ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಿಟನ್‌ ರಾಣಿ 2ನೇ ಎಲಿಜಬೆತ್‌ ನಿಧನ: ಸೆ.11ರಂದು ಭಾರತದಾದ್ಯಂತ ಶೋಕಾಚರಣೆ

Last Updated 9 ಸೆಪ್ಟೆಂಬರ್ 2022, 16:46 IST
ಅಕ್ಷರ ಗಾತ್ರ

ನವದೆಹಲಿ: ಬ್ರಿಟನ್‌ನ ರಾಣಿ 2ನೇ ಎಲಿಜಬೆತ್ ನಿಧನದ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿಶ್ವದಾದ್ಯಂತ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ರಾಣಿ ಎಲಿಜಬೆತ್ ನಿಧನದ ಹಿನ್ನೆಲೆಯಲ್ಲಿ ಸೆ.11ರಂದು ಭಾರತದಾದ್ಯಂತ ಒಂದು ದಿನದ ಶೋಕಾಚರಣೆ ಆಚರಿಸಲು ಭಾರತ ಸರ್ಕಾರ ನಿರ್ಧರಿಸಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.

ಬ್ರಿಟನ್‌ನ ರಾಣಿ, 96 ವರ್ಷ ವಯಸ್ಸಿನ 2ನೇ ಎಲಿಜಬೆತ್ ಗುರುವಾರ ರಾತ್ರಿ ನಿಧನರಾದರು. ಬ್ರಿಟಿಷ್‌ ಇತಿಹಾಸದಲ್ಲಿಯೇ ಸುದೀರ್ಘ ಕಾಲ ರಾಣಿಯಾಗಿದ್ದ ಹಿರಿಮೆ ಅವರದು.

ಬಂಕಿಂಗ್‌ಹ್ಯಾಮ್‌ ಅರಮನೆ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದೆ. ರಾಣಿಯ ಗೌರವಾರ್ಥ ಬ್ರಿಟನ್‌ನಲ್ಲಿ 10 ದಿನ ರಾಷ್ಟ್ರೀಯ ಶೋಕ ಘೋಷಿಸಿದೆ. ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಅವರ ದೀರ್ಘಾವಧಿಯ ಬದುಕು ಮತ್ತು ಆಡಳಿತ ಕುರಿತು ಸಂತಾಪದ ಮಾತುಗಳು ಬರುತ್ತಿವೆ.

ರಾಣಿಯ ಪಾರ್ಥಿವ ಶರೀರವನ್ನು ಬಾಲ್‌ಮೊರಲ್‌ ಎಸ್ಟೇಟ್‌ನಲ್ಲಿ ಇಡಲಿದ್ದು, ಶುಕ್ರವಾರ ಲಂಡನ್‌ಗೆ ಒಯ್ಯಲಾಗುವುದು ಎಂದು ಅರಮನೆಯ ಹೇಳಿಕೆಯು ತಿಳಿಸಿದೆ.

ರಾಣಿಗೆ ನಾಲ್ವರು ಮಕ್ಕಳು. ಹಿರಿಯ ಮಗ, ವೇಲ್ಸ್‌ನ ರಾಜಕುಮಾರ, 73 ವರ್ಷದ ಚಾರ್ಲ್ಸ್‌ ಅವರು ತಕ್ಷಣದಿಂದಲೇ ಅನ್ವಯವಾಗುವಂತೆ ರಾಜನಾಗಿ ಕರ್ತವ್ಯ ನಿಭಾಯಿಸುವರು ಎಂದು ಹೇಳಿದರು.

ಗುರುವಾರ ಸಂಜೆ ರಾಣಿಯ ಆರೋಗ್ಯ ಸ್ವಲ್ಪಮಟ್ಟಿಗೆ ಹದಗೆಟ್ಟಿತ್ತು. ವೈದ್ಯರ ನಿಗಾದಲ್ಲಿಯೇ ಇರಬೇಕು ಎಂದು ವೈದ್ಯರು ಶಿಫಾರಸು ಮಾಡಿದ್ದರು. ರಾಣಿಯ ಮಕ್ಕಳಾದ ಚಾರ್ಲ್ಸ್‌, ರಾಜಕುಮಾರಿ 72 ವರ್ಷದ ಆ್ಯನೆ, ರಾಜಕುಮಾರರಾದ 62 ವರ್ಷದ ಆಂಡ್ರ್ಯೂ ಮತ್ತು 58 ವರ್ಷದ ಎಡ್ವರ್ಡ್‌ ಅವರು ಬಾಲ್‌ಮೊರಲ್‌ನಲ್ಲಿರುವ ರಾಣಿಯ ಎಸ್ಟೇಟ್‌ಗೆ ಧಾವಿಸಿದರು.

ರಾಣಿಯಾಗಿ ಅವರು ಬುಧವಾರವಷ್ಟೇ ಬ್ರಿಟನ್‌ನ 15ನೇ ಪ್ರಧಾನಿಯಾಗಿ ಲಿಜ್‌ ಟ್ರಸ್‌ ಅವರನ್ನು ನೇಮಕಮಾಡಿದ್ದರು.

ಚಾರ್ಲ್ಸ್‌ ಭಾರತ ಪ್ರೀತಿ

ಬ್ರಿಟನ್‌ ರಾಜನಾಗಿ ಶನಿವಾರಬೆಳಿಗ್ಗೆ ಕೌನ್ಸಿಲ್‌ ಸಭೆಯಲ್ಲಿ ಅಧಿಕೃತವಾಗಿ ಘೋಷಿಸಲ್ಪಡುತ್ತಿರುವ 3ನೇ ಚಾರ್ಲ್ಸ್‌ ಅವರು ಭಾರತದ ಮೇಲೆ ಒಲವು ಮತ್ತು ಪ್ರೀತಿ ಹೊಂದಿದ್ದಾರೆ.

ಭಾರತೀಯ ಪುರಾತನವಾದ ಯೋಗ, ಆಯುರ್ವೇದದ ಮೇಲೆ ಆಸಕ್ತಿ ಇರಿಸಿಕೊಂಡಿದ್ದಾರೆ.ರಾಜಕುಮಾರರಾಗಿದ್ದ ಅವಧಿಯಲ್ಲಿ ಹಲವು ಬಾರಿ ಭಾರತಕ್ಕೆ ಭೇಟಿ ನೀಡಿದ್ದಾರೆ.

2007ರಲ್ಲಿ ಅವರು ಸ್ಥಾಪಿಸಿದ ಬ್ರಿಟಿಷ್ ಏಷ್ಯನ್ ಟ್ರಸ್ಟ್ ಮೂಲಕ ಭಾರತಕ್ಕೆ ಹಲವು ರೀತಿಯಲ್ಲಿ ಸಹಾಯಹಸ್ತವನ್ನೂ ಚಾಚಿದ್ದಾರೆ. ಕೋವಿಡ್‌ ಸಮಯದಲ್ಲೂ ಭಾರತಕ್ಕೆ ಚಾರ್ಲ್ಸ್‌ ನೆರವಾಗಿದ್ದರು.

‘ರಾಣಿ ಭೇಟಿಯು ಕ್ಷಮೆಗಿಂತಲೂ ಮಿಗಿಲಾದುದು’

ಅಮೃತಸರ (ಪಿಟಿಐ): ‘ಜಲಿಯನ್‌ ವಾಲಾಬಾಗ್‌ ಹತ್ಯಾಕಾಂಡ ಸ್ಮಾರಕಕ್ಕೆ ರಾಣಿ 2ನೇಎಲಿಜಬೆತ್ ಅವರ ಭೇಟಿ, ಆ ಘಟನೆಗೆ ಕ್ಷಮೆ ಕೇಳುವುದಕ್ಕಿಂತಲೂ ಮಿಗಿಲಾದುದು’ ಎಂದು ಜಲಿಯನ್‌ ವಾಲಾಬಾಗ್‌ ಟ್ರಸ್ಟ್‌ ಕಾರ್ಯದರ್ಶಿ ಸುಕುಮಾರ್ ಮುಖರ್ಜಿ ಹೇಳಿದರು.

ರಾಣಿ ಅವರು 1997ರಲ್ಲಿ ಸ್ಮಾರಕಕ್ಕೆ ಭೇಟಿ ನೀಡಿ ಗೌರವ ಸಲ್ಲಿಸಿದ್ದರು. ಆಗ ರಾಣಿ ತನ್ನ ದೇಶದ ಪರ ಕ್ಷಮೆ ಕೇಳಬಹುದು ಎಂದು ಹೆಚ್ಚಿನವರು ಆಶಿಸಿದ್ದರು. ಆದರೆ, ಹಾಗಾಗಲಿಲ್ಲ. ಬ್ರಿಟಿಷ್‌ ಸೇನಾಧಿಕಾರಿ ಆದೇಶದಂತೆ 1919ರಲ್ಲಿ ಹತ್ಯಾಕಾಂಡ ನಡೆದಿತ್ತು.

‘ಕೊಹಿನೂರ್’ ವಜ್ರ ಮರಳಿಸಿ: ರಾಣಿ ಎಲಿಜಬೆತ್ ನಿಧನದ ಹಿಂದೆಯೇ ಸದ್ಯ, ಬ್ರಿಟನ್‌ನ ರಾಜಮನೆತನದಲ್ಲಿ ಇರುವ ಅಮೂಲ್ಯ 105 ಕ್ಯಾರಟ್‌ನ ಕೊಹಿನೂರ್ ವಜ್ರವನ್ನು ಭಾರತಕ್ಕೆ ಮರಳಿಸಬೇಕು ಎಂಬ ಅಭಿಯಾನ ಟ್ವಿಟರ್‌ನಲ್ಲಿ ಆರಂಭವಾಗಿದೆ.

ಈ ವಜ್ರ 14ನೇ ಶತಮಾನದಲ್ಲಿ ದಕ್ಷಿಣ ಭಾರತದಲ್ಲಿ ಪತ್ತೆಯಾಗಿದ್ದು, ಬ್ರಿಟಿಷರ ಆಡಳಿತಾವಧಿಯಲ್ಲಿ ಅವರ ಸುಪರ್ದಿಗೆ ಹೋಗಿತ್ತು. ಇದು ತಮಗೆ ಸೇರಬೇಕು ಎಂದು ಭಾರತ ಸೇರಿ ನಾಲ್ಕು ದೇಶಗಳು ಪ್ರತಿಪಾದಿಸುತ್ತಿವೆ. ಟ್ವಿಟರ್‌ನಲ್ಲಿ ಈ ಚರ್ಚೆ ಆರಂಭವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT