ಯಾವ ಅಪಾಯವೂ ಇಲ್ಲ ಎನ್ನುವುದಾದರೆ ಲಕ್ಷಾಂತರ ರೈತರು ಪ್ರತಿಭಟನೆ ನಡೆಸುತ್ತಿರುವುದು ಏಕೆ?

-ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT