ಗುರುವಾರ , ನವೆಂಬರ್ 26, 2020
22 °C
ಪ್ರತಿ ನಿತ್ಯ 10 ಲಕ್ಷ ಮಾದರಿಗಳ ಪರೀಕ್ಷೆ, ’5ಟಿ’ ತಂತ್ರಜ್ಞಾನ ಪರಿಣಾಮಕಾರಿ ಅನುಷ್ಠಾನ

ದೇಶದಾದ್ಯಂತ 10 ಕೋಟಿ ದಾಟಿದ ಕೊರೊನಾ ಸೋಂಕು ಪತ್ತೆ ಪರೀಕ್ಷೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ‌: ಭಾರತದಲ್ಲಿ ಕೊರೊನಾ ಸೋಂಕು ಪತ್ತೆ ಪರೀಕ್ಷೆ ಸಂಖ್ಯೆ 10 ಕೋಟಿ ದಾಟಿದ್ದು, ಹದಿನೇಳು ದಿನಗಳಿಂದ ಪ್ರತಿ ನಿತ್ಯ 10 ಲಕ್ಷಕ್ಕೂ ಹೆಚ್ಚು ಮಾದರಿಗಳನ್ನು ಪರೀಕ್ಷೆಗೊಳಪಡಿಸಲಾಗುತ್ತಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ತಿಳಿಸಿದೆ.

ಇಲ್ಲಿವರೆಗೆ 10 ಲಕ್ಷ ಜನಸಂಖ್ಯೆಗೆ 74 ಸಾವಿರ ಮಂದಿಯಂತೆ ಪರೀಕ್ಷೆ ಮಾಡಲಾಗಿದೆ. ಹೀಗೆ ಕೇವಲ 45 ದಿನಗಳಲ್ಲಿ 5 ಕೋಟಿ ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ಐಸಿಎಂಆರ್‌ ವಿಜ್ಞಾನಿ ಮತ್ತು ಮಾಧ್ಯಮ ಸಮನ್ವಯಕಾರ ಲೋಕೇಶ್ ಶರ್ಮಾ ತಿಳಿಸಿದ್ದಾರೆ.

’ಸೆ.8ರ ವೇಳೆಗೆ ಭಾರತದಲ್ಲಿ 5 ಕೋಟಿ ಜನರನ್ನು ಪರೀಕ್ಷಿಸಲಾಗಿತ್ತು. ಅ. 22ರ ಹೊತ್ತಿಗೆ, ಅಂದರೆ 50 ದಿನಗಳಲ್ಲಿ ಈ ಸಂಖ್ಯೆ 10 ಕೋಟಿ ತಲುಪಿದೆ’ ಎಂದು ಶರ್ಮಾ ಹೇಳಿದರು.

’ದೇಶದಾದ್ಯಂತ ಪರೀಕ್ಷೆಗೆ ಬೇಕಾದ ಮೂಲಸೌಕರ್ಯ ಮತ್ತು ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ ಕೊರೊನಾ ಸೋಂಕು ಪತ್ತೆ ಪರೀಕ್ಷೆಯನ್ನು ತೀವ್ರಗೊಳಿಸಲಾಗಿದೆ. ತಂತ್ರಜ್ಞಾನ ಸದುಪಯೋಗಪಡಿಸಿಕೊಂಡು, ರೋಗ ಪತ್ತೆ ಮಾಡುವ ಕಿಟ್‌ಗಳನ್ನು ತಯಾರಿಸುವ ಸಂಶೋಧನೆಗಳಿಗೂ ಐಸಿಎಂಆರ್‌ ಪ್ರೋತ್ಸಾಹ ನೀಡುತ್ತಿದೆ’ ಎಂದು ವಿಜ್ಞಾನಿ ತಿಳಿಸಿದರು.

‌ಐಸಿಎಂಆರ್ ಪ್ರಧಾನ ನಿರ್ದೆಶಕ ಬಲರಾಮ್ ಭಾರ್ಗವ್, ’ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶದ ಸರ್ಕಾರಗಳ ಸಹಯೋಗದೊಂದಿಗೆ ವಿಶೇಷ ಪ್ರಯತ್ನಗಳ ಮೂಲಕ ಕೋವಿಡ್ 19 ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಪ್ರಯತ್ನಿಸುತ್ತಿದ್ದೇವೆ’ ಎಂದರು.

’ಪರೀಕ್ಷೆಯ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸುತ್ತಿರುವುದರಿಂದ ತ್ವರಿತವಾಗಿ ಕೋವಿಡ್‌ ಪೀಡಿತರನ್ನು ಪತ್ತೆ ಮಾಡಿ, ಸೋಂಕು ದೃಢಪಟ್ಟವರನ್ನು ಪ್ರತ್ಯೇಕವಾಗಿರಿಸಿ ಮತ್ತು ಪರಿಣಾಮಕಾರಿಯಾಗಿ ಚಿಕಿತ್ಸೆನೀಡಲು ಸಾಧ್ಯವಾಗುತ್ತಿದೆ. ಇದರಿಂದ ಸಾವಿನ ಪ್ರಮಾಣವನ್ನು ತಗ್ಗಿಸಲು ಸಾಧ್ಯವಾಗುತ್ತಿದೆ’ ಎಂದು ಬಲರಾಮ್ ಹೇಳಿದರು.

’ಈ ಪರೀಕ್ಷಾ ವಿಧಾನದಿಂದಾಗಿ ಭಾರತ ಕೋವಿಡ್‌ 19 ನಿಯಂತ್ರಣಕ್ಕೆ 5 ಟಿ ವಿಧಾನದ ತಂತ್ರವನ್ನು (ಟೆಸ್ಟ್, ಟ್ರ್ಯಾಕ್, ಟ್ರೇಸ್, ಟ್ರೀಟ್) ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಈ ಮೂಲಕ  ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೂ ಸಹಾಯವಾಗುತ್ತಿದೆ’ ಎಂದು ಅವರು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು