ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್‌ಎಸಿಯಲ್ಲಿ ಸೇನೆ ನಿಯೋಜಿಸಿದ ಭಾರತ: ಅಧಿಕಾರಿ ಮಾಹಿತಿ

Last Updated 1 ಸೆಪ್ಟೆಂಬರ್ 2020, 15:07 IST
ಅಕ್ಷರ ಗಾತ್ರ

ದೆಹಲಿ: ಪೂರ್ವ ಲಡಾಕ್‌ನ ಪಾಂಗಾಂಗ್‌ ಸರೋವರದ ದಕ್ಷಿಣ ದಂಡೆಯ ಪರ್ವತವೊಂದನ್ನು ವಶಪಡಿಸಿಕೊಳ್ಳುವ ಚೀನಾದ ಪ್ರಯತ್ನವನ್ನು ವಿಫಲಗೊಳಿಸಿರುವ ಭಾರತೀಯ ಸೇನೆ, ಯುದ್ಧತಂತ್ರದ ದೃಷ್ಟಿಯಿಂದ ಮಹತ್ವ ಪಡೆದ ನಾಲ್ಕು ಗಿರಿಶಿಖರಗಳಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಿದೆ. ಈ ಕುರಿತು ಸರ್ಕಾರದ ಮಟ್ಟದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಇತ್ತೀಚಿನ ಘಟನೆಯ ಬಗ್ಗೆ ಸರ್ಕಾರದ ಮಟ್ಟದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ‘ಶನಿವಾರ ತಡರಾತ್ರಿ ಪ್ರಮುಖ ಪರ್ವತದ ಮೂಲಕ ಹಾದು ಮುಂದೆ ಬರಲು ಚೀನಾ ಗಡಿ ಭದ್ರತಾಪಡೆಗಳು ಪ್ರಯತ್ನ ನಡೆಸಿದವು. ಅದಕ್ಕೆ ಭಾರತೀಯ ಸೈನ್ಯವು ಸೂಕ್ತ ಪ್ರತಿಕ್ರಿಯೆ ನೀಡಿ ಹಿಮ್ಮೆಟ್ಟಿಸಿದೆ. ಚೀನೀಯರು ಕಣ್ಣು ಹಾಕಿದ್ದ ನಾಲ್ಕು ಪರ್ವತಗಳ ಮೇಲೆ ನಾವು ಪಾರಮ್ಯ ಸಾಧಿಸಿದ್ದೇವೆ. ಈ ನಾಲ್ಕು ಪರ್ವತಗಳು ಎಲ್‌ಎಸಿಯಲ್ಲಿ ಭಾರತದ ಕಡೆಗೆ ಇರುವಂಥವಾಗಿವೆ ’ ಎಂದು ಹೇಳಿದ್ದಾರೆ.

‘ಚೀನಾದ ಸೈನಿಕರು ಮಿಲಿಟರಿ ವಾಹನಗಳ ಬಲದೊಂದಿಗೇ ಗಡಿ ದಾಟುವವರಿದ್ದರು. ಭಾರತೀಯ ಭದ್ರತಾ ಪಡೆಗಳಿಗೆ ಅವರು ತೀರ ಸನಿಹದಲ್ಲೇ ಇದ್ದರು. ಆದರೆ, ಎರಡೂ ಪಡೆಗಳ ನಡುವೆ ಮೌಖಿಕ ವಾದಗಳು ನಡೆದವೇ ಹೊರತು, ಘರ್ಷಣೆ ಸಂಭವಿಸಿಲ್ಲ,’ ಎಂದು ಅವರು ತಿಳಿಸಿದ್ದಾರೆ.

‘ಸದ್ಯ ಚೀನಾ ಪಡೆಗಳು ಸರೋವರದ ಉತ್ತರ ದಂಡೆಯಲ್ಲಿ ಬೀಡು ಬಿಟ್ಟಿದ್ದು, ಸನ್ನದ್ದು ಸ್ಥಿತಿಯಲ್ಲಿವೆ. ಆ ಪ್ರದೇಶವು ಚೀನಾದ ರಕ್ಷಣಾ ಕಾರ್ಯತಂತ್ರದ ಹೊಸ ನೆಲೆಯಾಗಿದೆ,’ ಎಂದೂ ಅಧಿಕಾರಿ ಹೇಳಿದ್ದಾರೆ.

ಪಾಂಗಾಂಗ್‌ ಸರೋವರದ ದಕ್ಷಿಣ ದಂಡೆಯಲ್ಲಿ ಈ ಘಟನೆ ನಡೆದಿದ್ದು, ಇದೇ ಪ್ರದೇಶದಲ್ಲಿ ಎರಡೂ ಕಡೆಗಳ ಸೈನಿಕರು ಏಪ್ರಿಲ್‌ನಿಂದಲೂ ಮುಖಾಮುಖಿಯಾಗಿದ್ದಾರೆ.
ಆದರೆ, ಚೀನಾ ಇದಕ್ಕೆ ತದ್ವಿರುದ್ಧದ ಹೇಳಿಕೆಗಳನ್ನು ಮಂಗಳವಾರ ಬೆಳಗ್ಗೆ ನೀಡಿದೆ. ‘ಚೀನಾ ಎಂದಿಗೂ ಯಾವುದೇ ಯುದ್ಧ ಅಥವಾ ಸಂಘರ್ಷವನ್ನು ಪ್ರಚೋದಿಸಿಲ್ಲ. ಇತರ ದೇಶದ ಭೂಪ್ರದೇಶದ ಒಂದು ಇಂಚನ್ನೂ ಆಕ್ರಮಿಸಿಕೊಂಡಿಲ್ಲ. ಚೀನಾದ ಸೇನೆ ಎಂದಿಗೂ ಗಡಿ ದಾಟಿಲ್ಲ. ಬಹುಶಃ ಸ್ವಲ್ಪ ಸಂವಹನ ಸಮಸ್ಯೆಗಳಿವೆ,’ ಎಂದು ಚೀನಾದ ವಿದೇಶಾಂಗ ಇಲಾಖೆಯ ವಕ್ತಾರೆ ಹುವಾ ಚುನೈಂಗ್‌ ಅಭಿಪ್ರಾಯಪಟ್ಟಿದ್ದಾರೆ.

ಇನ್ನೊಂದೆಡೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಭಾರತದಲ್ಲಿರುವ ಚೀನಾ ರಾಯಭಾರ ಕಚೇರಿ, ‘ಪಾಂಗಾಂಗ್‌ ತ್ಸೊ ಸರೋವರದ ದಕ್ಷಿಣ ದಂಡೆ ಮತ್ತು ರೆಕಿನ್ ಪಾಸ್ ಬಳಿ ಆಗಸ್ಟ್ 31 ರಂದು ಭಾರತೀಯ ರಕ್ಷಣಾ ಪಡೆಗಳು ವಾಸ್ತವ ಗಡಿ ನಿಯಂತ್ರಣಾ ರೇಖೆಯನ್ನು ಅತಿಕ್ರಮಿಸಿವೆ. ಈ ಮೂಲಕ ಸ್ಪಷ್ಟವಾದ ಪ್ರಚೋದನೆ ನೀಡಿವೆ ಗಡಿಯಲ್ಲಿನ ಸಮಸ್ಯೆಗಳನ್ನು ಶಮನಗೊಳಿಸಲು ದೀರ್ಘಕಾಲವಧಿಯಲ್ಲಿ ಮಾಡಲಾಗಿರುವ ಎಲ್ಲ ಪ್ರಯತ್ನಗಳಿಗೆ ವಿರುದ್ಧವಾದ ಕೃತ್ಯವನ್ನು ಭಾರತ ಸದ್ಯ ಮಾಡಿದೆ. ಭಾರತ ತನ್ನ ಮುಂಚೂಣಿ ಸೈನಿಕರನ್ನು ನಿಯಂತ್ರಿಸಬೇಕು. ನಿರ್ಬಂಧಿಸಬೇಕು,’ ಎಂದು ಒತ್ತಾಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT