ಗುರುವಾರ , ಮಾರ್ಚ್ 30, 2023
23 °C

ಶ್ರೀನಗರ–ಶಾರ್ಜಾ ವಿಮಾನಕ್ಕೆ ಪಾಕಿಸ್ತಾನ ವಾಯುಪ್ರದೇಶ ಬಳಸಲು ಅನುಮತಿ ಕೋರಿದ ಭಾರತ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಶ್ರೀನಗರ-ಶಾರ್ಜಾ ವಿಮಾನಕ್ಕೆ ಪಾಕಿಸ್ತಾನದ ವಾಯುಪ್ರದೇಶ ಬಳಸಲು ಅನುಮತಿ ನೀಡುವಂತೆ ಭಾರತವು ರಾಜತಾಂತ್ರಿಕ ಮಾರ್ಗಗಳ ಮೂಲಕ ಪಾಕಿಸ್ತಾನಕ್ಕೆ ಮನವಿ ಮಾಡಿದೆ ಎಂದು ಸರ್ಕಾರಿ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ಶ್ರೀನಗರ– ಶಾರ್ಜಾ ನಡುವಿನ ಮಾರ್ಗದ ಸಾಮಾನ್ಯ ಪ್ರಯಾಣಿಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಭಾರತ ಸರ್ಕಾರ ಮನವಿ ಮಾಡಿದೆ.

‘ಗೋ ಫರ್ಸ್ಟ್‌’ ವಿಮಾನಯಾನ ಸಂಸ್ಥೆಯ ಶ್ರೀನಗರ-ಶಾರ್ಜಾ ನಡುವಿನ ವಿಮಾನವು ತನ್ನ ವಾಯುಪ್ರದೇಶವನ್ನು ಬಳಸಲು ಪಾಕಿಸ್ತಾನವು ಮಂಗಳವಾರ ಅನುಮತಿ ನಿರಾಕರಿಸಿರುವ ಹಿನ್ನೆಲೆಯಲ್ಲಿ ಭಾರತ ಈ ಹೆಜ್ಜೆ ಇಟ್ಟಿದೆ. ‘ಯುನೈಟೆಡ್‌ ಅರಬ್‌ ಎಮಿರೆಟ್ಸ್‌’ನಲ್ಲಿನ ಗಮ್ಯ ತಲುಪಲು ಗುಜರಾತ್‌ ಮೂಲಕ ಬಳಸು ಮಾರ್ಗವನ್ನು ಆಶ್ರಯಿಸುವಂತೆ ಪಾಕಿಸ್ತಾನವು ‘ಗೋ ಫಸ್ಟ್‌’ ವಿಮಾನಕ್ಕೆ ಮಂಗಳವಾರ ಸೂಚಿಸಿತ್ತು.

ಗೋ ಏರ್ ಎಂದು ಕರೆಯಲಾಗುತ್ತಿದ್ದ ‘ಗೋ ಫರ್ಸ್ಟ್’ ವಿಮಾನಯಾನ ಸಂಸ್ಥೆಯು ಅಕ್ಟೋಬರ್ 23 ರಿಂದ ಶ್ರೀನಗರ ಮತ್ತು ಶಾರ್ಜಾ ನಡುವೆ ನೇರ ವಿಮಾನಯಾನವನ್ನು ಪ್ರಾರಂಭಿಸಿದೆ. ಕಳೆದ ತಿಂಗಳು ಕಣಿವೆ ರಾಜ್ಯ ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ಸೇವೆಯನ್ನು ಉದ್ಘಾಟಿಸಿದ್ದರು.

ಅಧಿಕಾರಿಗಳ ಮಾಹಿತಿ ಪ್ರಕಾರ, ಅಕ್ಟೋಬರ್ 31 ರವರೆಗೆ ಗೋ ಫರ್ಸ್ಟ್‌ ಸಂಸ್ಥೆಯ ಶ್ರೀನಗರ-ಶಾರ್ಜಾ-ಶ್ರೀನಗರ ಸೇವೆಗೆ ಪಾಕಿಸ್ತಾನದ ವಾಯುಪ್ರದೇಶವನ್ನು ಬಳಸಲಾಗುತ್ತಿತ್ತು ಎನ್ನಲಾಗಿದೆ.

ಆದರೆ, ಪಾಕಿಸ್ತಾನವು ತನ್ನ ವಾಯುಮಾರ್ಗ ಬಳಕೆಗೆ ಮಂಗಳವಾರದಿಂದ ಅನುಮತಿ ನಿರಾಕರಿಸುತ್ತಿದೆ. ಹೀಗಾಗಿ ಗುಜರಾತ್‌ ಮೂಲಕ ಶಾರ್ಜಾಕ್ಕೆ ಬಳಸು ಮಾರ್ಗದಲ್ಲಿ ಹೋಗಬೇಕಾಗಿದೆ. ಹೀಗಾಗಿ ವಿಮಾನ ಪ್ರಯಾಣವು 40 ನಿಮಿಷ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ.

ದೀರ್ಘ ಮಾರ್ಗದ ಬಳಕೆಯಿಂದ ಹೆಚ್ಚಿನ ಇಂಧನ ಬಳಕೆಯಾಗುವ ಹಿನ್ನೆಲೆಯಲ್ಲಿ ವಿಮಾನಯಾನ ಸಂಸ್ಥೆ ಟಿಕೆಟ್ ದರ ಹೆಚ್ಚಿಸಬೇಕಾದ ಅನಿವಾರ್ಯತೆಗೆ ಸಿಲುಕುತ್ತದೆ. ಅಲ್ಲದೆ, ತಡೆರಹಿತ ಸೇವೆಯಲ್ಲೂ ವ್ಯತ್ಯಯ ಉಂಟಾಗಬಹುದು.

ಆದ್ದರಿಂದ, ಈ ಮಾರ್ಗದ ಪ್ರಯಾಣಿಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ‘ಗೋ ಫರ್ಸ್ಟ್‌’ ವಿಮಾನಕ್ಕೆ ಅನುಮತಿ ನೀಡುವಂತೆ ಭಾರತವು ರಾಜತಾಂತ್ರಿಕ ಮಾರ್ಗಗಳ ಮೂಲಕ ಪಾಕಿಸ್ತಾನಕ್ಕೆ ಮನವಿ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಮಾನಕ್ಕೆ ಅನುಮತಿ ನಿರಾಕರಿಸಿದ್ದಕ್ಕೆ ಪಾಕಿಸ್ತಾನ ಸರ್ಕಾರ ಇನ್ನೂ ಯಾವುದೇ ನಿರ್ದಿಷ್ಟ ಕಾರಣವನ್ನು ನೀಡಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು