ಮಂಗಳವಾರ, ಏಪ್ರಿಲ್ 20, 2021
32 °C

ರೈತ ಪ್ರತಿಭಟನೆಗೆ 100 ದಿನ; ದೆಹಲಿ ಗಡಿಪ್ರದೇಶ ಹಾಗೂ ಹರಿಯಾಣದ ಹಲವೆಡೆ ರಸ್ತೆ ತಡೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೇಂದ್ರದ ಮೂರು ಕೃಷಿಕಾಯ್ದೆಗಳನ್ನು ವಿರೋಧಿಸಿ ವಿವಿಧ ರಾಜ್ಯಗಳ ರೈತರು ದೆಹಲಿ ಗಡಿಭಾಗಗಳಲ್ಲಿ ಆರಂಭಿಸಿದ ಪ್ರತಿಭಟನೆಯು ಶನಿವಾರ ನೂರು ದಿನಗಳನ್ನು ಪೂರೈಸಿದೆ.

ದೆಹಲಿ ಗಡಿಪ್ರದೇಶ ಹಾಗೂ ಹರಿಯಾಣದ ಹಲವೆಡೆ ಬೆಳಿಗ್ಗೆ 11ರಿಂದ ಸಂಜೆ 4 ಗಂಟೆಯವರೆಗೆ ರಸ್ತೆ ತಡೆ ನಡೆಸುವ ಮೂಲಕ ಪ್ರತಿಭಟನೆಯ ನೂರನೇ ದಿನವನ್ನು ರೈತರು ಆಚರಿಸಿದರು. ವಿವಿಧ ರೈತ ಸಂಘಟನೆಗಳ ಒಕ್ಕೂಟವಾದ ಸಂಯುಕ್ತ ಕಿಸಾನ್‌ ಮೋರ್ಚಾ, ರಸ್ತೆತಡೆಗೆ ಕರೆ ನೀಡಿತ್ತು.

ಮಹಿಳೆಯರು ಸೇರಿದಂತೆ ನೂರಾರು ರೈತರು ಕಪ್ಪು ಬಾವುಟ ಹಿಡಿದು ಪ್ರತಿಭಟನೆಯಲ್ಲಿ ಪಾಲ್ಗೊಂಡಿ
ದ್ದರು. ಕೆಲವರು ಕೈಗೆ ಕಪ್ಪು ಬ್ಯಾಂಡ್‌ ಧರಿಸಿದ್ದರು. ಮಹಿಳೆಯರು ಕಪ್ಪು ದುಪಟ್ಟಾ ಧರಿಸಿ ಪ್ರತಿಭಟನೆ ನಡೆಸಿದರು. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಸೋನಿಪತ್‌, ಹಾಜಿಪುರ ಹಾಗೂ ಕೆಲವು ಪ್ರದೇಶಗಳಲ್ಲಿ ಟ್ರ್ಯಾಕ್ಟರ್‌ ಹಾಗೂ ಇತರ ವಾಹನಗಳನ್ನು ರಸ್ತೆಯ ಮೇಲೆ ಅಡ್ಡವಾಗಿಡಲಾಗಿತ್ತು.

‘ನಮ್ಮ ಹೋರಾಟ ಕೊನೆಗೊಳ್ಳುವುದಿಲ್ಲ, ಬದಲಿಗೆ ಇನ್ನಷ್ಟು ಬಲಪಡೆದುಕೊಳ್ಳಲಿದೆ’ ಎಂದು ವಿವಿಧ ರೈತ ಸಂಘಟನೆಗಳ ಮುಖಂಡರು ಹೇಳಿದ್ದಾರೆ.

ಪ್ರಜಾಪ್ರಭುತ್ವದ ಕಪ್ಪು ಅಧ್ಯಾಯ: ‘ನೂರು ದಿನಗಳ ರೈತ ಹೋರಾಟವು ಭಾರತದ ಪ್ರಜಾಪ್ರಬುತ್ವದ ಕಪ್ಪು ಅಧ್ಯಾಯವಾಗಿದೆ’ ಎಂದು ಕಾಂಗ್ರೆಸ್‌ ಟೀಕಿಸಿದೆ.

‘ಗಡಿಭಾಗದಲ್ಲಿ ದೇಶಕ್ಕಾಗಿ ಪ್ರಾಣವನ್ನೇ ಮುಡಿಪಾಗಿಟ್ಟವರ ಪಾಲಕರು ದೆಹಲಿ ಪ್ರವೇಶಿಸುವುದನ್ನು ತಡೆಯಲು ರಸ್ತೆಯಲ್ಲಿ ಮೊಳೆಗಳನ್ನು ಚುಚ್ಚಿಡಲಾಗಿದೆ. ಅನ್ನದಾತರು ತಮ್ಮ ಹಕ್ಕಿಗಾಗಿ ಹೋರಾಟ ಮಾಡುತ್ತಿದ್ದಾರೆ. ಅವರ ವಿರುದ್ಧ ಸರ್ಕಾರ ದೌರ್ಜನ್ಯ ನಡೆಸುತ್ತಿದೆ’ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಟ್ವೀಟ್‌ ಮಾಡಿದ್ದಾರೆ.

#100DaysOfBJParrogance ಹ್ಯಾಷ್‌ಟ್ಯಾಗ್‌ನಲ್ಲಿ ಟ್ವೀಟ್‌ ಮಾಡಿದ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ, ‘ಅನ್ನದಾತರು ತಮ್ಮ ಹಕ್ಕಿಗಾಗಿ ಗಾಂಧೀಜಿ, ಸರ್ದಾರ್‌ ಪಟೇಲ್‌, ನೆಹರೂ, ಶಾಸ್ತ್ರಿ ಹಾಗೂ ಹುತಾತ್ಮ ಭಗತ್‌ ಸಿಂಗ್‌ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಹೋರಾಟ ನಡೆಸಿದ್ದಾರೆ. ಇದು ಬಿಜೆಪಿಯ ದುರಹಂಕಾರದ ನೂರು ದಿನಗಳಾಗಿವೆ’ ಎಂದಿದ್ದಾರೆ.

ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕು ಎಂದು ಕಾಂಗ್ರೆಸ್‌ ವಕ್ತಾರ ಪವನ್‌ ಖೇರ ಒತ್ತಾಯಿಸಿದ್ದಾರೆ.

ಇದನ್ನೂ ಓದಿ... ಕೇಂದ್ರ ಸರ್ಕಾರದಿಂದ ರೈತರ ಮೇಲೆ ದೌರ್ಜನ್ಯ: ರಾಹುಲ್ ಗಾಂಧಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು