ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ: ರಾಹುಲ್‌ ಮನವೊಲಿಕೆಗೆ ಕಸರತ್ತು

ಪಕ್ಷ ಬಯಸಿದರೆ ಸ್ಪರ್ಧೆ: ಅಶೋಕ್‌ ಗೆಹಲೋತ್‌
Last Updated 21 ಸೆಪ್ಟೆಂಬರ್ 2022, 20:06 IST
ಅಕ್ಷರ ಗಾತ್ರ

ನವದೆಹಲಿ:‘ಪಕ್ಷ ಬಯಸಿದರೆ ಮಾತ್ರ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸುತ್ತೇನೆ’ ಎಂದಿರುವ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹಲೋತ್‌, ‘ಪಕ್ಷ ನೀಡುವ ಯಾವುದೇ ಜವಾಬ್ದಾರಿಯನ್ನು ಸಮರ್ಥವಾಗಿ ನಿಬಾಯಿಸುತ್ತೇನೆ’ ಎಂದು ಬುಧವಾರ ಹೇಳಿದ್ದಾರೆ.

ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ದೆಹಲಿಯಲ್ಲಿ ಭೇಟಿಯಾದ ಗೆಹಲೋತ್‌ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಗೆ ಸಂಬಂಧಿಸಿದಂತೆ ಕೆಲ ಕಾಲ ಮಾತುಕತೆ ನಡೆಸಿದ್ದಾರೆ. ಅವರು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಕೊಚ್ಚಿಯಲ್ಲಿ ಗುರುವಾರ ಭೇಟಿ ಮಾಡಲಿದ್ದಾರೆ. ‘ಪಕ್ಷದ ಅಧ್ಯಕ್ಷ ಸ್ಥಾನ ಅಲಂಕರಿಸುವಂತೆ ರಾಹುಲ್‌ ಅವರನ್ನು ಮನವೊಲಿಸಲು ಕೊನೆಯ ಪ್ರಯತ್ನ ಮಾಡುತ್ತೇನೆ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು. ‘ಕಾಂಗ್ರೆಸ್‌ ಅನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ನಿರ್ಧಾರ ತೆಗೆದುಕೊಳ್ಳುತ್ತೇನೆ’ ಎಂದು ಹೇಳಿದರು.

‘ಪಕ್ಷ ಮತ್ತು ಹೈಕಮಾಂಡ್‌ ನನಗೆ ಎಲ್ಲವನ್ನೂ ನೀಡಿದೆ. 40– 50 ವರ್ಷಗಳಿಂದ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದೇನೆ. ನನಗೆ ಯಾವುದೇ ಹುದ್ದೆ ಮುಖ್ಯವಲ್ಲ. ಪಕ್ಷ ನೀಡುವ ಜವಾಬ್ದಾರಿಯೇ ಮುಖ್ಯ. ಅದನ್ನು ಸಮರ್ಥವಾಗಿ ನಿಬಾಯಿಸುತ್ತೇನೆ’ ಎಂದು ಅವರು ಪುನರುಚ್ಚರಿಸಿದರು.

‘ಗಾಂಧಿ ಕುಟುಂಬದ ಜತೆಗೆ ದೇಶದ ಕಾಂಗ್ರೆಸ್‌ ಕಾರ್ಯಕರ್ತರು ನನ್ನ ಮೇಲೆ ನಂಬಿಕೆ, ವಿಶ್ವಾಸ ಹೊಂದಿದ್ದಾರೆ’ ಎಂದು ಅವರು ಹೇಳಿದರು.

‘ಹೀಗಾಗಿಯೇ ಅವರು ನಾಮಪತ್ರ ಸಲ್ಲಿಸುವಂತೆ ಸೂಚಿಸಿದರೆ ನಾನು ನಿರಾಕರಿಸಲಾರೆ... ಈ ಕುರಿತು ಆಪ್ತರೊಂದಿಗೆ ಮಾತುಕತೆ ನಡೆಸುತ್ತೇನೆ. ಸದ್ಯ ರಾಜಸ್ಥಾನದ ಮುಖ್ಯಮಂತ್ರಿ ಸ್ಥಾನದ ಜವಾಬ್ದಾರಿಯನ್ನು ನನಗೆ ನೀಡಲಾಗಿದ್ದು, ಅದನ್ನು ನಿರ್ವಹಿಸುತ್ತಿದ್ದೇನೆ, ಮತ್ತು ಮುಂದುವರಿಸುತ್ತೇನೆ’ ಎಂದು ಅವರು ತಿಳಿಸಿದರು.

ಏಕ ಕಾಲದಲ್ಲಿ ಮುಖ್ಯಮಂತ್ರಿ ಹುದ್ದೆಯ ಜತೆಗೆ ಪಕ್ಷದ ಅಧ್ಯಕ್ಷ ಹುದ್ದೆಯನ್ನು ಅಲಂಕರಿಸಲು ಪಕ್ಷದ ನಿಯಮಗಳು ಅವಕಾಶ ಕಲ್ಪಿಸುತ್ತವೆಯಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಗೆಹಲೋತ್‌, ‘ಹೈಕಮಾಂಡ್‌ ನಾಮನಿರ್ದೇಶನ ಮಾಡಿದ ಸಂದರ್ಭದಲ್ಲಿ ಅವು ಅನ್ವಯಿಸುತ್ತದೆ. ಆದರೆ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಮುಕ್ತವಾದದ್ದಾಗಿದ್ದು, ಪ್ರದೇಶ ಕಾಂಗ್ರೆಸ್‌ ಸಮಿತಿಗಳಲ್ಲಿನ ಅರ್ಹ 9,000 ಪ್ರತಿನಿಧಿಗಳ ಪೈಕಿ ಯಾರಾದರೂ ಸ್ಪರ್ಧಿಸಿ ಆಯ್ಕೆಯಾಗಬಹುದು. ಅವರು ಸಂಸದರು, ಶಾಸಕರು ಅಥವಾ ಸಚಿವರಾಗಿರಬಹುದು’ ಎಂದರು.

‘ನಾನು ಎಲ್ಲಿ ಉಳಿಯುತ್ತೇನೆ ಎಂಬುದನ್ನು ಸಮಯವೇ ನಿರ್ಧರಿಸುತ್ತದೆ. ಪಕ್ಷಕ್ಕೆ ನನ್ನಿಂದ ಎಲ್ಲಿ ಲಾಭವಾಗುತ್ತದೆಯೋ ಅಲ್ಲಿ ಉಳಿಯಲು ಬಯಸುತ್ತೇನೆ. ಈ ನಿಲುವಿನಿಂದ ಹಿಂದೆ ಸರಿಯುವುದಿಲ್ಲ’ಎಂದು ಅವರು ಪ್ರತಿಪಾದಿಸಿದರು.

ಈ ಮಧ್ಯೆ ರಾಹುಲ್‌ ಗಾಂಧಿ ಅವರನ್ನೇ ಅಧ್ಯಕ್ಷ ಸ್ಥಾನಕ್ಕೆ ಪರಿಗಣಿಸಬೇಕು ಎಂದು ಆಗ್ರಹಿಸಿ ತೆಲಂಗಾಣ ಮತ್ತು ಪಂಜಾಬ್‌ ಪ್ರದೇಶ ಕಾಂಗ್ರೆಸ್‌ ಸಮಿತಿ ಬುಧವಾರ ನಿರ್ಣಯ ಅಂಗೀಕರಿಸಿತು.

ಮಿಸ್ತ್ರಿ ಭೇಟಿಯಾದ ತರೂರ್‌: ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧತೆ ನಡೆಸಿರುವ ಹಿರಿಯ ಕಾಂಗ್ರೆಸ್‌ ನಾಯಕ, ಸಂಸದ ಶಶಿ ತರೂರ್‌ ಅವರನ್ನು ಬುಧವಾರ ಪಕ್ಷದ ಚುನಾವಣಾ ಸಮಿತಿ ಅಧ್ಯಕ್ಷ ಮಧುಸೂದನ ಮಿಸ್ತ್ರಿ ಅವರನ್ನು ಭೇಟಿಯಾಗಿ, ನಾಮಪತ್ರ ಸಲ್ಲಿಕೆಯ ಪ್ರಕ್ರಿಯೆ ಕುರಿತು ಮಾಹಿತಿ ಪಡೆದರು.

‘ಸ್ಪರ್ಧೆಗೆ ಸೋನಿಯಾ, ರಾಹುಲ್‌ ಅನುಮತಿ ಅಗತ್ಯವಿಲ್ಲ’

ಕೊಚ್ಚಿ: ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಯಲ್ಲಿ ಸ್ಪರ್ಧಿಸಲು ಸೋನಿಯಾ ಗಾಂಧಿ ಅಥವಾ ರಾಹುಲ್‌ ಗಾಂಧಿ ಅವರ ಅನುಮತಿ ಅಗತ್ಯವಿಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಬುಧವಾರ ಹೇಳಿದರು.‘ಭಾರತ್‌ ಜೋಡೊ ಯಾತ್ರಾ’ದ ವಿಶ್ರಾಂತಿ ಸಮಯದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಪ್ರದೇಶ ಕಾಂಗ್ರೆಸ್‌ ಸಮಿತಿಯ 10 ಪ್ರತಿನಿಧಿಗಳ ಬೆಂಬಲ ಇರುವ ಯಾರಾದರೂ ಚುನಾವಣೆಯಲ್ಲಿ ಸ್ಪರ್ಧಿಸಬಹುದು’ ಎಂದರು.

ಇಂದು ಅಧಿಸೂಚನೆ

ಕಾಂಗ್ರೆಸ್‌ನ ಕೇಂದ್ರೀಯ ಚುನಾವಣಾ ಸಮಿತಿಯು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಗೆ ಗುರುವಾರ ಅಧಿಸೂಚನೆ ಹೊರಡಿಸಲಿದೆ. ಇದೇ 24ರಿಂದ 30ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿರಲಿದೆ.ನಾಮಪತ್ರಗಳ ಪರಿಶೀಲನಾ ಕಾರ್ಯ ಅಕ್ಟೋಬರ್‌ 1ರಂದು ನಡೆಯಲಿದ್ದು, ನಾಮಪತ್ರ ವಾಪಸ್‌ ಪಡೆಯಲು ಅಕ್ಟೋಬರ್‌ 8ರವರೆಗೆ ಅವಕಾಶವಿರುತ್ತದೆ. ಒಬ್ಬರಿಗಿಂತ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದರೆ ಅಕ್ಟೋಬರ್‌ 17ರಂದು ಮತದಾನ ನಡೆಯಲಿದ್ದು, ಅಕ್ಟೋಬರ್‌ 19ರಂದು ಮತ ಎಣಿಕೆ ಮತ್ತು ಫಲಿತಾಂಶ ಪ್ರಕಟವಾಗಲಿದೆ.

‘ಗೆಹಲೋತ್, ತರೂರ್– ರಾಹುಲ್ ಕೈಗೊಂಬೆಗಳು’

ನವದೆಹಲಿ: ‘ಅಶೋಕ್ ಗೆಹಲೋತ್ ಅಥವಾ ಶಶಿ ತರೂರ್ ಇವರಲ್ಲಿ ಯಾರೇ ಕಾಂಗ್ರೆಸ್‌ನ ಅಧ್ಯಕ್ಷರಾಗಲಿ, ಅವರು ರಾಹುಲ್ ಗಾಂಧಿ ಅವರ ಕೈಗೊಂಬೆಗಳಾಗಿಯೇ ಇರುತ್ತಾರೆ’ ಎಂದು ಬಿಜೆಪಿ ವ್ಯಂಗ್ಯಮಾಡಿದೆ.

ಸುದ್ದಿಗಾರರೊಂದಿಗೆ ಬುಧವಾರ ಇಲ್ಲಿ ಮಾತನಾಡಿದ ಪಕ್ಷದ ರಾಷ್ಟ್ರೀಯ ವಕ್ತಾರ ಟಾಮ್ ವಡಕ್ಕನ್,‘ಎರಡು ದಶಕಗಳ ಬಳಿಕ ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ಹುದ್ದೆಗೆ ಸ್ಪರ್ಧೆಯನ್ನು ನೋಡುವಂತಾಗಿದೆ.ಒಂದು ವೇಳೆ ರಾಹುಲ್ ಪಕ್ಷದ ಸಾರಥ್ಯ ವಹಿಸಲು ಒಪ್ಪದಿದ್ದರೆ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಅವರು ಸ್ಪರ್ಧಿಸುವಂತೆ ಸೂಚಿಸಲಾಗಿದೆ ಅಷ್ಟೇ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT