ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತುಕತೆಯ ಮೂಲಕ ಗಡಿ ಬಿಕ್ಕಟ್ಟು ಶಮನಕ್ಕೆ ಸಮ್ಮತಿ

ಭಾರತ– ಚೀನಾ ಸೇನಾ ಕಮಾಂಡರ್‌ ಮಟ್ಟದ ಮಾತುಕತೆ
Last Updated 8 ನವೆಂಬರ್ 2020, 13:10 IST
ಅಕ್ಷರ ಗಾತ್ರ

ನವದೆಹಲಿ: ಪೂರ್ವ ಲಡಾಖ್‌ನಲ್ಲಿ ನಿರ್ಮಾಣವಾಗಿರುವ ಬಿಕ್ಕಟ್ಟನ್ನು ಮಾತುಕತೆಯ ಮೂಲಕ ಪರಿಹರಿಸಿಕೊಳ್ಳಲು ಭಾರತ ಮತ್ತು ಚೀನಾದ ಸೇನಾ ಪಡೆಗಳು ಸಮ್ಮತಿ ಸೂಚಿಸಿವೆ.

ಶುಕ್ರವಾರ ಚುಶೂಲ್‌ನಲ್ಲಿ ನಡೆದಿದ್ದ ಭಾರತ ಮತ್ತು ಚೀನಾ ಸೇನೆಯ ಕಮಾಂಡರ್‌ ಮಟ್ಟದ ಎಂಟನೇ ಸುತ್ತಿನ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಈ ಮಾತುಕತೆ ಕುರಿತು ಜಂಟಿ ಹೇಳಿಕೆಯನ್ನು ಭಾನುವಾರ ಉಭಯ ದೇಶಗಳು ಬಿಡುಗಡೆ ಮಾಡಿವೆ.

‘ಚೀನಾ ಸೇನೆಯೊಂದಿಗೆ ರಚನಾತ್ಮಕ ಹಾಗೂ ವಿಸ್ತೃತ ಮಾತುಕತೆ ನಡೆಸಲಾಗಿದೆ’ ಎಂದು ಭಾರತೀಯ ಸೇನೆಯು ಹೇಳಿದೆ.

‘ಉಭಯ ರಾಷ್ಟ್ರಗಳ ನಾಯಕರ ನಡುವಣ ಮಾತುಕತೆಯ ವೇಳೆ ವ್ಯಕ್ತವಾದ ಪ್ರಮುಖ ಅಂಶಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸಲು ಸಭೆಯಲ್ಲಿ ಸಮ್ಮತಿಸಲಾಯಿತು. ಗಡಿಯಲ್ಲಿ ಶಾಂತಿ ಕಾಪಾಡಿಕೊಳ್ಳಬೇಕು. ಇನ್ನು ಮುಂದೆ ತಪ್ಪು ಗ್ರಹಿಕೆಗೆ ಆಸ್ಪದ ನೀಡಬಾರದು ಎಂಬ ನಿರ್ಧಾರಗಳನ್ನೂ ಕೈಗೊಳ್ಳಲಾಯಿತು’ ಎಂದೂ ತಿಳಿಸಿದೆ.

ಗಡಿಯಲ್ಲಿ ನಿಯೋಜಿಸಿರುವ ಸೇನೆಯನ್ನು ತ್ವರಿತವಾಗಿ ಹಿಂದಕ್ಕೆ ಪಡೆಯಬೇಕು. ಬಿಕ್ಕಟ್ಟು ಶಮನಗೊಳಿಸುವ ಪ್ರಯತ್ನಕ್ಕೆ ಭಂಗ ತರುವ ಯಾವುದೇ ಕ್ರಮಗಳಿಗೆ ಮುಂದಾಗಬಾರದು ಎಂದು ಭಾರತೀಯ ಸೇನೆಯು ಒತ್ತಾಯಿಸಿದ್ದಾಗಿ ಮೂಲಗಳು ತಿಳಿಸಿವೆ.

ಲೇಹ್‌ ಮೂಲದ 14ನೇ ಕಾರ್ಪ್ಸ್‌ನ ಲೆಫ್ಟಿನೆಂಟ್‌ ಜನರಲ್‌ ಪಿಜಿಕೆ ಮೆನನ್‌ ನೇತೃತ್ವದ ಭಾರತದ ನಿಯೋಗದಲ್ಲಿ ವಿದೇಶಾಂಗ ಸಚಿವಾಲಯದ ಜಂಟಿ ಕಾರ್ಯದರ್ಶಿ (ಪೂರ್ವ ಏಷ್ಯಾ) ನವೀನ್‌ ಶ್ರೀವಾಸ್ತವ ಅವರೂ ಇದ್ದರು.

ಶೀಘ್ರದಲ್ಲೇ ಮತ್ತೊಂದು ಸುತ್ತಿನ ಮಾತುಕತೆ ನಡೆಸಲೂ ಉಭಯ ಸೇನೆಗಳು ನಿರ್ಧರಿಸಿವೆ ಎಂದೂ ಹೇಳಲಾಗಿದೆ.

ಗಡಿಯಲ್ಲಿ ಪ್ರಕ್ಷುಬ್ಧ ಸ್ಥಿತಿ ನಿರ್ಮಾಣವಾದ ಬೆನ್ನಲ್ಲೇ ಭಾರತೀಯ ಸೇನೆಯು ಘರ್ಷಣಾ ಸ್ಥಳಗಳಲ್ಲಿ ಸುಮಾರು 50,000 ಸೈನಿಕರನ್ನು ನಿಯೋಜಿಸಿತ್ತು. ಚೀನಾ ಸೇನೆಯೂ ಇಷ್ಟೇ ಪ್ರಮಾಣದ ಸೈನಿಕರನ್ನು ನಿಯೋಜಿಸಿದೆ ಎಂದು ಅಧಿಕಾರಿಗಳು ನುಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT