ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Pv Web Exclusive | ಚೀನಾ ಗಡಿ ಕಾಯುವ ಯೋಧರಿಗೆ ಸಿಗಲಿದೆ 'ಗದ್ದಿ ಕುತ್ತ' ನೆರವು

ಗಡಿಕಾಯುವ ಯೋಧರ ವಿಶ್ವಾಸಾರ್ಹ ಮಿತ್ರನಾಗಲಿದೆ ಈ ಶ್ವಾನ
Last Updated 16 ಸೆಪ್ಟೆಂಬರ್ 2020, 3:40 IST
ಅಕ್ಷರ ಗಾತ್ರ
ADVERTISEMENT
""
""
""
""
""
""
""

ರಷ್ಯಾದ ಮಾಸ್ಕೋದಲ್ಲಿ ಭಾರತ-ಚೀನಾ ವಿದೇಶಾಂಗ ಸಚಿವರು ಪರಸ್ಪರ ಕೈಕುಲುಕಿ ಮಾತನಾಡಿದ್ದು, ಗಡಿ ಬಿಕ್ಕಟ್ಟು ನಿವಾರಣೆಗೆಂದು ಹೆಣೆದ ಐದು ಅಂಶಗಳ ಸೂತ್ರಕ್ಕೆ ಸಹಮತ ಸೂಚಿಸಿದ್ದು ನಿನ್ನೆಯ (ಸೆ.11) ಹೊಸ ಬೆಳವಣಿಗೆ. ಲಡಾಖ್‌ನಲ್ಲಿ ತಲೆದೋರಿರುವ ಉದ್ವಿಗ್ನ ಪರಿಸ್ಥಿತಿ ಕುರಿತು ಬ್ರಿಗೇಡಿಯರ್‌ ಮಟ್ಟದ ಸೈನಿಕ ಮಾತುಕತೆಗಳೂ ಭಾರತ-ಚೀನಾ ಸೇನಾಧಿಕಾರಿಗಳ ನಡುವೆ ಪ್ರತಿದಿನ ಎಂಬಂತೆ ನಡೆಯುತ್ತಲೇ ಇವೆ. ಕಾವೇರಿದ ಪದಗಳ ಬಳಕೆ, ಮಾತಿನೇಟು-ಎದಿರೇಟಿನ ಹೊರತಾಗಿ ಇದರಿಂದ ಅಷ್ಟೇನೂ ಹೇಳಿಕೊಳ್ಳುವಂಥ ಪರಿಹಾರ ಸಿಗುತ್ತಿಲ್ಲ. ಆದರೆ ಎರಡೂ ದೇಶಗಳು ರಾಜತಾಂತ್ರಿಕ ಮತ್ತು ಮಿಲಿಟರಿ ಮಾತುಕತೆಗಳಿಂದ ಹಿಂದೆ ಸರಿದಿಲ್ಲ ಎಂಬುದಷ್ಟೇ ಸಮಾಧಾನದ ಸಂಗತಿ.

'ಹಗಲು ಹೊತ್ತು ಮಾತುಕತೆ ಅಂತ ಸಂಧಾನಕ್ಕೆ ಕೂರುತ್ತಾರೆ, ಕತ್ತಲು ಆವರಿಸುತ್ತಿದ್ದಂತೆ ಕಬ್ಬಿಣದ ರಾಡ್, ಬಂದೂಕು ಹಿಡಿದು ಮುಗಿಬೀಳಲು ಬರುತ್ತಾರೆ. ಇಂಥವನ್ನು ನಂಬುವುದು ಹೇಗೆ?' ಎಂಬುದು ಗಡಿಕಾಯುತ್ತಿರುವ ಯೋಧರ ಪ್ರಶ್ನೆ. ಜೂನ್ 20ರ ಗಾಲ್ವನ್ ಸಂಘರ್ಷದ ನಂತರವಂತೂ ಗಡಿ ತುದಿಯ ಮುಂಚೂಣಿ ಠಾಣೆಗಳಲ್ಲಿ ಚೀನಿಯರಿಗೆ ಮುಖಾಮುಖಿ ನಿಂತಿರುವ ಸೈನಿಕರು ಚೀನಾದ ಪ್ರತಿನಡೆಯನ್ನು ಅನುಮಾನದಿಂದಲೇ ನೋಡುತ್ತಿದ್ದಾರೆ. 'ಚೀನಾ ಸೇನೆಯನ್ನು ನಂಬಬಹುದು, ರಾಜತಾಂತ್ರಿಕ ಮಾತುಕತೆಗಳಿಂದ ಪರಿಹಾರ ಸಾಧ್ಯವಿದೆ' ಎಂದು ಯಾರಾದರೂ ಹೇಳಿದರೆ; 'ಒಳ್ಳೇ ಜೋಕ್ ಹೇಳಿದ್ರಿ' ಅಂತ ನಕ್ಕು, ಗಡಿಯಾಚೆಗೆ ಕಣ್ಣು ನೆಟ್ಟ ಬೈನಾಕ್ಯುಲರ್‌ನಲ್ಲಿ ಕಣ್ಣು ಕೀಲಿಸುತ್ತಾರೆ.

ಈ ಗಡಿ ಗಡಿಬಿಡಿ ತಕ್ಷಣಕ್ಕೆ ತಣಿಯುವಂಥದ್ದಲ್ಲ ಬಿಡಿ. ಆದರೆ ಈ ಎಲ್ಲ ಬೆಳವಣಿಗೆಗಳ ನಡುವೆ ಭಾರತೀಯ ಸೇನೆ ಇತ್ತೀಚೆಗೆ ಮಹತ್ವದ ನಿರ್ಧಾರವೊಂದನ್ನು ಪ್ರಕಟಿಸಿತು. ಲಡಾಖ್‌ನ ಕೊರೆಯುವ ಚಳಿಯಲ್ಲಿ ವೈರಿಯ ಮೇಲೆ ಕಣ್ಣಿಟ್ಟಿರುವ ಸೈನಿಕರಿಗೆ ನೆರವು ನೀಡುತ್ತಿರುವ ಸೇನಾ ಶ್ವಾನಪಡೆಗೆ ಹೊಸ ಬಲ ತುಂಬುವ ಘೋಷಣೆಯದು. ಪ್ರಧಾನಿ ನರೇಂದ್ರ ಮೋದಿ ಅವರು ದೇಸಿತಳಿಯ ನಾಯಿಗಳ ಬಗ್ಗೆ ಹೆಚ್ಚು ಆಸಕ್ತಿ ವ್ಯಕ್ತಪಡಿಸಿದ ನಂತರನಡೆದ ಮಹತ್ವದ ಬೆಳವಣಿಯಾಗಿಯೂ ಇದನ್ನು ವ್ಯಾಖ್ಯಾನಿಸಲಾಗುತ್ತಿದೆ.

ಕಾಶ್ಮೀರದ ಗುಡ್ಡಗಾಡು ಪ್ರದೇಶಗಳಅಲೆಮಾರಿ ಕುರಿಗಾಹಿಗಳ ನೆಚ್ಚಿನ ಬಂಟನೆನಿಸಿದ್ದಬಖರ್‌ವಾಲ್ ತಳಿಯ ನಾಯಿಗಳ ಸಂಖ್ಯೆ ತೀವ್ರಗತಿಯಲ್ಲಿ ಕುಸಿಯುತ್ತಿತ್ತು. ಕೆಲವೇ ದಶಕದಲ್ಲಿ ಹಿಮಾಲಯದಈ ದೇಸಿ ಶ್ವಾನ ತಳಿ ನಾಮಾವಶೇಷವಾಗಲಿದೆ ಎಂಬ ಅಪಾಯದ ಕೂಗು ಕೇಳಿಬರುತ್ತಿದ್ದ ಸಂದರ್ಭದಲ್ಲಿಯೇ ಸೇನೆ ಈ ಮಹತ್ವದ ನಿರ್ಧಾರ ಪ್ರಕಟಿಸಿದೆ. ಮುಂದಿನ ದಿನಗಳಲ್ಲಿ ಇದು ಬಖರ್‌ವಾಲ್ ತಳಿಯ ಉಳಿವಿಗೂ ನೆರವಾಗುವ ನಿರೀಕ್ಷೆ ಹುಟ್ಟುಹಾಕಿದೆ.

ಅಲೆಮಾರಿಗಳ ನೆಚ್ಚಿನ ಬಂಟ ಬಖರ್‌ವಾಲ್(Courtesy:greaterkashmir.com)

ವಿಶಿಷ್ಟ ಶ್ವಾನ ತಳಿಲಡಾಖಿ ಬಖರ್‌ವಾಲ್ (ಗದ್ದಿ ಕುತ್ತ)

ಲಡಾಖ್‌ ಪ್ರದೇಶದಲ್ಲಿ ಕಂಡು ಬರುವ ಸ್ಥಳೀಯ ಬಖರ್‌ವಾಲ್‌ ಅಥವಾ ಗದ್ದಿ ಕುತ್ತ ತಳಿಯ ನಾಯಿಗಳನ್ನು ಸೇನೆಯು ಪಳಗಿಸಿ, ಚಳಿ ಹೆಚ್ಚಿರುವ ಮತ್ತು ಎತ್ತರದ ನೆಲೆಗಳಲ್ಲಿ ನಿಯೋಜಿಸಲಿದೆ. ಟಿಬೆಟಿಯನ್ ಮಸ್ಟಿಫ್ ಮೂಲ ತಳಿಯ ಈ ನಾಯಿಗಳು ಚೀನಾ ಗಡಿಯಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಕ್ರಮಬದ್ಧ ಶಿಕ್ಷಣದ ಮೂಲಕಮುಂಚೂಣಿ ಸೇನಾನೆಲೆ ಮತ್ತು ಸೇನಾಠಾಣೆಗಳಲ್ಲಿ ತುರ್ತು ಸಂದರ್ಭ ಎದುರಾದಾಗ ಸೆಂಟ್ರಿಗಳನ್ನು (ಕಾವಲುಗಾರರನ್ನು) ಎಚ್ಚರಿಸುವ ಮಹತ್ವದ ಜವಾಬ್ದಾರಿ ನಿರ್ವಹಿಸಲುಈ ನಾಯಿಗಳನ್ನು ಸಜ್ಜುಗೊಳಿಸಲಾಗುವುದು.

'ಗದ್ದಿ ಕುತ್ತ ತಳಿಯ ವಾಸನಾಗ್ರಹಣ ಸಾಮರ್ಥ್ಯ ಚೆನ್ನಾಗಿದೆ. ಹೀಗಾಗಿಯೇ ನೆಲದ ಹುದುಗಿಸಿಟ್ಟ ಮೈನ್‌ಗಳನ್ನು (ಬಾಂಬ್) ಗುರುತಿಸುವ, ಲಡಾಖ್‌ನ ಹಿಮಾಚ್ಛಾದಿತ ಪ್ರದೇಶಗಳಲ್ಲಿ ಹಿಮಪಾತದಂಥ ಅನಾಹುತಗಳು ಸಂಭವಿಸಿದಾದ ಅದರಡಿಗೆ ಸಿಲುಕಿದವರನ್ನು ಗುರುತಿಸಿ, ಅವರ ಜೀವ ಕಾಪಾಡುವ ಮಹತ್ವದ ಹೊಣೆಗಾರಿಕೆ ನಿರ್ವಹಿಸಲು ಸಾಧ್ಯವಾಗುವಂತೆಈ ದೇಸಿ ನಾಯಿಗಳಿಗೆ ತರಬೇತಿ ನೀಡಲಾಗುವುದು'ಎಂಬಸೇನೆಯ ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರ ಹೇಳಿಕೆಯನ್ನು'ದಿ ಪ್ರಿಂಟ್' ಜಾಲತಾಣ ವರದಿ ಮಾಡಿದೆ.

ಮುಧೋಳ್ ಹೌಂಡ್ (ಮುಧೋಳದ ಬೇಟೆನಾಯಿಗಳು) ಮತ್ತು ಹಿಮಾಚಲಿ ತಳಿಯ ನಾಯಿಗಳ ಬಗ್ಗೆಯೂ ಸೇನೆಯ ಶ್ವಾನ ತರಬೇತುದಾರರಿಗೆ ಇಂಥದ್ದೇ ವಿಶ್ವಾಸವಿದೆ. ದೇಸಿ ತಳಿಗಳಾದ ರಾಜಪಾಳ್ಯಂ, ಕನ್ನಿ, ಚಿಪ್ಪಿಪರೈ ಮತ್ತು ಕಾಂಬೈ ತಳಿಗಳ ಸಾಮರ್ಥ್ಯದ ಬಗ್ಗೆಯೂ ಸೇನೆಯ ಶ್ವಾನ ತರಬೇತುದಾರರಿಗೆ ಮೆಚ್ಚುಗೆಯಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ದೇಸಿ ತಳಿಗಳು ಸೇನೆಗೆ ಸೇರ್ಪಡೆಯಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಶ್ವಾನಪಡೆಗೆ ಲಡಾಖ್‌ನಲ್ಲಿ ಹೆಚ್ಚು ಮಹತ್ವ

ದಪ್ಪ ಚರ್ಮ ಮತ್ತು ಹೆಚ್ಚು ಕೂದಲು ಬೆಳೆಯುವ ಜರ್ಮನ್ ಷೆಫರ್ಡ್‌ ಮತ್ತು ಲ್ಯಾಬ್ರಾಡೊರ್ಸ್‌ ತಳಿಯ ನಾಯಿಗಳನ್ನು ಸಾಮಾನ್ಯವಾಗಿ ಲಡಾಖ್ ವಲಯದಲ್ಲಿ ಸೇವೆಗೆ ನಿಯೋಜಿಸಲಾಗುತ್ತದೆ. ಲಡಾಖ್‌ನಲ್ಲಿರುವ ಸೇನಾ ನಾಯಿಗಳು ಮತ್ತು ಸೇನಾ ಶ್ವಾನ ತರಬೇತುದಾರರಿಗೆ ಈವರೆಗೆ 17 ಪ್ರತಿಷ್ಠಿತ ಪುರಸ್ಕಾರಗಳು ಸಂದಿವೆ. ಲಡಾಖ್‌ ವಲಯದಲ್ಲಿ ಶ್ವಾನಪಡೆಗೆ ಇರುವ ಪ್ರಾಮುಖ್ಯತೆಗೆ ಇದು ದ್ಯೋತಕ.

ಸೇನಾನೆಲೆ ಇರುವ ಭೌಗೋಳಿಕ ಪ್ರದೇಶಗಳಿಗೆ ಅನುಗುಣವಾಗಿ ಶ್ವಾನಪಡೆಯಿಂದ ಸೇನೆ ನಿರೀಕ್ಷಿಸುವ ಸೇವೆಯ ಆದ್ಯತೆಗಳಲ್ಲಿಯೂ ವ್ಯತ್ಯಾಸಗಳಾಗುತ್ತವೆ. ನಿರ್ದಿಷ್ಟವಾಗಿ ಲಡಾಖ್‌ ವಲಯಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ಸೇನಾ ತುಕಡಿಗಳು ಸಂಚರಿಸುವ ಮಾರ್ಗಗಳಲ್ಲಿ ವೈರಿಗಳು ಹುದುಗಿಸಿಡಬಹುದಾದ ನೆಲಬಾಂಬ್‌ಗಳ ಪತ್ತೆ, ರಸ್ತೆಗಳಲ್ಲಿ ಇರಬಹುದಾದ ಇತರ ಅಡ್ಡಿಗಳನ್ನು ಗುರುತಿಸುವುದು, ನಿರ್ವಾಹಕರನ್ನು ಎಚ್ಚರಿಸುವುದು ಸೇನಾ ನಾಯಿಗಳ ಮುಖ್ಯ ಕೆಲಸ. ಇದರ ಜೊತೆಗೆ ಹಿಮಪಾತದಲ್ಲಿ ಆಪತ್ತಿಗೆ ಸಿಲುಕುವ ಸೈನಿಕರ ಜೀವ ಕಾಪಾಡುವ ಹೆಚ್ಚುವರಿ ಹೊಣೆಗಾರಿಕೆಯೂ ಇರುತ್ತದೆ. ಇಂಥ ದುರಂತಗಳು ಸಂಭವಿಸಿದಾಗ ಸ್ಥಳಕ್ಕೆ ಧಾವಿಸುವ ರಕ್ಷಣಾ ತಂಡಗಳ ಜೊತೆಗೆ ಚುರುಕಿನ ನಾಯಿಗಳು ಇರುವುದು ಸಾಮಾನ್ಯ ಸಂಗತಿ.

'30 ಅಡಿಗಳಷ್ಟು ಆಳದಲ್ಲಿ ಹಿಮದಡಿ ಹುದುಗಿರುವ ಮನುಷ್ಯರನ್ನೂ ವಾಸನೆಗಳ ಬಲದಿಂದ ಈ ಶ್ವಾನಗಳು ಗುರುತಿಸಬಲ್ಲವು. ಹೀಗಾಗಿಯೇ ಹಿಮಪಾತದಂಥ ಸಂದರ್ಭದಲ್ಲಿ ಚುರುಕು ನಾಯಿಗಳು ರಕ್ಷಣಾ ತಂಡಗಳ ಆಪ್ತಮಿತ್ರ' ಎಂದು ಸೇನೆಯ ಮೂಲಗಳು ಹೇಳುತ್ತವೆ.

ಸೇನೆಯಲ್ಲಿ ಶ್ವಾನಗಳಿಗೇನು ಕೆಲಸ?

ಭಾರತೀಯ ಸೇನೆಯು ಎಂಟು ಅಗತ್ಯಗಳಿಗಾಗಿ ಶ್ವಾನಪಡೆಯನ್ನು ನಿಯೋಜಿಸುತ್ತದೆ. ಅವೆಂದರೆ... ಸುಳಿವು, ನೆಲಬಾಂಬ್ ಪತ್ತೆ, ಸ್ಫೋಟಕಗಳ ಪತ್ತೆ, ಗಸ್ತುಪಡೆಗಳೊಂದಿಗೆ ಸಂಚಾರ, ಎಒಆರ್ (ಏರಿಯಾ ಆಫ್ ರೆಸ್ಪಾನ್‌ಸಿಬಿಲಿಟಿ), ಹುಡುಕಾಟ ಮತ್ತು ರಕ್ಷಣೆ, ದಾಳಿ ಮತ್ತು ಮಾದಕ ವಸ್ತುಗಳ ಪತ್ತೆ.

ದಾಳಿ ಅಥವಾ ರಕ್ಷಣಾ ಕಾರ್ಯಾಚರಣೆ ಸಂದರ್ಭದಲ್ಲಿ ಸೇನಾ ತುಕಡಿಗಳೊಂದಿಗೆ ಇರುವ ನಾಯಿಗಳು ಸೈನಿಕರ ಸಾಮರ್ಥ್ಯವೃದ್ಧಿಗೆ ನೆರವಾಗುತ್ತವೆ. ಮಾತ್ರವಲ್ಲ ತುರ್ತು ಸಂದರ್ಭಗಳಲ್ಲಿ ಮುಂಚಿತವಾಗಿಯೇ ಅಪಾಯವನ್ನು ಗ್ರಹಿಸಿ, ಎಚ್ಚರಿಸಿ, ಸೈನಿಕರ ಜೀವ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಹಿಮಪಾತ, ಭೂಕಂಪದಂಥ ನೈಸರ್ಗಿಕ ದುರಂತಗಳಲ್ಲಿ ಅವಶೇಷಗಳಡಿ ಸಿಲುಕಿರುವವರ ಜೀವ ಉಳಿಸಲು ನೆರವಾಗುತ್ತವೆ.

ಜುಲೈ 2019ರ ನಂತರ ನಡೆದ ಸೇನಾ ಕಾರ್ಯಾಚರಣೆಗಳ ಪೈಕಿ 53 ಕಾರ್ಯಾಚರಣೆಗಳು ಯಶಸ್ವಿಯಾಗಲು ಶ್ವಾನಪಡೆಗಳು ಮುಖ್ಯಕಾರಣ. 30 ಪ್ರಕರಣಗಳಲ್ಲಿ ಸ್ಫೋಟಕಗಳನ್ನು ಪತ್ತೆ ಮಾಡಿಕೊಟ್ಟ ಶ್ವಾನಪಡೆ, 5 ಪ್ರಕರಣಗಳಲ್ಲಿ ಭಯೋತ್ಪಾದಕರನ್ನು ಗುರುತುಹಿಡಿದಿತ್ತು. 14 ಪ್ರಕರಣಗಳಲ್ಲಿ ಮದ್ದುಗುಂಡು, ಬಂದೂಕುಗಳ ಜಪ್ತಿಗೆ ಸಹಕರಿಸಿತ್ತು. 4 ಪ್ರಕರಣಗಳಲ್ಲಿ ಹಿಮದಡಿ ಸಿಲುಕಿದ್ದ ಮನುಷ್ಯರನ್ನು ಪತ್ತೆಹಚ್ಚಿ ಜೀವ ಉಳಿಸಲು ನೆರವಾಗಿದೆ.

ನಾಯಿ ಮತ್ತು ಸೇನಾ-ರಾಜತಾಂತ್ರಿಕ ಸಂಬಂಧ

ಭಾರತೀಯ ನೌಕಾಪಡೆಯ ಯುದ್ಧನೌಕೆಗಳು ದೂರದ ದೇಶಗಳ ಬಂದರುಗಳಲ್ಲಿ ಲಂಗರು ಹಾಕಿ, ಅಲ್ಲಿನ ಸ್ಥಳೀಯ ನೌಕಾಪಡೆಗಳೊಂದಿಗೆ ಕವಾಯತುಗಳಲ್ಲಿ ಭಾಗಿಯಾಗುವುದು ಹಲವು ವರ್ಷಗಳಿಂದ ನಡೆದುಕೊಂಡು ಬಂದಿರುವ ವಿದ್ಯಮಾನ. ಇಂಥ ವಿಚಾರಗಳು ಸಮಾನ ಗುರಿ ಅಥವಾ ಆತಂಕ ಹೊಂದಿರುವ ಎರಡು ದೇಶಗಳ ನಡುವಣ ಬಾಂಧವ್ಯವೃದ್ಧಿಗೂ ನೆರವಾಗುತ್ತವೆ. ಭೂಸೇನೆಯ ವಿಚಾರದಲ್ಲಿ ಇಂಥದ್ದೇ ಸಾಧ್ಯತೆಯನ್ನು ಶ್ವಾನಪಡೆಗಳು ತೆರೆದಿಟ್ಟಿವೆ.

ಭಾರತೀಯ ಸೇನಾ ನಾಯಿಗಳಚುರುಕುತನ ಮತ್ತು ವಿಶ್ವಾಸಾರ್ಹ ಬದ್ಧತೆಗೆ ಮಾರುಹೋಗಿರುವ ಮಿತ್ರರಾಷ್ಟ್ರಗಳಾದ ಬಾಂಗ್ಲಾದೇಶ, ಮ್ಯಾನ್ಮಾರ್ ಮತ್ತು ಕಾಂಬೋಡಿಯಾಗಳು ತಮಗೂ ಇಂಥ ತರಬೇತು ಪಡೆದ ನಾಯಿಗಳನ್ನು ಒದಗಿಸುವಂತೆ ಬೇಡಿಕೆ ಇಟ್ಟಿವೆ. ಇದರ ಜೊತೆಗೆ ದಕ್ಷಿಣ ಆಫ್ರಿಕಾ, ನೇಪಾಳ, ಮ್ಯಾನ್ಮಾರ್, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಸೆಚೆಲ್ಸ್‌ ದೇಶಗಳು ತಮ್ಮ ದೇಶಗಳ ಸೇನಾಪಡೆಗಳಿಗೂ ಶ್ವಾನ ನಿರ್ವಹಣೆ ತರಬೇತಿ ನೀಡುವಂತೆ ಭಾರತ ಸರ್ಕಾರವನ್ನು ಕೋರಿವೆ. ನಮ್ಮ ಹೆಮ್ಮೆಯ ಶ್ವಾನಪಡೆಗಳು ಮುಂದೊಂದು ದಿನ ಭಾರತೀಯ ಸೇನೆಯ ಸಾಫ್ಟ್‌ ಪವರ್‌ ಆಗಿ ರಾಜತಾಂತ್ರಿಕ ಮೈತ್ರಿಗೂ ಮುನ್ನುಡಿ ಬರೆಯಬಲ್ಲವು ಎಂಬುದನ್ನು ಈ ಬೆಳವಣಿಗೆಗಳು ಸಾರಿ ಹೇಳುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT